ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಭಾರಿ ಕಡಿತ; 2.88 ಕೋಟಿ ಜನರು ಹೊರಕ್ಕೆ, ಅವರಲ್ಲಿ ಶೇಕಡಾ 84 ರಷ್ಟು ಮಂದಿ ಜೀವಂತವಾಗಿದ್ದಾರೆ!

0
4

ಸನ್ಮಾರ್ಗ ವಾರ್ತೆ

ಲಕ್ನೋ: ಚುನಾವಣಾ ಆಯೋಗವು ನಡೆಸಿದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ (SIR) ಉತ್ತರ ಪ್ರದೇಶದ ಕರಡು ಪಟ್ಟಿಯಿಂದ 2.88 ಕೋಟಿ (2,88,71,423) ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ‘ಸಾಬರ್ ಇನ್‌ಸ್ಟಿಟ್ಯೂಟ್’ (Sabar Institute) ನಡೆಸಿದ ಅಧ್ಯಯನವು ತಿಳಿಸಿದೆ. ಪರಿಷ್ಕರಣೆಗೆ ಮುನ್ನ ಪಟ್ಟಿಯಲ್ಲಿದ್ದ 15.44 ಕೋಟಿ (154,430,092) ಮತದಾರರಲ್ಲಿ ಶೇಕಡಾ 18.7 ರಷ್ಟು ಮಂದಿಯನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ಇದರರ್ಥ ಸುಮಾರು ಐದು ಮತದಾರರಲ್ಲಿ ಒಬ್ಬರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿ ಬೆಟ್ಟು ಮಾಡಿದೆ. ಅವರನ್ನು ಎಎಸ್‌ಡಿ (ASD – ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ) ಪಟ್ಟಿಯಲ್ಲಿ ಸೇರಿಸಲಾಗಿದೆ.

ಹೊರಹಾಕಲ್ಪಟ್ಟವರಲ್ಲಿ ಶೇಕಡಾ 84 ರಷ್ಟು ಮಂದಿ ಜೀವಂತವಾಗಿದ್ದಾರೆ!

ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರಲ್ಲಿ ಕೇವಲ ಶೇಕಡಾ 16 ರಷ್ಟು ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಸಾಬರ್ ಇನ್‌ಸ್ಟಿಟ್ಯೂಟ್ ವರದಿ ತೋರಿಸುತ್ತದೆ. ಉಳಿದ ಶೇಕಡಾ 84 ರಷ್ಟು ಮಂದಿ (2.42 ಕೋಟಿಗೂ ಹೆಚ್ಚು ಮತದಾರರು) ಜೀವಂತವಾಗಿದ್ದಾರೆ. ಶಾಶ್ವತವಾಗಿ ಸ್ಥಳಾಂತರಗೊಂಡವರು, ಗೈರುಹಾಜರಾದವರು ಅಥವಾ ಪತ್ತೆಯಾಗದವರು ಮತ್ತು ಬೇರೆಡೆ ಹೆಸರು ಸೇರಿಸಲಾದವರನ್ನು ಒಳಗೊಂಡಂತೆ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ ಶೇಕಡಾ 50 ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಾಗಿದ್ದಾರೆ.

ಮಹಿಳೆಯರು ಮತ್ತು ತೃತೀಯಲಿಂಗಿ ಸಮುದಾಯ

ಪುರುಷರಿಗಿಂತ ಮಹಿಳೆಯರ ಹೆಸರುಗಳನ್ನು ಹೆಚ್ಚಾಗಿ ಕೈಬಿಡಲಾಗಿದೆ. 2022ರ ಪಟ್ಟಿಯಲ್ಲಿದ್ದ ಮಹಿಳೆಯರಲ್ಲಿ ಶೇಕಡಾ 22.0 ರಷ್ಟು ಮಂದಿಯನ್ನು ಕೈಬಿಡಲಾಗಿದ್ದರೆ, ಪುರುಷರ ಪ್ರಮಾಣ ಕೇವಲ ಶೇಕಡಾ 16.5 ರಷ್ಟಿತ್ತು. ಇದರರ್ಥ ಪುರುಷರಿಗಿಂತ 20.4 ಲಕ್ಷ ಹೆಚ್ಚು ಮಹಿಳೆಯರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಮದುವೆಯ ನಂತರ ಗಂಡನ ಮನೆಗೆ ತೆರಳುವ ಮಹಿಳೆಯರು ಹೊಸ ವಿಳಾಸದಲ್ಲಿ ಮರು-ನೋಂದಣಿ ಮಾಡಿಸಿಕೊಳ್ಳಬೇಕಾಗಿರುವುದರಿಂದ ಈ ಹೆಚ್ಚಳವಾಗಿದೆ ಎಂದು ವರದಿ ಹೇಳುತ್ತದೆ. ತೃತೀಯಲಿಂಗಿ ವಿಭಾಗದಲ್ಲಿ, 2022 ರಲ್ಲಿದ್ದ 8,855 ಮತದಾರರಲ್ಲಿ 1,805 (ಶೇ. 20.4) ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಅವರಲ್ಲಿ ಹೆಚ್ಚಿನವರನ್ನು ‘ಹಾಜರಿಲ್ಲ’ ಎಂಬ ಕಾರಣಕ್ಕೆ ಕೈಬಿಡಲಾಗಿದೆ.

ನಗರಗಳಲ್ಲಿ ಭಾರಿ ಪ್ರಮಾಣದ ಹೊರಗಿಡುವಿಕೆ

ಲಕ್ನೋ, ಗಾಜಿಯಾಬಾದ್, ಗೌತಮ್ ಬುದ್ಧ ನಗರ ಮತ್ತು ಕಾನ್ಪುರ ನಗರ ಜಿಲ್ಲೆಗಳಲ್ಲಿ 27 ಕ್ಷೇತ್ರಗಳಿವೆ. ರಾಜ್ಯದ ಒಟ್ಟು ಮತದಾರರಲ್ಲಿ ಇವು ಕೇವಲ ಶೇ. 7.8 ರಷ್ಟು ಮತದಾರರನ್ನು ಹೊಂದಿದ್ದರೂ, ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟವರಲ್ಲಿ ಈ ಪ್ರದೇಶಗಳ ಪಾಲು ಶೇ. 11.7 ರಷ್ಟಿದೆ. 2022ರ ಅಂಕಿಅಂಶಗಳಿಗೆ ಹೋಲಿಸಿದರೆ, ಈ ಕ್ಷೇತ್ರಗಳಲ್ಲಿ ಶೇ. 28.4 ರಷ್ಟು ಮತದಾರರನ್ನು ಕೈಬಿಡಲಾಗಿದ್ದರೆ, ಇತರ ಸ್ಥಳಗಳಲ್ಲಿ ಇದು ಶೇ. 18.3 ರಷ್ಟಿತ್ತು. ಅಲಹಾಬಾದ್ ಉತ್ತರ ಕ್ಷೇತ್ರದಲ್ಲಿ, 2022 ರಲ್ಲಿ ಚಲಾವಣೆಯಾದ ಒಟ್ಟು ಮತಗಳಿಗಿಂತ ಹೆಚ್ಚಿನ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದಾದ ಅಂಕಿಅಂಶಗಳು

ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 359 ಕ್ಷೇತ್ರಗಳಲ್ಲಿ, ಮರಣದ ಹೊರತಾಗಿ ಇತರ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ಸಂಖ್ಯೆಯು 2022ರ ಚುನಾವಣೆಯ ಗೆಲುವಿನ ಅಂತರಕ್ಕಿಂತ (ಬಹುಮತಕ್ಕಿಂತ) ಹೆಚ್ಚಾಗಿದೆ. ಇವುಗಳಲ್ಲಿ, ಬೂತ್ ಮಟ್ಟದ ಅಧಿಕಾರಿಯ ನಿರ್ಧಾರವನ್ನು ಮಾತ್ರ ಅವಲಂಬಿಸಿರುವ ‘ಪತ್ತೆಯಾಗದ/ಗೈರುಹಾಜರಿ’ ವಿಭಾಗದಲ್ಲಿ, 194 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ತೆಗೆದುಹಾಕಲಾಗಿದೆ.

ಎನ್‌ಡಿಎ ಗೆದ್ದ ಕ್ಷೇತ್ರಗಳಲ್ಲಿ ಸರಾಸರಿ ಶೇಕಡಾ 16.8 ರಷ್ಟು ಮತದಾರರನ್ನು ಕಳೆದುಕೊಂಡಿದ್ದರೆ, ಸಮಾಜವಾದಿ ಪಕ್ಷದ ಮೈತ್ರಿಕೂಟ ಗೆದ್ದ ಕ್ಷೇತ್ರಗಳಲ್ಲಿ ಇದು ಶೇಕಡಾ 14.3 ರಷ್ಟಿತ್ತು.

ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟವರಲ್ಲಿ ಮುಸ್ಲಿಂ ಹೆಸರುಗಳ ಪ್ರಮಾಣ ಶೇ. 20.7 ರಷ್ಟಿದೆ. ಇವರಲ್ಲಿ ಶೇ. 24.1 ರಷ್ಟು ಮಂದಿ ‘ಪತ್ತೆಯಾಗದ/ಗೈರುಹಾಜರಿ’ ವಿಭಾಗದಲ್ಲಿದ್ದರೆ, ಶೇ. 23.8 ರಷ್ಟು ಮಂದಿ ‘ಬೇರೆಡೆ ಹೆಸರು ಸೇರಿಸಲಾಗಿದೆ’ ವಿಭಾಗದಲ್ಲಿದ್ದಾರೆ. ಒಂದೇ ಕ್ಷೇತ್ರ ಮತ್ತು ವಯೋಮಾನದ ಜನರನ್ನು ಹೋಲಿಸಿದಾಗ, ಮುಸ್ಲಿಂ ಹೆಸರುಗಳು ಕ್ರಮವಾಗಿ ‘ಗೈರುಹಾಜರಿ’ ಮತ್ತು ‘ನಕಲಿ’ ಎಂದು ದಾಖಲಾಗುವ ಸಾಧ್ಯತೆಯು 1.35 ಮತ್ತು 1.38 ಪಟ್ಟು ಹೆಚ್ಚಾಗಿದೆ ಎಂಬುದನ್ನೂ ವರದಿ ತೋರಿಸುತ್ತದೆ.

ಈ ನಡುವೆ, ಮತದಾರರ ಪಟ್ಟಿಯಿಂದ ಕೈಬಿಡಲಾದವರ ಕರಡು ಪಟ್ಟಿಯು ಕೇವಲ ಪ್ರಾಥಮಿಕ ವರದಿಯಾಗಿದ್ದು, ಹಲವರು ಈಗಾಗಲೇ ಹೊಸ ಅರ್ಜಿಗಳನ್ನು ಸಲ್ಲಿಸಿರಬಹುದು ಮತ್ತು ಅಂತಿಮ ಪಟ್ಟಿ ಬಿಡುಗಡೆಯಾದಾಗ ಮಾತ್ರ ನೈಜ ಚಿತ್ರಣ ಸ್ಪಷ್ಟವಾಗಲಿದೆ ಎಂದು ಸಾಬರ್ ಇನ್‌ಸ್ಟಿಟ್ಯೂಟ್ ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದರಿಂದ ಪೌರತ್ವ ಅಥವಾ ಸಾರ್ವಜನಿಕ ಸೇವೆಗಳ ಕಾನೂನುಬದ್ಧ ಹಕ್ಕು ರದ್ದಾಗದಿದ್ದರೂ, ಇದು ಪಾಸ್‌ಪೋರ್ಟ್ ನವೀಕರಣ, ವಾಸಸ್ಥಳ/ನಿವಾಸ ಪ್ರಮಾಣಪತ್ರಗಳು, ಪಡಿತರ ಸೇರಿದಂತೆ ಕಲ್ಯಾಣ ಯೋಜನೆಗಳು ಮತ್ತು ಶೈಕ್ಷಣಿಕ ಪ್ರವೇಶಾತಿಗಳಲ್ಲಿ ಪ್ರಾಯೋಗಿಕ ತೊಂದರೆಗಳನ್ನು ಉಂಟುಮಾಡಬಹುದು ಎಂದು ವರದಿ ಬೆಟ್ಟು ಮಾಡಿದೆ. ಇದು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಕಡಿಮೆ ದಾಖಲೆಗಳನ್ನು ಹೊಂದಿರುವ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ.