ಸನ್ಮಾರ್ಗ ವಾರ್ತೆ
ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ತಂದೆಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿತ್ತು ಎಂಬ ಕಾರಣಕ್ಕೆ ಜನನ ಪ್ರಮಾಣಪತ್ರ ನಿರಾಕರಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಅಬ್ದುಲ್ ಹಬೀಬ್ ಮತ್ತು ಅಮೀನಾ ಖಾತೂನ್ ಅವರ ನವಜಾತ ಹೆಣ್ಣು ಮಗುವಿಗೆ ನವೆಂಬರ್ 27 ರಂದು ಅಂತಿಮವಾಗಿ ಪ್ರಮಾಣಪತ್ರವನ್ನು ವಿತರಿಸಲಾಗಿದೆ.
ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಇದರ ಕೂಚ್ ಬೆಹಾರ್ ಜಿಲ್ಲಾ ತಂಡದ ನಿರಂತರ ಪ್ರಯತ್ನಗಳು ಮತ್ತು ಮಾಧ್ಯಮಗಳ ಬೆಂಬಲದ ನಂತರ ಪ್ರಮಾಣಪತ್ರವನ್ನು ವಿತರಿಸಲಾಗಿದೆ ಎಂದು ಎಪಿಸಿಆರ್ ಪಶ್ಚಿಮ ಬಂಗಾಳ ಘಟಕ ತಿಳಿಸಿದೆ.
ಸೆಪ್ಟೆಂಬರ್ 9 ರಂದು ದಿನ್ಹಾಟಾ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಈ ಹೆಣ್ಣು ಮಗು ಜನಿಸಿತ್ತು. ಸಾಹೇಬ್ಗಂಜ್ನ ಖತಮಾರಿ ಗ್ರಾಮದ ನಿವಾಸಿಗಳಾದ ಆಕೆಯ ಪೋಷಕರು ಮಗುವಿನ ಜನನ ಪ್ರಮಾಣಪತ್ರವನ್ನು ಕೇಳಿದಾಗ, ಮೊದಲು ವಾಸಸ್ಥಳ ದೃಢೀಕರಣ ಪಡೆಯುವಂತೆ ಅವರಿಗೆ ತಿಳಿಸಲಾಗಿತ್ತು ಎಂದು ವರದಿಯಾಗಿದೆ. ಎಸ್ಐಆರ್ನಲ್ಲಿ ಹಬೀಬ್ ಅವರ ಹೆಸರನ್ನು ಅಳಿಸಲಾಗಿದೆ ಎಂಬ ಕಾರಣ ನೀಡಿ ದಿನ್ಹಾಟಾ ಶಾಸಕ ಅಜಯ್ ರಾಯ್ ಅವರ ಕಚೇರಿಯು ಹಬೀಬ್ ಅವರ ಮನವಿಯನ್ನು ತಿರಸ್ಕರಿಸಿತ್ತು.
“ನಾನು ಶಾಸಕರ ಕಚೇರಿಯನ್ನು ಸಂಪರ್ಕಿಸಿದಾಗ, ನಾನು ಬಾಂಗ್ಲಾದೇಶಿ ಎಂದು ಅವರು ಹೇಳಿದರು ಮತ್ತು ಆದ್ದರಿಂದ ನಾನು ಮೊದಲು ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮೂಲಕ ನನ್ನ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದರು,” ಎಂದು ಹಬೀಬ್ ‘ಮಕ್ತೂಬ್ ಮೀಡಿಯಾಗೆ ತಿಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ, ತಮ್ಮ ಅಜ್ಜ ಕಟ್ಟಿಸಿದ ಮನೆಯಲ್ಲಿ ಹುಟ್ಟಿನಿಂದಲೂ ತಾವು ಭಾರತದಲ್ಲಿಯೇ ವಾಸಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ನಿರಾಕರಣೆಗೆ ಎಪಿಸಿಆರ್ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. “ಮಗುವಿನ ಗುರುತಿನ ಹಕ್ಕನ್ನು ಚುನಾವಣಾ ವಿವಾದಗಳಿಗೆ ಒತ್ತೆಯಾಳಾಗಿ ಇರಿಸಲು ಸಾಧ್ಯವಿಲ್ಲ” ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ 7ನೇ ವಿಧಿಯ ಅಡಿಯಲ್ಲಿ ಪ್ರತಿಯೊಂದು ಮಗುವಿಗೂ ತಕ್ಷಣದ ನೋಂದಣಿಯ ಹಕ್ಕಿದೆ ಎಂದು ಅದು ಹೇಳಿತ್ತು.
ಪ್ರಮಾಣಪತ್ರ ವಿತರಣೆಯನ್ನು ಸ್ವಾಗತಿಸಿರುವ ಎಪಿಸಿಆರ್, ತನ್ನ ಕೂಚ್ ಬೆಹಾರ್ ಜಿಲ್ಲಾ ತಂಡದ ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದೆ ಮತ್ತು ಪ್ರಕರಣವನ್ನು ಬೆಳಕಿಗೆ ತರುವಲ್ಲಿ ಮಾಧ್ಯಮ ಸಹೋದ್ಯೋಗಿಗಳು ವಹಿಸಿದ “ರಚನಾತ್ಮಕ ಪಾತ್ರ”ವನ್ನು ಸ್ಮರಿಸಿದೆ.
“ಈ ಸಾಧನೆಯು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ಗುರುತಿನ ಹಕ್ಕು ಮತ್ತು ಅಗತ್ಯ ನಾಗರಿಕ ದಾಖಲೆಗಳನ್ನು ಪಡೆಯುವ ಹಕ್ಕನ್ನು ರಕ್ಷಿಸುವ ಎಪಿಸಿಆರ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಸಂಘಟನೆ ಹೇಳಿದೆ.
“ಪ್ರತಿಯೊಂದು ಮಗುವೂ ಕಾನೂನುಬದ್ಧ ಗುರುತು, ಘನತೆ ಮತ್ತು ಕಾನೂನಿನ ಸಮಾನ ರಕ್ಷಣೆಗೆ ಅರ್ಹವಾಗಿದೆ ಎಂದು ಎಪಿಸಿಆರ್ ನಂಬುತ್ತದೆ,” ಎಂದು ಅದು ಸೇರಿಸಿದೆ.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮರುಸ್ಥಾಪಿಸುವಂತೆ ಕೋರಿ ಹಬೀಬ್ ಅವರು ನ್ಯಾಯಮಂಡಳಿಗೆ ಸಲ್ಲಿಸಿರುವ ಮೇಲ್ಮನವಿ ಇನ್ನೂ ಬಾಕಿ ಇದೆ.












