ಸದ್ದಾಂ ಹುಸೇನ್ ಬಳಸುತ್ತಿದ್ದ ಐಷಾರಾಮಿ ಬೋಯಿಂಗ್ ವಿಮಾನ ಹರಾಜಿಗೆ: ಬೆಲೆ ಎಷ್ಟು ಗೊತ್ತಾ?

0
2

ಸನ್ಮಾರ್ಗ ವಾರ್ತೆ

ಬಾಗ್ದಾದ್: ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರು ಬಳಸುತ್ತಿದ್ದ ಐಷಾರಾಮಿ ಸರ್ಕಾರಿ ವಿಮಾನವನ್ನು ಇರಾಕಿ ಏರ್‌ವೇಸ್ ಹರಾಜಿಗಿಟ್ಟಿದೆ. ‘ಬೋಯಿಂಗ್ 747’ ಮಾದರಿಯ ಈ ವಿಮಾನಕ್ಕೆ ಅಂದಾಜು 9 ಲಕ್ಷ ಡಾಲರ್ (ಸುಮಾರು ₹8.34 ಕೋಟಿ) ಮೂಲ ಬೆಲೆ ನಿಗದಿಪಡಿಸಲಾಗಿದೆ.

2027ರಲ್ಲಿ ಟುನೀಶಿಯಾದಲ್ಲಿರುವ ಇರಾಕ್ ರಾಯಭಾರ ಕಚೇರಿಯಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಡಿಸೆಂಬರ್‌ನಲ್ಲಿ ಆಸಕ್ತ ಖರೀದಿದಾರರಿಗಾಗಿ 15 ದಿನಗಳ ಚರ್ಚಾ ಅವಧಿ (ವಿಂಡೋ) ತೆರೆಯಲಾಗುವುದು. ಹರಾಜಿನಲ್ಲಿ ವಿಮಾನವನ್ನು ತಮ್ಮದಾಗಿಸಿಕೊಳ್ಳುವವರು ಆರಂಭದಲ್ಲಿ ಶೇ. 20ರಷ್ಟು ಠೇವಣಿ ಇಡಬೇಕು ಹಾಗೂ ಉಳಿದ ಪೂರ್ಣ ಮೊತ್ತವನ್ನು ಐದು ದಿನಗಳ ಒಳಗಾಗಿ ಪಾವತಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ವಿಮಾನವು ಪ್ರಸ್ತುತ ಯಾವ ಸ್ಥಿತಿಯಲ್ಲಿದೆಯೋ ಮತ್ತು ವಿಮಾನ ನಿಲ್ದಾಣದ ಯಾವ ಸ್ಥಳದಲ್ಲಿದೆಯೋ ಅದೇ ಆಧಾರದ ಮೇಲೆ ಮಾರಾಟ ಮಾಡಲಾಗುವುದು. ವಿಮಾನಕ್ಕೆ ಯಾವುದೇ ತಾಂತ್ರಿಕ ವಾರಂಟಿ ಇರುವುದಿಲ್ಲ ಎಂದು ಇರಾಕಿ ಏರ್‌ವೇಸ್ ಸ್ಪಷ್ಟಪಡಿಸಿದೆ.

1991ರಲ್ಲಿ ಕುವೈತ್ ಆಕ್ರಮಣದ ಮೂಲಕ ಮೊದಲ ಗಲ್ಫ್ ಯುದ್ಧ ಆರಂಭವಾದಾಗ, ಯುದ್ಧದ ದಾಳಿಯಿಂದ ರಕ್ಷಿಸುವ ಉದ್ದೇಶದಿಂದ ಈ ವಿಮಾನವನ್ನು ಟುನೀಶಿಯಾದ ತೋಜೌರ್ ನೆಫ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಆ ಬಳಿಕ 2003ರ ಅಮೆರಿಕ ಆಕ್ರಮಣ ಮತ್ತು 2006ರಲ್ಲಿ ಸದ್ದಾಂ ಹುಸೇನ್ ಅವರ ಮರಣದಂಡನೆಯಾಗಿ ದಶಕಗಳೇ ಕಳೆದರೂ, ಈ ವಿಮಾನ ಟುನೀಶಿಯಾದಲ್ಲೇ ಉಳಿದುಕೊಂಡಿದೆ.

ವಿಮಾನದ ವಿಶೇಷತೆ ಏನು?

1982ರಲ್ಲಿ ಅಮೆರಿಕದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನವು ಅತಿ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ‘ಬೋಯಿಂಗ್ 747SP’ (ಸ್ಪೆಷಲ್ ಪರ್ಫಾರ್ಮೆನ್ಸ್) ವಿಭಾಗದ ವಿಐಪಿ ವಿಮಾನವಾಗಿದೆ. ಇದರ ಒಳಭಾಗದಲ್ಲಿ ವಿಶಾಲವಾದ ಮೀಟಿಂಗ್ ರೂಮ್ ಹಾಗೂ ಸದ್ದಾಂ ಹುಸೇನ್ ಅವರ ಭಾವಚಿತ್ರವಿತ್ತು ಎಂದು ಈ ಹಿಂದೆ ವಿಮಾನದಲ್ಲಿದ್ದ ಪೈಲಟ್ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ವಿಮಾನದ ಜೊತೆಗೆ 1982ರಲ್ಲೇ ನಿರ್ಮಾಣಗೊಂಡ ಮತ್ತೊಂದು ಬೋಯಿಂಗ್ 747 ವಿಮಾನವನ್ನೂ ಹರಾಜಿಗಿಡಲಾಗಿದ್ದು, ಎರಡೂ ವಿಮಾನಗಳಿಗೆ ತಲಾ 9 ಲಕ್ಷ ಡಾಲರ್ ಮೂಲ ಬೆಲೆ ನಿಗದಿಪಡಿಸಲಾಗಿದೆ. ಈ ಹಿಂದೆ 2023ರಲ್ಲೂ ಇವುಗಳನ್ನು 4.94 ಲಕ್ಷ ಡಾಲರ್ ಬೆಲೆಗೆ ಹರಾಜು ಹಾಕಲು ಪ್ರಯತ್ನಿಸಲಾಗಿತ್ತಾದರೂ, ಖರೀದಿದಾರರು ಮುಂದೆ ಬಂದಿರಲಿಲ್ಲ.