ಮುಜಫರ್‌ನಗರ ಗಲಭೆ: ಸಾಕ್ಷ್ಯಾಧಾರಗಳ ಕೊರತೆಯಿಂದ 8 ಆರೋಪಿಗಳು ಖುಲಾಸೆ; ನ್ಯಾಯಾಲಯದ ತೀರ್ಪು

0
11

ಸನ್ಮಾರ್ಗ ವಾರ್ತೆ

ಮುಜಫರ್‌ನಗರ: 2013ರ ಗಲಭೆಗೆ ಸಂಬಂಧಿಸಿದ ತ್ರಿವಳಿ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮುಜಫರ್‌ನಗರದ ನ್ಯಾಯಾಲಯವು ಎಂಟು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯ್ ಕುಮಾರ್ ಅವರು ಬುಧವಾರ ಎಂಟು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ ಎಂದು ಸರ್ಕಾರಿ ವಕೀಲ ನರೇಂದ್ರ ಶರ್ಮಾ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಯ ಸಮಯದಲ್ಲಿ ಇಬ್ಬರು ಆರೋಪಿಗಳಾದ ಸೌದ್ ಮತ್ತು ಯಾಮೀನ್ ಸಾವನ್ನಪ್ಪಿದ್ದಾರೆ. ಉಳಿದ ಎಂಟು ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಕಂಡುಕೊಂಡಿದ್ದು, ಅವರನ್ನು ಖುಲಾಸೆಗೊಳಿಸಲು ಆದೇಶಿಸಿದೆ. ಮುಜಫರ್‌ನಗರ ಗಲಭೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 40,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದರು. ವಿಶೇಷ ತನಿಖಾ ದಳವು ಗಲಭೆಗೆ ಸಂಬಂಧಿಸಿದ 175 ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ದೂರುದಾರ ಅಜೇಂದ್ರ ಕುಮಾರ್ ಸೇರಿದಂತೆ ಪ್ರಾಸಿಕ್ಯೂಷನ್ ಪರ 33 ಸಾಕ್ಷಿಗಳು ಪಾಟೀಸವಾಲಿನ ಸಮಯದಲ್ಲಿ ತಮ್ಮ ಹೇಳಿಕೆಗಳಿಂದ ಹಿಂದೆ ಸರಿದಿದ್ದಾರೆ (ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ). ಶರ್ಮಾ ಅವರ ಪ್ರಕಾರ, ಈ ತ್ರಿವಳಿ ಕೊಲೆ ಪ್ರಕರಣದಲ್ಲಿ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಜಾದ್, ಶೌಕತ್, ಜಿಲ್ಲಾ, ಆಸ್ ಮೊಹಮ್ಮದ್, ಶಾಕಿರ್ ಅಲಿ, ನೂರ್ ಹಸನ್, ಲಿಯಾಖತ್, ಅಲಿ ಮೊಹಮ್ಮದ್, ಸೌದ್ ಮತ್ತು ಯಾಮೀನ್ ಎಂಬುವವರನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಸೆಪ್ಟೆಂಬರ್ 7, 2013 ರಂದು ಜಿಲ್ಲೆಯ ಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುರ್ಬಾಲಿಯನ್ ಗ್ರಾಮದಲ್ಲಿ ನಡೆದ ಪಂಚಾಯಿತಿಯಲ್ಲಿ ಪಾಲ್ಗೊಂಡು ಮನೆಗೆ ಹಿಂದಿರುಗುತ್ತಿದ್ದ ರಾಜ್‌ವೀರ್ (60), ವಿಕಾಸ್ (21) ಮತ್ತು ಮಹೇಂದ್ರ (65) ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ವಿಶೇಷ ತನಿಖಾ ದಳ (SIT) ಈ ಪ್ರಕರಣದ ತನಿಖೆ ನಡೆಸಿ ಎಲ್ಲಾ 10 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.