ಕೌಲಾಂಪುರ,ಆ.16: ದೇಶದಲ್ಲಿ ಕೋಮುವಾದಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಧಾರ್ಮಿಕ ಬೋಧಕ ಝಕೀರ್ ನಾಯ್ಕ್ ವಿರುದ್ಧ ಮಲೇಷ್ಯಾದ ಅಧಿಕಾರಿಗಳು ನೋಟಿಸು ಜಾರಿಗೊಳಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಮುಹಿಯುದ್ದೀನ್ ಯಾಸೀನ್, “ಝಾಕಿರ್ ನಾಯ್ಕ್ರೊಡನೆ ವಿವರಣೆ ಕೇಳಲಾಗಿದೆ” ಎಂಬ ವಿವರವನ್ನು ಬಹಿರಂಗಪಡಿಸಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.
ಮಲೇಷ್ಯಾದ ಹಿಂದೂಗಳಿಗೆ ಮಲಯ್ ಪ್ರಧಾನಿಗಿಂತ ಹೆಚ್ಚು ವಿಶ್ವಾಸ, ಬೆಂಬಲ ಇರುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಎಂದು ಝಾಕಿರ್ ನಾಯ್ಕ್ ಹೇಳಿಕೆ ನೀಪಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಝಾಕಿರ್ ನಾಯ್ಕ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಾನವ ಸಂಪನ್ಮೂಲ ಸಚಿವ ಎಂ. ಕುಲಶೇಖರನ್ ಆಗ್ರಹಿಸಿದ್ದರು. ಝಾಕಿರ್ ನಾಯ್ಕ್ರನ್ನು ದೇಶದಲ್ಲಿ ಇರಗೊಡಬಾರದೆಂದು ಅವರು ಹೇಳಿದ್ದರು.
ಇದೇ ವೇಳೆ, ಝಾಕಿರ್ರವರನ್ನು ಭಾರತಕ್ಕೆ ಮರಳಿ ಕಳುಹಿಸಬೇಕೆನ್ನುವ ಬೇಡಿಕೆ ಸರಕಾರಿ ಮಟ್ಟದಲ್ಲಿಯೇ ಕೇಳಿ ಬಂದಿರುವುದರಿಂದ ಮಲೇಶ್ಯನ್ ಪ್ರಧಾನಿ ಮುಹತೀರ್ ಮುಹಮ್ಮದ್ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಭಾರತದ ಏಜೆನ್ಸಿಗಳು ಎರಡು ಸಲ ಝಾಕಿರ್ ನಾಯ್ಕ್ಗಾಗಿ ಇಂಟರ್ಫೋಲನ್ನು ಸಂಪರ್ಕಿಸಿದ್ದರೂ ಅವರ ಆಗ್ರಹ ತಿರಸ್ಕರಿಸಲಾಗಿತ್ತು. ಝಾಕಿರ್ ನಾಯ್ಕ್ ವಿರುದ್ಧ ಭಾರತದ ವಿಶೇಷ ಕೋರ್ಟು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು ತದನಂತರ ಎನ್ಫೋರ್ಸ್ಮೆಂಟ್ ಇಂಟರ್ಫೋಲನ್ನು ಸಂಪರ್ಕಿಸಿತ್ತು. ಶೇ.60ರಷ್ಟು ಮುಸ್ಲಿಂ ಬಹುಸಂಖ್ಯಾತರಿರುವ ಮಲೇಶ್ಯದಲ್ಲಿ ಒಟ್ಟು ಜನಸಂಖ್ಯೆ 32 ದಶಲಕ್ಷವಾಗಿದ್ದು ಇದರಲ್ಲಿ ಚೀನಾ ಸಹಿತ ಭಾರತೀಯರೂ ಸೇರಿದ್ದಾರೆ. ಇವರಲ್ಲಿ ಭಾರತೀಯ ಮೂಲದವರ ಸಂಖ್ಯೆ ಅಧಿಕವಿದೆ.












