ಸನ್ಮಾರ್ಗ ವಾರ್ತೆ
ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶಕ್ಕೆ ಮರಳುವ ಸಾಧ್ಯತೆಯನ್ನು ಬಾಂಗ್ಲಾದೇಶ ಸರ್ಕಾರ ತಳ್ಳಿಹಾಕಿದೆ. ಹಸೀನಾ ಅವರ ಇತ್ತೀಚಿನ ನಡವಳಿಕೆಗಳು ಕೇವಲ ರಾಜಕೀಯ ನಾಟಕವಾಗಿದ್ದು, ಅವರಿಗೆ ದೇಶಕ್ಕೆ ಮರಳುವ ಯಾವುದೇ ಉದ್ದೇಶವಿಲ್ಲ ಎಂದು ಬಾಂಗ್ಲಾದೇಶದ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ಅಮೀನುಲ್ ಇಸ್ಲಾಮ್ ಸ್ಪಷ್ಟಪಡಿಸಿದ್ದಾರೆ. ಹೊಸ ಪಾಸ್ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಾಗಿ ಹಸೀನಾ ದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂಬ ವರದಿಗಳ ನಡುವೆ ಸರ್ಕಾರದ ಈ ಪ್ರತಿಕ್ರಿಯೆ ಬಂದಿದೆ.
ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಸೀನಾ ಅವರ ನಡವಳಿಕೆಗಳು ಕೇವಲ ರಾಜಕೀಯ ಗಮನ ಸೆಳೆಯುವ ಯತ್ನಗಳಾಗಿವೆ ಎಂದು ಅಮೀನುಲ್ ಇಸ್ಲಾಮ್ ಹೇಳಿದ್ದಾರೆ. ಅವರು ಬಾಂಗ್ಲಾದೇಶಕ್ಕೆ ಮರಳಲು ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದೂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಹೊಸ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಕುರಿತು ಕೇಳಿದಾಗ, ಹಸೀನಾ ಅವರ ಮರಳುವಿಕೆಯನ್ನು ಈಗ ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಬಾಂಗ್ಲಾದೇಶದ ವಿದೇಶಾಂಗ ನಿಯೋಜಿತ ಸಚಿವ ಹುಮಾಯೂನ್ ಕಬೀರ್ ಅವರು ಹಸೀನಾಗೆ ಯಾವುದೇ ಪ್ರಯಾಣ ದಾಖಲೆಗಳು ಅಥವಾ ಹೊಸ ಪಾಸ್ಪೋರ್ಟ್ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ಮುಂಚಿತವಾಗಿಯೇ ಕಠಿಣ ನಿಲುವು ತಳೆದಿದ್ದರು. ಹಸೀನಾ ಅವರನ್ನು ‘ತಲೆಮರೆಸಿಕೊಂಡಿರುವ ಭಯೋತ್ಪಾದಕಿ’ ಮತ್ತು ‘ಸರ್ವಾಧಿಕಾರಿ’ ಎಂದು ವಿಮರ್ಶಿಸಿದ್ದರು. ಇದರೊಂದಿಗೆ, ಅವರ ಮರಳುವಿಕೆಯ ಯತ್ನಗಳು ಬಾಂಗ್ಲಾದೇಶ ಸರ್ಕಾರದಿಂದ ತೀವ್ರ ವಿರೋಧವನ್ನು ಎದುರಿಸುತ್ತಿವೆ.
ಆಗಸ್ಟ್ 2024 ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಅಧಿಕಾರವನ್ನು ಕಳೆದುಕೊಂಡ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಮಟ್ಟ ಹಾಕಲು ಆದೇಶಿಸಿದಕ್ಕಾಗಿ ಹಸೀನಾ ಅವರ ಗೈರುಹಾಜರಿಯಲ್ಲಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಹಸೀನಾ, ವಿಚಾರಣೆಯ ಕಾನೂನುಬದ್ಧತೆಯನ್ನೂ ಪ್ರಶ್ನಿಸಿದ್ದಾರೆ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಬಾಂಗ್ಲಾದೇಶವು ಭಾರತಕ್ಕೆ ಹಸ್ತಾಂತರ ವಿನಂತಿಯನ್ನೂ ಸಲ್ಲಿಸಿದೆ. ಈ ವಿನಂತಿಯನ್ನು ಸ್ವೀಕರಿಸಿರುವುದಾಗಿ ಭಾರತ ದೃಢಪಡಿಸಿದ್ದರೂ, ಹಸ್ತಾಂತರದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತುತ ಭಾರತದಲ್ಲಿರುವ ಹಸೀನಾ, ತಾವು ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದಾಗಿ ಇತ್ತೀಚೆಗೆ ಘೋಷಿಸಿದ್ದರು.












