ಬೆಂಗಳೂರಿನಿಂದ ಮಂಗಳೂರು ಬಸ್ ಪ್ರಯಾಣಕ್ಕೆ 200% ದರ ಹೆಚ್ಚಳ: ಸಾರ್ವಜನಿಕರ ಅಸಮಾಧಾನ; ಇದು ದಸರಾ ಉಡುಗೊರೆ ಎಂದು ವ್ಯಂಗ್ಯ

0
810

ದಸರಾ ಮತ್ತು ನವರಾತ್ರಿಯ ಸಮಯದಲ್ಲಿ ಕನ್ನಡಿಗರನ್ನು ದೋಚುವುದಕ್ಕೆ ಖಾಸಗಿ ಬಸ್ ಸಂಸ್ಥೆಗಳು ಈಗಾಗಲೇ ಸಜ್ಜಾಗಿ ನಿಂತಿವೆ. ರಾಜ್ಯದ ಇತರೆಡೆಗಳಿಂದ ಬೆಂಗಳೂರಿಗೆ ಬರುವ ಬಸ್ಸುಗಳಿಗೆ ಖಾಸಗಿ ಬಸ್ ಸಂಸ್ಥೆಗಳು ಏರಿಸಿರುವ ಮೊತ್ತವನ್ನು ನೋಡಿದರೆ ನೀವು ದಂಗಾಗುವಿರಿ. ಎಷ್ಟು ಗೊತ್ತೇ? ಬರೋಬ್ಬರಿ 200%. KSRTC ಯೂ ಈ ದೋಚುವ ಕೃತ್ಯದಲ್ಲಿ ಹಿಂದೆ ಬಿದ್ದಿಲ್ಲ. 35% ದಿಂದ 63% ಗಳವರೆಗೆ ದರ ಏರಿಸಿ ಕುಳಿತಿದೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಸಾಮಾನ್ಯ ಸಂದರ್ಭದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವುದಾದರೆ, ಏಸಿ ರಹಿತ ಸ್ಲೀಪರ್ ಪ್ರಯಾಣಕ್ಕೆ 500 ರೂಪಾಯಿ ಮತ್ತು ಎಸಿ ಸಹಿತ ಸ್ಲೀಪರ್ ಪ್ರಯಾಣಕ್ಕೆ 900 ರೂಪಾಯಿ ಇದೆ. ಆದರೆ, ಹಬ್ಬದ ಸಮಯದಲ್ಲಿ ಈ ಲೆಕ್ಕಾಚಾರದೊಂದಿಗೆ ಬೆಂಗಳೂರಿನಿಂದ ಯಾರಾದರೂ ಟಿಕೆಟ್ ಬುಕ್ ಮಾಡಿದರೆ ಅವರು ಬೆಚ್ಚಿ ಬೀಳುವುದು ಖಂಡಿತ. ಅಕ್ಟೊಬರ್ 18 ರಂದು ಆಯುಧ ಪೂಜೆ. ಇದಕ್ಕಿಂತ ಒಂದು ದಿನ ಮೊದಲಿನಿಂದ ಅಂದರೆ ಅಕ್ಟೊಬರ್ 17 ರಿಂದ ಅಕ್ಟೊಬರ್ 21 ರವರೆಗೆ ಟಿಕೆಟ್ ದರವನ್ನು ಖಾಸಗಿ ಬಸ್ ಸಂಸ್ಥೆಗಳು 200% ಹೆಚ್ಚುಗೊಳಿಸಿವೆ. ಈ ಅವಧಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಯಾರಾದರೂ ಪ್ರಯಾಣಿಸುವುದಾದರೆ, ರೂ. 500 ಜಾಗದಲ್ಲಿ 1000 ರೂಪಾಯಿ ಮತ್ತು ರೂ. 900 ರ ಜಾಗದಲ್ಲಿ 200 ರೂಪಾಯಿಯನ್ನು ತೆರಬೇಕಾಗಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯ ಸಮಯದಲ್ಲಿ ಸಾಮಾನ್ಯ ಪ್ರಯಾಣಕ್ಕೆ 450 ರೂಪಾಯಿ ಮತ್ತು ಎಸಿಗೆ 2000 ರೂಪಾಯಿ ದರ ವಿಧಿಸಲಾಗುತ್ತಿದ್ದರೆ, ಹಬ್ಬದ ಈ ಅವಧಿಯಲ್ಲಿ ಅದನ್ನು 1000 ಮತ್ತು 3,500 ರೂಪಾಯಿಗಳಿಗೆ ಏರಿಸಲಾಗಿದೆ.

ಕಾರವಾರದಿಂದ ಬೆಂಗಳೂರಿಗೆ ಸಾಮಾನ್ಯ ಸಂದರ್ಭದಲ್ಲಿ ಸಾಮಾನ್ಯ ಪ್ರಯಾಣಕ್ಕೆ 450 ರೂ. ಮತ್ತು ಎಸಿಗೆ 1000 ರೂ. ಇದ್ದು ಅದು ಹಬ್ಬದ ಸಮಯದಲ್ಲಿ 1110 ಮತ್ತು 3000 ರೂಗಳಿಗೆ ಏರಿಕೆಯಾಗಿದೆ.

ಇದೊಂದು ದರೋಡೆ ಎಂಬ ಭಾವನೆ ಸಾರ್ವಜನಿಕರಲ್ಲೂ ಉಂಟಾಗಿದ್ದು, ಈ ಬಗ್ಗೆ ಟ್ವಿಟ್ಟರ್ ನಲ್ಲೂ ಧ್ವನಿ ಎದ್ದಿದೆ.