✍️ ಅರಫಾ ಮಂಚಿ
ಯಮನ್ ರಾಜಧಾನಿ ಸನ್ಆ ವಿಮಾನ ನಿಲ್ದಾಣದ ಮೇಲೆ ಕಳೆದ ಜುಲೈಯಲ್ಲಿ ನಡೆದ ದಾಳಿ ಹೊಸ ಘರ್ಷಣೆಯ ಆರಂಭಕ್ಕೆ ಕಾರಣವಾಗಿದೆ. ಆ ನಂತರವೇ ಸೌದಿ ಅರೇಬಿಯ ಮತ್ತು ಹೂತಿಗಳ ನಡುವೆ ಹಿಂದಿನಿಂದಲೂ ಇದ್ದ ತಿಕ್ಕಾಟ ತೀವ್ರ ಸ್ವರೂಪ ಪಡೆದಿದೆ. ಸೌದಿ ಅರೇಬಿಯವೇ ವಿಮಾನ ನಿಲ್ದಾಣಕ್ಕೆ ದಾಳಿ ಮಾಡಿದೆ ಎಂದು ಹೂತಿಗಳು ಆರೋಪಿಸಿದರು. ಸನ್ಆದ ಏರ್ಪೋರ್ಟಿಗೆ ನಾವೇ ದಾಳಿ ಮಾಡಿದ್ದೆಂದು ಯೆಮನ್ನ ಅಲ್ ಆಲಿಮಿ ಸರಕಾರ ಹೇಳಿತ್ತು.
ಹೂತಿಗಳ ಮೇಲೆ ಸೌದಿ ನೇರ ದಾಳಿ ಮಾಡಿದರೂ ಯಮನ್ನ ರಶೀದ್ ಅಲ್ ಆಲಿಮಿ ಸರಕಾರ ದಾಳಿ ಮಾಡಿದರೂ ಎರಡೂ ಒಂದೇ ಆಗಿರುತ್ತದೆ. ಯಾಕೆಂದರೆ ಸೌದಿ ಕೊಟ್ಟು ಕಳುಹಿಸಿದ ಆಯುಧಗಳು, ಯುದ್ಧ ವಿಮಾನಗಳು ಯಮನ್ ಸರಕಾರದ ಬಳಿ ಇದೆ. ಈ ಅಲ್ ಮಾಲಿಕಿಗಳು ಅದನ್ನೇ ಹೂತಿಗಳ ವಿರುದ್ಧ ಬಳಸುವುದು. ಈಗ ಸಂಘರ್ಷ ಉಲ್ಬಣಗೊಂಡಿರುವುದಕ್ಕೆ ಬಲವಾದ ಇನ್ನೊಂದು ಕಾರಣವೂ ಇದೆ. ಕಳೆದ 12 ವರ್ಷಗಳಿಂದ ಹೂತಿಗಳು ಅಧೀನಗೊಳಿಸಿಟ್ಟ ಸ್ಥಳದಿಂದ ತೆರವುಗೊಳಿಸುತ್ತೇವೆ ಎಂದು ಆಲಿಮಿಗಳು ಹೂತಿಗಳಿಗೆ ಧಮಕಿ ಹಾಕಿತು. ಇದರ ಬೆನ್ನಿಗೆ ಇಡೀ ಸನ್ಆದ ಮೇಲೆ ಬಾಂಬಿಂಗ್ ಮಾಡುವುದಾಗಿ ಸೌದಿ ಅರೇಬಿಯ ಘೋಷಿಸಿತು. ಹೂತಿಗಳು ರೊಚ್ಚಿಗೇಳುವುದಕ್ಕೆ ಇನ್ನೇನು ಬೇಕು? ಹೂತಿಗಳು ಅಥವಾ ಅನ್ಸಾರುಲ್ಲ ಇರಾನಿನ ಪ್ರಾಕ್ಸಿ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ ಸಹಜವಾಗಿ ಈ ಘರ್ಷಣೆಯ ಹಿಂದೆ ಇರಾನ್ ಇದ್ದೇ ಇದೆ. ಆದರೆ ಈ ಘರ್ಷಣೆ ಮಧ್ಯಪ್ರಾಚ್ಯವನ್ನು ಪಾತಾಳದಂಚಿಗೆ ತಂದಿಟ್ಟದ್ದು.
ಸೌದಿಯ ಏಟಿಗೆ ಹೂತಿಗಳ ಎದಿರೇಟು
ಹೂತಿಗಳು ಇರಾನಿನ ಬೆಂಬಲದೊಂದಿಗೆ ನಿರಂತರವಾಗಿ ಸೌದಿ ಅರೇಬಿಯಕ್ಕೆ ಅಪಾಯ ಒಡ್ಡುತ್ತಿದ್ದಾರೆ. ಸೌದಿಯ ಜಿಸಾನ್ನಿಂದ ಹಿಡಿದು ಕೆಂಪು ಸಮುದ್ರದ ಕರಾವಳಿ ಪ್ರದೇಶದ ಭಾಗದವರೆಗೆ ಹೂತಿಗಳ ಬೆದರಿಕೆ ವ್ಯಾಪಿಸಿದೆ. ಹೂತಿಗಳ ವಿರುದ್ಧ ಸೌದಿ ಮಾಡಿದರೂ ಏನು ಮಾಡಬಹುದು? ಇಸ್ರೇಲ್ ಗಾಝದ ಮೇಲೆ ಮಾಡಿದಂತೆ ಸನ್ಆಕ್ಕೆ ಆಕಾಶದಿಂದ ಬಾಂಬಿಂಗ್. ಸೌದಿ ಬಳಿ ಅಂತಹ ವ್ಯೋಮ ಶಕ್ತಿ ಇದೆ. ಮಧ್ಯಪ್ರಾಚ್ಯದಲ್ಲಿ ಅತ್ಯಂತ ಬಲಿಷ್ಠ ವ್ಯೋಮ ಶಕ್ತಿ ಹೊಂದಿದ ದೇಶ ಸೌದಿ ಅರೇಬಿಯವಾಗಿದೆ. ಆದರೆ 2014ರಿಂದ ಹೂತಿಗಳು ಸುಧಾರಿತ ತಂತ್ರಜ್ಞಾನ ಪಡೆದುಕೊಂಡಿದ್ದಾರೆ. ಅವರ ಬಳಿ ಈಗ ಬ್ಯಾಲಸ್ಟಿಕ್ ಕ್ಷಿಪಣಿಗಳಿವೆ (ಇಸ್ರೇಲ್ ಮೇಲೆ ಹಾರಿಬಿಟ್ಟದ್ದನ್ನು ಇಲ್ಲಿ ನೆನಪಿಸಬಹುದು). ಆಕ್ರಮಣಕಾರಿ ಮತ್ತು ಆತ್ಮಹತ್ಯಾ ಡ್ರೋನ್ಗಳಿವೆ. ಸ್ಫೋಟಕ ತುಂಬಿದ ಹೈ ಸ್ಪೀಡ್ ಬೋಟ್ಗಳಿವೆ. ಇವೆಲ್ಲಕ್ಕೂ ಇರಾನಿನ ಸಹಾಯ ನಿರ್ಣಾಯಕವಾದದ್ದು. ಇಂತಹ ಅಸ್ತ್ರಗಳು ಹಿಝ್ಬುಲ್ಲಾದ ಬಳಿಯೂ ಇದೆ. ಅದು ಕೂಡ ಇರಾನಿ ಪ್ರಾಕ್ಸಿ. ರಶೀದ್ ಅಲ್ ಮಾಲಿಕಿ ಸರಕಾರದ ವಕ್ತಾರ ಮೇಜರ್ ಜನರಲ್ ಅಲ್ ಮಾಲಿಕಿ ಹೂತಿಗಳ ಶಕ್ತಿ ವೃದ್ಧಿಸಿದ್ದನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಕಳೆದ ಸೆಪ್ಟಂಬರ್ನಲ್ಲಿಯೇ ಹೂತಿಗಳು ಕೆಂಪು ಸಮುದ್ರದ ಕರಾವಳಿ ಮತ್ತು ಬಾಬುಲ್ ಮಂದಬ್ ಮೇಲೆ ಹಿಡಿತ ಸಾಧಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ವಾಲ್ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ ಇರಾನಿನ ಅಧಿಕಾರಿಗಳು ಹೂತಿಗಳಿಗಾಗಿ ಬೃಹತ್ ಏರ್ ವಿಮಾನಗಳು, ಐಆರ್ಜಿಸಿಯ ಅರೆಸೈನಿಕ ಅಧಿಕಾರಿಗಳು, ಡ್ರೋನ್ ಭಾಗಗಳು ಮತ್ತು ಕ್ಷಿಪಣಿ ಮಾರ್ಗದರ್ಶನ ವ್ಯವಸ್ಥೆ, ಪ್ರಭಾವಪೂರ್ಣ ಡಿಟೊನೇಟರ್ಗಳನ್ನು ಸನ್ಆಕ್ಕೆ ಸಾಗಿಸಿದ್ದಾರೆ. ಐಆರ್ಜಿಸಿ ಅಂದರೆ ಇರಾನಿನ ಸೈನ್ಯ. ಹುರ್ಮುಝ್ ಬಂದ್ ಆಗಿದೆ. ಇದರ ಜೊತೆಗೆ ಹೂತಿಗಳು ಕೂಡ ಈಗ ಬಾಬುಲ್ ಮಂದಬ್ ಅನ್ನು ಬಂದ್ ಮಾಡಿದರೆ ಸೌದಿಯ ಕತೆ ಮುಗಿಯಿತು. ಅದು ತನ್ನ ಆರ್ಥಿಕತೆಗೆ ಈ ಎರಡು ಸಮುದ್ರ ದಾರಿಗಳನ್ನು ಅವಲಂಬಿಸಿದೆ. ಮಾತ್ರ ಅಲ್ಲ ಇಡೀ ಮಧ್ಯಪ್ರಾಚ್ಯದ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಕ್ಕೆ ಮೈನ್ ಗೇಟ್ ಹುರ್ಮುಝ್, ಬಾಬುಲ್ ಮಂದಬ್ ಆಗಿದೆ.
ಬೆಂಜಮಿನ್ ನೆತನ್ಯಾಹು ನಗುತ್ತಿದ್ದಾರೆ
ಮಧ್ಯಪ್ರಾಚ್ಯದಲ್ಲಿ ಹೂತಿ-ಸೌದಿ ಜಗಳ ಮತ್ತು ಇದರಿಂದ ಗಲ್ಫ್ನ ಆರ್ಥಿಕ ಪವರ್ ಕುಸಿಯುತ್ತಿರುವುದು ಇಸ್ರೇಲ್ಗೆ ಬಹಳ ಮಹತ್ವದ್ದು. ಒಂದರ್ಥದಲ್ಲಿ ಸನ್ಆದ ವಿಮಾನ ನಿಲ್ದಾಣದ ಮೇಲೆ ಬಾಂಬಿಂಗ್ನ ಹಿಂದೆ ಇಸ್ರೇಲಿನ ಸಂಚು ಇದ್ದರೂ ಇರಬಹುದು ಎಂದು ಹೇಳುವವರು ಇದ್ದಾರೆ. ಆದರೆ ಈ ಮಾತಿಗೆ ಆಧಾರ ಬಹಿರಂಗವಾಗಿಲ್ಲ. ಇತ್ತೀಚೆಗೆ ಇಸ್ರೇಲ್ನ ಸೆನೆಟ್ನಲ್ಲಿ ಪ್ರಧಾನಿ ನೆತನ್ಯಾಹು ಇಸ್ರೇಲಿನ ರಕ್ಷಣಾ ಯೋಜನೆಯ ಕುರಿತಂತೆ ಮಾತಾಡುತ್ತಾ ಭಾರತ ಸಹಿತ ಪ್ರಾದೇಶಿಕ ಮತ್ತು ದೂರದೇಶಗಳೊಂದಿಗೆ ಸಖ್ಯ ಮಾಡಿಕೊಳ್ಳಬೇಕಾಗಿದೆ ಎಂದು ಒತ್ತಿ ಹೇಳಿದ್ದಾರೆ. ಸೌದಿ, ಯುಎಇ, ಕುವೈತ್, ಖತರ್, ಬಹ್ರೈನ್ ಮುಂತಾದ ಗಲ್ಫ್ ಕಂಟ್ರಿಗಳು ಇಸ್ರೇಲಿನ ನೆರೆಯ ಪ್ರಾದೇಶಿಕ ದೇಶಗಳು. ದೂರದ ದೇಶ ಭಾರತ. ಅರಬರ ನಡುವೆ ಜಗಳ ತಂದಿಟ್ಟರೆ ಅದರಿಂದ ಇಸ್ರೇಲ್ಗೆ ಮುಖ್ಯವಾಗಿ ನೆತನ್ಯಾಹುಗೆ ಸುನ್ನಿ ಮುಸ್ಲಿಂ ವಿಭಾಗವನ್ನು ಶಿಯಾ ಮುಸ್ಲಿಂ ವಿಭಾಗದ ಮೇಲೆ ಎತ್ತಿಕಟ್ಟುವುದು ಸುಲಭ ಆಗುತ್ತದೆ. ಇದರಿಂದ ಇರಾನ್ ದುರ್ಬಲವಾಗಿ ತಮಗೆ ಲಾಭ ಆಗುತ್ತದೆ ಎಂದು ನೆತನ್ಯಾಹು ಲೆಕ್ಕಾಚಾರ. ಸೌದಿ ಅರೇಬಿಯವನ್ನು ಇನ್ನಷ್ಟು ತನ್ನ ಹತ್ತಿರಕ್ಕೆ ತರಬಹುದು. ಇಸ್ರೇಲ್ ದೇಶ ರಕ್ಷಿಸಲು ತಾನು ಸಮರ್ಥ ಎಂದು ಸ್ವಂತ ಪ್ರಜೆಗಳಿಗೆ ನಂಬಿಸುವುದಕ್ಕೆ ಇದು ಉಪಯುಕ್ತ. ತನ್ನ ಈ ಪ್ಲಾನ್ಗೆ ತಕ್ಕಂತೆ ನೆತನ್ಯಾಹು ಸೌದಿ ಹೂತಿ ಸಂಘರ್ಷದ ಒಳಕ್ಕೆ ಅಮೆರಿಕವನ್ನು ನುಗ್ಗಿಸಿದ್ದಾರೆ. ಇಂಟಲಿಜೆನ್ಸ್ ನೆರವನ್ನು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ರಷ್ಯಾ, ಚೀನಗಳ ಪ್ರಯತ್ನದಿಂದ ಇರಾನಿಗೆ ಹತ್ತಿರವಾಗುತ್ತಿದ್ದ ಸೌದಿಯನ್ನು ದೂರವೇ ಇರುವಂತೆ ನೋಡಿಕೊಳ್ಳಲು ಹೂತಿ ಸೌದಿ ಘರ್ಷಣೆ ಬಹುಮುಖ್ಯವಾಗಿದೆ. ತಮ್ಮ ಈ ಪ್ಲಾನ್ನಲ್ಲಿ ನೆತನ್ಯಾಹು ಸಫಲರಾಗುತ್ತಿರುವಂತೆ ಕಂಡುಬರುತ್ತಿದೆ. ಆದ್ದರಿಂದ ಅವರು ಪಾತಾಳದಂಚಿಗೆ ಸಾಗುತ್ತಿರುವ ಗಲ್ಫ್ ಆರ್ಥಿಕತೆ ಮತ್ತು ಆಂತರಿಕ ಯುದ್ಧಕ್ಕೆ ನಗುವುದು. ಗಲ್ಫ್ ಪ್ರದೇಶದಲ್ಲಿ ಇರಾನ್ ಹೊರತಾದ ದೇಶಗಳು ಇಸ್ರೇಲಿನೊಂದಿಗಿನ ಗುಪ್ತ ಸಂಬಂಧ ಬಹಳ ಹಿಂದಿನಿಂದಲೂ ಇದ್ದೇ ಇದೆ. ಇನ್ನು ಯುಎಇ, ಸೌದಿ, ಟರ್ಕಿ, ಬಹ್ರೈನ್ ಎಲ್ಲರೂ ಈ ಸಂಬಂಧ ಬಹಿರಂಗವಾಗಿ ಹೇಳುತ್ತಾ ಇಸ್ರೇಲಿನೊಂದಿಗೆ ಅವರು ಜಂಟಿ ಕಾರ್ಯಕ್ರಮ ರೂಪಿಸಬಹುದು. ನೆತನ್ಯಾಹುಗೆ ಇವೆಲ್ಲ ಸಂತೋಷ ತರಿಸುವ ವಿಚಾರ ಆಗುತ್ತದೆ.
ಶಕ್ತಿ ಕಳಕೊಂಡ ಅಮೆರಿಕ
ಡೊನಾಲ್ಡ್ ಟ್ರಂಪ್ ಅಮೆರಿಕದ ಚುನಾವಣಾ ಪ್ರಚಾರ ಸಭೆಯಲ್ಲಿ ಇರಾನಿನಲ್ಲಿ ನಾವು ನಾಯಕರಿಲ್ಲದ ಸ್ಥಿತಿ ನಿರ್ಮಿಸಿದ್ದು ಸ್ವಲ್ಪ ಅತಿಯಾಯಿತು; ಚರ್ಚೆಗೆ ಈಗ ಅವರಲ್ಲಿ ನಾಯಕರನ್ನು ಹುಡುಕಬೇಕಾದ ಪರಿಸ್ಥಿತಿ ಇದೆ ಅಂತ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಏನೇ ಹೇಳಬಹುದು. ಅಲ್ಲಿ ನಾಯಕರಿಲ್ಲದಿದ್ದರೆ ಇರಾನ್ ಇಷ್ಟರಲ್ಲೇ ಚಿಂದಿ ಚೂರಾಗುತ್ತಿತ್ತು. ಇಸ್ರೇಲ್ ಮತ್ತು ಅಮೆರಿಕ ಅದರ ಶವಗಳನ್ನು ಸಮುದ್ರಕ್ಕೆ ಎಸೆಯುತ್ತಿತ್ತು. ಇರಾನ್ ಈಗಲೂ ಅಮೆರಿಕ ಮತ್ತು ಇಸ್ರೇಲ್ಗೆ ಸೆಡ್ಡು ಹೊಡೆದೇ ನಿಂತಿದೆ. ಬಲಿಷ್ಠವಾಗಿದೆ.
ಸೂಚ್ಯವಾಗಿ ಹೇಳುವುದಿದ್ದರೆ ಅಮೆರಿಕಕ್ಕೆ ತನ್ನ ಗಲ್ಫ್ನ ಪ್ರಾಕ್ಸಿ ದೇಶಗಳ ಮೇಲೆ ಇರಾನಿನ ದಾಳಿಯನ್ನು ತಡೆಯಲು ಆಗಿಲ್ಲ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧದ ವೇಳೆ ಇರಾನ್ ಅಮೆರಿಕಕ್ಕೆ ದೊಡ್ಡ ಪ್ರಹಾರ ಕೊಟ್ಟಿತ್ತು. ಯುಎಇ, ಕುವೈಟ್, ಬಹ್ರೈನ್, ಕತರ್ನ ಅಮೆರಿಕದ ಬೇಸ್ಗಳ ಮೇಲೆ ಇರಾನ್ ನಿಖರವಾಗಿ ಕ್ಷಿಪಣಿ ದಾಳಿ ನಡೆಸಿದೆ. ಇಷ್ಟೇ ಅಲ್ಲ ತೈಲ, ಇಂಧನ, ಹಡಗು ಸಂಚಾರ ವ್ಯವಸ್ಥೆಯ ಮೇಲೆ ಯಶಸ್ವಿ ಕ್ಷಿಪಣಿ, ಡ್ರೋಣ್ ದಾಳಿ ನಡೆಸಿತು. ಇವೆಲ್ಲ ಹೇಳುವುದೇನು? ಮಧ್ಯಪ್ರಾಚ್ಯದಲ್ಲಿ ಅಮೆರಿಕ ಶಕ್ತಿ ಕಳಕೊಂಡಿದೆ. ಇರಾನ್ ಶಕ್ತಿ ಯಥಾಸ್ಥಿತಿಯಲ್ಲಿದೆ ಎಂದಲ್ಲವೇ? ಅಮೆರಿಕವನ್ನು ಅವಲಂಬಿಸಿದ ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನು ತಡೆಯಲು ಅದರಿಂದ ಆಗಿಲ್ಲ. ಇರಾನಿನೊಂದಿಗೆ ಯುದ್ಧಕ್ಕಿಳಿದ ಮೇಲೆ ಜಗತ್ತಿನ ಮಹಾ ಆಯುಧ ಶಕ್ತಿ ಅಮೆರಿಕ ಒಮ್ಮೆ ಯುದ್ಧ ನಿಲ್ಲಲಿ ಎಂದು ಪಾಕಿಸ್ತಾನಕ್ಕೆ ಮಧ್ಯಸ್ಥಿಕೆ ವಹಿಸಲು ಸಲಾಂ ಹಾಕುತ್ತಿತ್ತು. ಒತ್ತಡ ಹಾಕಿ ಯುದ್ಧವಿರಾಮ ಮಾಡಿಸುವ ಸ್ಥಿತಿಗೆ ಅಮೆರಿಕ ಬಂದು ನಿಂತಿತ್ತು. ಇವೆಲ್ಲ ಜಗತ್ತು ಕಂಡಿದೆ. ಇವೆಲ್ಲವೂ ಇರಾನಿನ ಶಕ್ತಿಯನ್ನೇ ತೋರಿಸುತ್ತದೆ.
ಮಕ್ಕಾದ ಮೇಲೆ ದಾಳಿ ನಡೆಸಿದ ಹೂತಿಗಳು
ಪಾಕಿಸ್ತಾನ, ಟರ್ಕಿ ಮತ್ತು ಸೌದಿಯ ತ್ರಿಕೋನ ಸಖ್ಯ ಹೂತಿಗಳು ಮಕ್ಕಾದ ಮೇಲೆ ದಾಳಿ ನಡೆದ ನಂತರ ಹೆಚ್ಚು ಗಟ್ಟಿಯಾಗಿದೆ. ಹೌದು. ಮಕ್ಕಾ ಮುಸ್ಲಿಮರ ಪವಿತ್ರ ಸ್ಥಳ. ಹೂತಿಗಳು ಮಕ್ಕಾ ಪ್ರಾಂತ್ಯದ ಮೇಲೆ ದಾಳಿ ಮಾಡಿದ್ದರಿಂದ ರಕ್ಷಣೆ ಎಂಬುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈಗ ಮಕ್ಕಾ ಪ್ರಾಂತ್ಯ ಅಂದರೆ; ಪವಿತ್ರ ನಗರ ಮಕ್ಕಾ, ಬಂದರು ನಗರ ಜೆದ್ದಾ ಮತ್ತು ತಾಯಿಫ್. ಇಲ್ಲಿಗೆ ಹೂತಿಗಳು ಲಾಂಗ್ ರೇಂಜ್ ಬ್ಯಾಲಸ್ಟಿಕ್ ಮಿಸೈಲ್ಗಳು ಮತ್ತು ಡ್ರೋನ್ ದಾಳಿ ಮಾಡಿದಾಗ ಮಕ್ಕಾ ತ್ರಿಕೋನ ಸಖ್ಯ ಅಂತಿಮ ರೂಪವನ್ನು ಪಡೆದುಕೊಂಡಿದೆ. ಮಕ್ಕಾದ ರಕ್ಷಣೆಯ ಉದ್ದೇಶದಿಂದ ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯ ಮಕ್ಕಾ ತ್ರಿಕೋಣ ಕರಾರು ಬಹಳ ತ್ವರಿತವಾಗಿ ಮಾಡಿಕೊಂಡರು. ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್, ಪಾಕಿಸ್ತಾನದಿಂದ ಪ್ರಧಾನಿ ಶಹಬಾಝ್ ಶರೀಫ್, ಮಿಲಿಟರಿ ಮುಖಂಡ ಆಸಿಮ್ ಮುನೀರ್ ತ್ವರಿತವಾಗಿ ರಿಯಾದ್ಗೆ ಹೋಗಿ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ಈ ಕರಾರಿನಲ್ಲಿ ಪಾಕಿಸ್ತಾನದಲ್ಲಿ ಕೋಲಾಹಲಕ್ಕೆ ಕಾರಣವಾದ ಒಂದು ಬಿಕ್ಕಟ್ಟು ಇತ್ತು. ಸೌದಿಗೆ ತಮ್ಮ ಪಾರ್ಲಿಮೆಂಟಿನ ಅನುಮತಿಯಿಲ್ಲದೆ ಸೈನ್ಯಾಧಿಕಾರಿ ಅಸೀಂ ಮುನೀರ್ ಸೈನಿಕರನ್ನು ಕಳುಹಿಸಿದ್ದು ಪಾಕಿಸ್ತಾನದಲ್ಲಿ ದೊಡ್ಡ ಕೋಲಾಹಲಕ್ಕೂ ಕಾರಣವಾಯಿತು. ಹಿಂದಿನ ಸರಕಾರದ ಅವಧಿಯಲ್ಲಿ ಹೂತಿಗಳ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂಬ ಪ್ರಸ್ತಾಪವನ್ನು ಪಾರ್ಲಿಮೆಂಟ್ ಅಂಗೀಕರಿಸಿತ್ತು. ವಿಪಕ್ಷಗಳು ಮತ್ತು ಪ್ರಜೆಗಳಲ್ಲಿ ಒಂದು ವಿಭಾಗ ಪಾಕಿಸ್ತಾನದ ಸೇನೆ ಕೈಗೊಂಡ ಹೊಸ ನಿರ್ಧಾರವನ್ನು ಮತ್ತು ಪಾರ್ಲಿಮೆಂಟಿನ ಕಡೆಗಣನೆಯನ್ನು ಪ್ರಶ್ನಿಸಿದ್ದಾರೆ. ಹೀಗೆ ಸೌದಿ ಮತ್ತು ಹೂತಿಗಳಿಂದಾಗಿ ಪಾಕಿಸ್ತಾನದ ರಾಜಕೀಯದಲ್ಲಿಯೂ ಅಲ್ಲೋಲ ಕಲ್ಲೋಲ!
ವಿಶ್ವಸಂಸ್ಥೆ ಲೆಕ್ಕ
ವಿಶ್ವಸಂಸ್ಥೆಯ ಲೆಕ್ಕದ ಪ್ರಕಾರ ಸೌದಿ – ಹೂತಿಗಳ ಗಲಾಟೆಯಲ್ಲಿ ಈವರೆಗೆ 37 ಲಕ್ಷದ 7 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 40% ಫೈಟಿಂಗ್, ಬಾಂಬಿಂಗ್, ಶೆಲ್ಲಿಂಗ್ನಿಂದಾಗಿದೆ. ಆದರೆ ಶೇ. 60ರಷ್ಟು ಜನ ಹಸಿವಿನಿಂದಾಗಿ ಮರಣ ಹೊಂದಿದ್ದಾರೆ. ಇತ್ತ ಸೌದಿ ಅರೇಬಿಯದಿಂದ ಈ ಫೈಟ್ನಲ್ಲಿ ಸಾವಿರದಿಂದ ಮೂರು ಸಾವಿರ ಮಂದಿ ಸತ್ತಿರಬಹುದು. ಇವರಲ್ಲಿ 500 ಸೌದಿ ಪ್ರಜೆಗಳು. ಇದಲ್ಲದೆ ಯುಎಇಯ ನೂರು ಸೈನಿಕರು. ಸುಡಾನಿನ ಸಾವಿರದಿಂದ 4000 ಜೀವ ಅಪಾಯ ಆಗಿದೆ. ಈ ಸಾವಿಗೆ ನ್ಯಾಯ-ಅನ್ಯಾಯ ಖಂಡಿತ ಉತ್ತರಿಸಬೇಕಾಗುತ್ತದೆ. ಇನ್ನೊಂದು ರೀತಿಯಲ್ಲಿಯೂ ಯೋಚಿಸಬೇಕಾಗುತ್ತದೆ. ಬಹುತೇಕ ವಿದೇಶಿಯರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ದುಡಿಮೆಗೆ ಆಶ್ರಯಿಸುತ್ತಿದ್ದ ಗಲ್ಫ್ ದೇಶಗಳು. ಈಗ ಸಂಘರ್ಷವು ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೊಸ ಸಂಘರ್ಷದಲ್ಲಿ ಸೌದಿ ಜನತೆಗೆ ಮಾತ್ರವಲ್ಲ ಗಲ್ಫ್ ಅನಿವಾಸಿಗಳನ್ನು ಅವರ ಕುಟುಂಬವನ್ನು ಖಂಡಿತ ಕಾಡುತ್ತದೆ. ಹೂತಿ-ಸೌದಿ ಘರ್ಷಣೆ ಖಂಡಿತ ಮಧ್ಯಪ್ರಾಚ್ಯವನ್ನು ಮಾತ್ರವಲ್ಲ, ಜಗತ್ತಿನ ಬಡಜನರ ಬದುಕಿನ ಆಶ್ರಯ ಪಾತ್ರೆ ಪಾತಾಳಕ್ಕೆ ಕುಸಿಯುವಂತೆ ಮಾಡುತ್ತಿದೆ ಎಂದರೂ ತಪ್ಪಲ್ಲ. ಈ ಯುದ್ಧ ನಿಲ್ಲಲಿ. ಶಾಂತಿ ನೆಲಸಲಿ.












