ನನ್ನ ಬದುಕಿನಲ್ಲಿ ಕತ್ತಲೆ ತಂದವರು ಈಗ ಇಡೀ ದೇಶವನ್ನೇ ಕತ್ತಲೆಗೆ ತಳ್ಳುತ್ತಿದ್ದಾರೆ: ಬಿಲ್ಕಿಸ್ ಬಾನು

0
6

ಸನ್ಮಾರ್ಗ ವಾರ್ತೆ

ಕೊಚ್ಚಿ: ನನ್ನ ಬದುಕಿನಲ್ಲಿ ಕತ್ತಲೆಯನ್ನು ಹರಡಿದವರು ಈಗ ಇಡೀ ದೇಶವನ್ನೇ ಕತ್ತಲೆಗೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಜರಾತ್ ನರಮೇಧದ ಜೀವಂತ ಹುತಾತ್ಮೆಯಾದ ಬಿಲ್ಕಿಸ್ ಬಾನು ಹೇಳಿದ್ದಾರೆ. ವೆಲ್‌ಫೇರ್ ಪಾರ್ಟಿ ರಾಜ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.

ಒಂದು ದಿನ ತಾನು ಮತ್ತು ತನ್ನ ಕುಟುಂಬ ಭಯಾನಕ ದುಃಸ್ವಪ್ನಕ್ಕೆ ಎಚ್ಚರಗೊಂಡಿದ್ದನ್ನು ಬಿಲ್ಕಿಸ್ ಸ್ಮರಿಸಿಕೊಂಡಿದ್ದಾರೆ. ಆ ದುರಂತಕ್ಕೆ ಕಾರಣರಾದವರು ಇನ್ನೂ ತಮ್ಮನ್ನು ಬೆನ್ನಟ್ಟುತ್ತಿದ್ದಾರೆ. ಗುಜರಾತ್‌ನಲ್ಲಿ ತಾವು ಕಂಡ ಮತ್ತು ಅನುಭವಿಸಿದ ದೌರ್ಜನ್ಯಗಳು ಇಂದು ದೇಶದ ವಿವಿಧ ಭಾಗಗಳಲ್ಲಿ ಮರುಕಳಿಸುತ್ತಿವೆ. ನ್ಯಾಯಕ್ಕಾಗಿ ಇಡೀ ದೇಶಾದ್ಯಂತ ಅಲೆಯುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅವಧಿಯಲ್ಲಿ ಅವರು ಹಲವು ಬಾರಿ ಮನೆಗಳನ್ನು ಬದಲಾಯಿಸಬೇಕಾಯಿತು. ತಮ್ಮ ಮೇಲೆ ದಾಳಿ ನಡೆದಾಗ ದಾಳಿಕೋರರ ಜೊತೆಗೆ ಗೂಂಡಾಗಳು ಮತ್ತು ಅಪರಾಧಿಗಳು ಇದ್ದರೆ, ಇಂದು ಪೊಲೀಸರು, ಅಧಿಕಾರಿಗಳು ಮತ್ತು ಆಡಳಿತವು ಅವರ ಹಿತಾಸಕ್ತಿಗಳನ್ನು ಜಾರಿಗೊಳಿಸುತ್ತಿವೆ. ದಾಳಿ ಪ್ರಕರಣದ ಇಬ್ಬರು ಆರೋಪಿಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮೊನ್ನೆ ಅಮಾನತುಗೊಳಿಸಿದ್ದು ದೊಡ್ಡ ಆಘಾತವನ್ನುಂಟುಮಾಡಿದೆ. ಕೊನೆಯ ಭರವಸೆಯಾದ ನ್ಯಾಯಾಂಗ ವ್ಯವಸ್ಥೆಯಿಂದಲೂ ನಿರಾಸೆ ಎದುರಿಸುವುದು ನೋವು ತರುತ್ತದೆ ಎಂದು ಬಿಲ್ಕಿಸ್ ಹೇಳಿದ್ದಾರೆ.

ಆದಾಗ್ಯೂ, ನನ್ನ ಬದುಕಿನಲ್ಲಿ ನಡೆದ ಎಲ್ಲಾ ಘಟನೆಗಳನ್ನು ಒಂದು ದುಃಸ್ವಪ್ನವಾಗಿ ನೋಡಲು ನಾನು ಬಯಸುತ್ತೇನೆ. ಯಾರ ಮೇಲೂ ಸೇಡು ತೀರಿಸಿಕೊಳ್ಳುವ ಅಗತ್ಯ ನನಗೆ ಎಂದಿಗೂ ಅನಿಸಿಲ್ಲ. ನನಗೆ ಸೇಡು ಬೇಕಿಲ್ಲ, ಬದಲಿಗೆ ನೈಸರ್ಗಿಕ ನ್ಯಾಯ ಬೇಕು. ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆಯೂ ಬಿಲ್ಕಿಸ್ ಬಾನು ಮನವಿ ಮಾಡಿದ್ದಾರೆ.