ಕೆನ್ಯಾ: ಮಗುವಿನೊಂದಿಗೆ ಬಂದ ಸದಸ್ಯೆಯನ್ನು ಪಾರ್ಲಿಮೆಂಟಿನಿಂದ ಹೊರಹಾಕಿದ ಸ್ಪೀಕರ್- ವೀಡಿಯೊ

0
927

ನೈರೋಬಿ, ಆ. 9: ಕೆನ್ಯದ ಪಾರ್ಲಿಮೆಂಟಿಗೆ ಮಗುವನ್ನು ಕರೆತಂದ ಸದಸ್ಯೆಯನ್ನು ಸ್ಪೀಕರ್ ಹೊರಗಟ್ಟಿದ ಘಟನೆ ನಡೆದಿದೆ. ಬುಧವಾರ ಐದು ತಿಂಗಳ ಮಗುವಿನೊಂದಿಗೆ ಝುಲೈಕ ಹಸನ್ ಸದನಕ್ಕೆ ಬಂದಿದ್ದರು. ಕೂಡಲೇ ಸ್ಪೀಕರ್ ಕ್ರಿಸ್ಟೋಫರ್ ಒಮುಲೇಲು ಹೊರಹೋಗುವಂತೆ ಹೇಳಿದರು. ಇದು ಇತರ ಸದಸ್ಯರನ್ನು ಕೆರಳುವಂತೆ ಮಾಡಿತ್ತು. ಸೋಮಾಲಿಯದೊಂದಿಗಿನ ಗಡಿ ಚರ್ಚೆಗಾಗಿ ಸದನವನ್ನು ಕರೆಯಲಾಗಿತ್ತು. ಸದಸ್ಯರ ವಿರೋಧದಿಂದಾಗಿ ಹದಿನೈದು ನಿಮಿಷ ಸದನದ ಕಾರ್ಯಕಲಾಪಕ್ಕೆ ಅಡ್ಡಿಯಾಯಿತು.

ಬೇರೆ ಯಾರ ಬಳಿ ಮಗುವನ್ನು ಇರಿಸಲು ಸಾಧ್ಯವಾಗದ್ದರಿಂದ ಮಗುವಿನೊಂದಿಗೆ ಸದನಕ್ಕೆ ಬಂದೆ ಎಂದು ಝುಲೈಖಾ ಮಾಧ್ಯಮಗಳಿಗೆ ತಿಳಿಸಿದರು. ಝುಲೈಕರ ಮಾತನ್ನೇ ಕೇಳಲು ಸ್ಪೀಕರ್ ಸಿದ್ಧರಾಗಲಿಲ್ಲ. ಮಕ್ಕಳನ್ನು ನೋಡಲು ಇರುವ ಸ್ಥಳ ಸದನವಲ್ಲ ಎಂದು ಹೇಳಿ ಸದಸ್ಯೆಯನ್ನು ಹೊರಹಾಕಿದ್ದಾರೆ. ಜಾಗತಿಕವಾಗಿ ಮಾತೃ ಎದೆಹಾಲು ವಾರ ಆಚರಣೆಯಲ್ಲಿರುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.