ಸನ್ಮಾರ್ಗ ವಾರ್ತೆ
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಬೆಂಗಳೂರು ನಗರ, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ, ಹಾಗೂ ರಿಪ್ಪಲ್ (Ripple) ಸಂಸ್ಥೆಯ ಸಹಯೋಗದಲ್ಲಿ ‘STARTUP SPARK 2.0’ ಕಾರ್ಯಕ್ರಮವನ್ನು 2026ರ ನವೆಂಬರ್ 7ರಂದು ಬೆಂಗಳೂರಿನ ಆಜಾದ್ ಭವನದಲ್ಲಿ ಆಯೋಜಿಸಲಾಯಿತು.
ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಯುವ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ‘Elevate Minority ’ ಯೋಜನೆಯ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಇದರ ಜೊತೆಗೆ, ವಿವಿಧ ಸ್ಟಾರ್ಟ್ಅಪ್ ತಂಡಗಳಿಗೆ ಉದ್ಯಮಶೀಲತೆಯ ಹಾದಿಯಲ್ಲಿ ಎದುರಾಗುವ ಸವಾಲುಗಳು, ಏರಿಳಿತಗಳು ಹಾಗೂ ಅವುಗಳನ್ನು ತಾಳ್ಮೆ ಮತ್ತು ನಿರಂತರ ಪ್ರಯತ್ನದ ಮೂಲಕ ಎದುರಿಸುವ ಮನೋಭಾವವನ್ನು ಬೆಳೆಸುವ ಉದ್ದೇಶವನ್ನೂ ಕಾರ್ಯಕ್ರಮ ಹೊಂದಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀಮತಿ ಯಾಸ್ಮಿನ್ ಬೇಗಂ ಜಿ. ವಾಲಿಕರ್ ಮಾತನಾಡಿ, ಯುವಜನತೆ ಉದ್ಯಮಶೀಲತೆಯತ್ತ ಆಸಕ್ತಿ ಬೆಳೆಸಿಕೊಂಡು, ತಮ್ಮ ಆರಾಮದಾಯಕ ವಲಯದಿಂದ ಹೊರಬಂದು ಹೊಸ ಪ್ರಯತ್ನಗಳಿಗೆ ಮುಂದಾಗಬೇಕು. ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನಡೆದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಿದರು.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಉಪನಿರ್ದೇಶಕರಾದ ಶ್ರೀ ಮನ್ಸೂರ್ ಬಾಷಾ ಅವರು ಗಣ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಹಲವು ಉಪಯುಕ್ತ ಚರ್ಚೆಗಳು ಹಾಗೂ ಕಾರ್ಯಾಗಾರಗಳು ನಡೆದವು.
ಕಾರ್ಯಕ್ರಮದ ಅಂತಿಮ ಗೋಷ್ಠಿಯಲ್ಲಿ ‘AI – Your Startup Companion’ ಎಂಬ ವಿಷಯದ ಕುರಿತು Data and AI ವಿಭಾಗದ ಪ್ರಧಾನ ಸಂಶೋಧನಾ ವಿಜ್ಞಾನಿ ಝಹೂರ್ ಅಹ್ಮದ್ ಕಾಝಿ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಕೃತಕ ಬುದ್ಧಿಮತ್ತೆಯ (AI) ಮಹತ್ವ, ಉದ್ಯಮಶೀಲತೆಯಲ್ಲಿ ಅದರ ಬಳಕೆ, ಪ್ರಯೋಜನಗಳು ಹಾಗೂ ವಿವಿಧ AI ಪರಿಕರಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ಅವರು ನೀಡಿದರು.
ಭಾಗವಹಿಸಿದ ಯುವ ಉದ್ಯಮಿಗಳು ಕಾರ್ಯಕ್ರಮದ ವಿಷಯ, ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಹಾಗೂ ಆಯೋಜನೆಯ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು













