“ಕೇವಲ ಮುಸ್ಲಿಂ ಸಮುದಾಯದ ಮನೆಗಳು ಮಾತ್ರ ಅಕ್ರಮವೇ?”- ಸರಕಾರವನ್ನು ಪ್ರಶ್ನಿಸಿದ ಸಂಸದ ಜಾವೇದ್

0
272

ಸನ್ಮಾರ್ಗ ವಾರ್ತೆ

ರಾಮ್ ನಗರ: ಉತ್ತರಾಖಂಡದ ರಾಮನಗರದಲ್ಲಿ ಮುಸ್ಲಿಮರ 86 ಮನೆಗಳನ್ನು ಕೆಡವಿದ ಘಟನೆಗೆ ಸಂಸದ ಜಾವೇದ್ ಮೊಹಮ್ಮದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ “ದೇಶಾದ್ಯಂತ ಕೇವಲ ಮುಸ್ಲಿಂ ಸಮುದಾಯದ ಮನೆಗಳು ಮಾತ್ರ ಅಕ್ರಮವೇ?” ಎಂದಿರುವ ಅವರು ಉತ್ತರಾಖಂಡ ಸರ್ಕಾರ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಕಾರಣ ನೀಡಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಬೃಹತ್ ತೆರವು ಕಾರ್ಯಾಚರಣೆ ನಡೆಸಿದ್ದು, ಪ್ರಮುಖವಾಗಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದ 86 ಮನೆಗಳನ್ನು ನೆಲಸಮಗೊಳಿಸಿವೆ. ಈ ಕಾರ್ಯಾಚರಣೆಗಾಗಿ 1,200ಕ್ಕೂ ಹೆಚ್ಚು ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಹಾಗೂ 28 ಜೆಸಿಬಿ/ಬುಲ್ಡೋಜರ್‌ಗಳನ್ನು ಬಳಸಲಾಗಿತ್ತು.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇತೃತ್ವದ ಸರ್ಕಾರವು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಅನಧಿಕೃತ ನಿರ್ಮಾಣಗಳು ಮತ್ತು ಧಾರ್ಮಿಕ ಸ್ಥಳಗಳ ಒತ್ತುವರಿಯನ್ನು “ಲ್ಯಾಂಡ್ ಜಿಹಾದ್” ಭಾಗ ಎಂದು ಕರೆದಿದೆ ಹಾಗೂ ರಾಜ್ಯದ ಜಾಗವನ್ನು ರಕ್ಷಿಸಲು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಇದೇ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಈ ಹಿಂದೆ ಕೂಡ ಹಲವು ಬಾರಿ ತೆರವು ಮತ್ತು ಒತ್ತುವರಿ ಕಾರ್ಯಾಚರಣೆಗಳನ್ನು ನಡೆಸಿತ್ತು ಎಂದು ವರದಿಗಳು ತಿಳಿಸಿವೆ.
ಮೊದಲು 83 ಮನೆಗಳನ್ನು ಕೆಡವಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ತೀರ್ಮಾನಿಸಿತ್ತು. ಎರಡನೇ ಹಂತದ ಕ್ರಮದ ಭಾಗವಾಗಿ ಅರಣ್ಯ ಇಲಾಖೆ 92 ಮಂದಿಗೆ ನೋಟಿಸ್ ನೀಡಿತ್ತು ಎಂದು ತೆರಾಯಿ ವೆಸ್ಟರ್ನ್ ಫಾರೆಸ್ಟ್ ಡಿವಿಷನ್ ಡಿಎಫ್‌ಒ ಪುನೀತ್ ಕುಮಾರ್ ತೋಮರ್ ತಿಳಿಸಿದ್ದಾರೆ.

ಇದೇ ಜಾಗದಲ್ಲಿ 2025 ಡಿಸೆಂಬರ್ 7ಕ್ಕೆ ಅರಣ್ಯ ಇಲಾಖೆ ಬುಲ್ಡೋಝಿಂಗ್ ಮಾಡಿದೆ. ಅಂದು 51 ಮನೆಗಳು ಮತ್ತು ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು. ರಾಮನಗರ ಮುನ್ಸಿಪಾಲಿಟಿ ಟ್ರೆಂಚಿಂಗ್ ಗ್ರೌಂಡ್‌ನ ಅಧೀನದಲ್ಲಿರುವ ಸುಮಾರು ಎರಡು ಎಕರೆ ಜಮೀನು ತೆರವುಗೊಳಿಸಲಾಗಿತ್ತು. ಇದರಿಂದ ಕೋಸಿ ನದಿ ತೀರದ ಮುಸ್ಲಿಮರು ವಾಸವಿರುವ ಒಂದು ಪ್ರದೇಶಕ್ಕೆ ಇದರಿಂದ ತೊಂದರೆಯಾಗಿದೆ. ಇದರೊಂದಿಗೆ ಸುಮಾರು 14 ಹೆಕ್ಟೇರ್ ಅರಣ್ಯ ಭೂಮಿ ತೆರವುಗೊಳಿಸಲಾಗಿದೆ.