ಸನ್ಮಾರ್ಗ ವಾರ್ತೆ-
ಉಪ್ಪಿನಂಗಡಿ, ಆ. 16- ನಗರದ ಆರ್. ಕೆ ಜ್ಯುವೆಲ್ಲರಿಗೆ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿದ ಪ್ರಕರಣ ನಡೆದಿದ್ದು, ಇವತ್ತು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಈ ಜ್ಯುವೆಲ್ಲರಿಯು ಸರಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪವೇ ಇದ್ದು ಸಿರಾಜ್ ಎಂಬವರು ಇದರ ಮಾಲಕರಾಗಿದ್ದಾರೆ. ಇವತ್ತು ನಸುಕಿನ 3,3:30ರ ಸರಿಹೊತ್ತಿನಲ್ಲಿ ಕಳ್ಳತನ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ದರೋಡೆಕೋರರು ಗ್ಯಾಸ್ ಕಟ್ಟರ್ ಬಳಸಿ, ಅಂಗಡಿಯ ಶಟರ್ ಬಾಗಿಲು ಮುರಿದು ಒಳನುಗ್ಗಿದ್ದಾರೆ ಎಂದು ಶಂಕಿಸಲಾಗಿದ್ದು, 25 ಲಕ್ಷ ರೂಪಾಯಿಯ ಚಿನ್ನಾಭರಣ ದೋಚಲಾಗಿದೆ ಎಂದು ಅಂದಾಜಿಸಲಾಗಿದೆ. ಕಳ್ಳರು ತಮ್ಮ ಗುರುತು ಪತ್ತೆಯಾಗದಿರಲೆಂದು ಸಿಸಿ ಟಿವಿ ಕ್ಯಾಮರಾ ಸಂಪರ್ಕವನ್ನು ಕಡಿತಗೊಳಿಸಿರುವುದನ್ನು ನೋಡಿದರೆ ಮತ್ತು ಸಿಸಿ ಟಿವಿ ಹಾರ್ಡ್ ಡಿಸ್ಕನ್ನು ಹೊತ್ತೊಯ್ದಿರುವುದನ್ನು ಪರಿಗಣಿಸಿದರೆ, ಕಳ್ಳರು ವೃತ್ತಿಪರರಾಗಿರಬಹುದೆಂಬ ಅನುಮಾನ ಮೂಡುತ್ತದೆ. ಇವರು ಜ್ಯುವೆಲ್ಲರಿ ಶಾಪ್ ನ ಶಟರ್ ಮುರಿಯಲು ಬಳಸಿದ ಸಿಲಿಂಡರ್, ಗ್ಯಾಸ್ ಕಟ್ಟರ್ ಅನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು, ಕಳ್ಳತನದ ಸಂದರ್ಭದಲ್ಲಿ ಏನೋ ಸದ್ದು ಬಂದಿರಬಹುದು ಮತ್ತು ಹೆದರಿ ಓಡಿರಬಹುದು ಎಂದು ಸಂಶಯಿಸಲಾಗುತ್ತಿದೆ. ಈ ಜ್ಯುವೆಲ್ಲರಿಗೆ ಒಬ್ಬ ಕಾವಲುಗಾರನಿದ್ದು, ಉಪ್ಪಿನಂಗಡಿ ಪೇಟೆಗೂ ಅವರೇ ಕಾವಲುಗಾರರಾಗಿದ್ದಾರೆ. ದರೋಡೆಯ ಸಂದರ್ಭದಲ್ಲಿ ಅವರು ಪೇಟೆಯ ಇತರ ಭಾಗಕ್ಕೆ ತೆರಳಿದ್ದು, ಆ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗುತ್ತಿದೆ. ಉಪ್ಪಿನಂಗಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾತ್ರವಲ್ಲ, ಶ್ವಾನದಳ ಮತ್ತು ಬೆರಳಚ್ಚುಗಾರರನ್ನೂ ಕರೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ವಾನವು ಹತ್ತಿರದ ಶಾಲೆಯ ಬಳಿಗೆ ಸಾಗಿದ್ದು, ಅಲ್ಲೇ ಜ್ಯುವೆಲ್ಲರಿಯ ಸಿಸಿ ಟಿವಿ ಕ್ಯಾಮರಾಗಳು ಸಿಕ್ಕಿವೆ ಎಂಬ ಮಾಹಿತಿಯಿದೆ.












