ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಕಾರ್ಕಳದ ನಾಸಿರಾ ಬಾನು; ಸದ್ದಿಲ್ಲದೇ ಸಾಧನೆ ಮಾಡಿದ ಕರಾವಳಿಯ ಹಳ್ಳಿ ಹುಡುಗಿ

0
73440

ಸನ್ಮಾರ್ಗ ವರದಿ-

ಕಾರ್ಕಳ: ಇಲ್ಲಿಗೆ ಸಮೀಪದ ಬಜಗೋಳಿ ಎಂಬ ಗ್ರಾಮೀಣ ಪ್ರದೇಶದ ಪ್ರತಿಭೆಯೊಂದು ಸದ್ದಿಲ್ಲದೇ ಸಾಧನೆಯೊಂದರ ಹಾದಿಯಲ್ಲಿದೆ. ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಇತ್ತೀಚಿಗೆ ನಡೆದ ಎರಡು ಹಂತದ ಪರೀಕ್ಷೆ ಮತ್ತು ಆ ಬಳಿಕ ನಡೆದ ಸಂದರ್ಶನ- ಹೀಗೆ ಈ ಮೂರೂ ಹಂತಗಳಲ್ಲೂ ಸೈ ಅನಿಸಿಕೊಂಡು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವುದಲ್ಲದೆ, ಇದೀಗ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಪ್ರತಿಭೆಯೇ ನಾಸಿರಾ ಬಾನು ಎಂಬ ಈ ಹಳ್ಳಿ ಹುಡುಗಿ. ಕಾರ್ ಡ್ರೈವಿಂಗ್ ಸ್ಕೂಲ್ ನಲ್ಲಿ ಚಾಲಕರಾಗಿ ದುಡಿಯುತ್ತಿರುವ ಆಲಿಯಬ್ಬ ಮತ್ತು ನೆಬಿಸಾ ಅವರ ಒಂದು ಗಂಡು ಮೂರು ಹೆಣ್ಣು ಮಕ್ಕಳ ಪೈಕಿ ಕೊನೆಯವರು ಈ ನಾಸಿರಾ.

ನಾಸಿರಾ ಅವರು ಸಾಗಿ ಬಂದ ಹಾದಿ ಹೂವಿನದ್ದಲ್ಲ, ಮುಳ್ಳಿನದು. ಹಳ್ಳಿ ಹುಡುಗಿ ಲಾ ಕಲಿಯುವುದೆಂಬುದೇ ಅಚ್ಚರಿಯ ಸಂಗತಿ. ಅದರಲ್ಲೂ ಮುಸ್ಲಿಂ ಸಮುದಾಯಾದ ಹೆಣ್ಣು ಮಗಳ ಕರಿಕೋಟು ಆಸೆ ಸುಲಭವಾಗಿ ಮನೆ ಮತ್ತು ಪರಿಸರದಲ್ಲಿ ಜೇರ್ಣವಾಗುವಂಥದ್ದಲ್ಲ. ಅಲ್ಲದೆ, ಸಾಮಾನ್ಯ ಕುಟುಂಬದ ಹೆಣ್ಣು ಮಗಳೆಂಬ ನೆಲೆಯಲ್ಲಿ ಸವಾಲುಗಳು ಇನ್ನೂ ಹೆಚ್ಚು. ನಾಸಿರಾ ಈ ಎಲ್ಲವುಗಳನ್ನು ತಣ್ಣಗೆ ಮೀರಿ ಬೆಳೆದ ಪ್ರತಿಭೆ. ತನ್ನ ಊರು ಬಜಗೋಳಿಯಲ್ಲೇ ಕಲಾ ವಿಭಾಗದಲ್ಲಿ ಪಿಯುಸಿಯನ್ನು ಪೂರ್ತಿಗೊಳಿಸಿದ ನಾಸಿರಾ, ಬಳಿಕ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದರು. ಬಳಿಕ ಕಾರ್ಕಳದ ನ್ಯಾಯವಾದಿಗಳಾದ ಕೆ ವಿಜೇಂದ್ರ ಕುಮಾರ್ ಅವರ ಬಳಿ ಅಭ್ಯಾಸ ಪಡೆದರು ಮತ್ತು ಈಗ ಜಿ ಮುರಳೀಧರ ಭಟ್ ಅವರ ಬಳಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಬ್ಬರ ಬಳಿ ಕಳೆದ ಎಂಟು ವರ್ಷಗಳಿಂದ ತಾನು ಪಡೆದ ತರಬೇತಿಯು ಅಪೂರ್ವ ಕಲಿಕೆಯಾಗಿದೆ ಎಂದು ನಾಸಿರಾ ಹೇಳುತ್ತಾರೆ.

ಸಿವಿಲ್ ನ್ಯಾಯಾಧೀಶರ ಹುದ್ದೆಗಾಗಿ ಇತ್ತೀಚೆಗೆ ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ 2074 ಅಭ್ಯರ್ಥಿಗಳು ಹಾಜರಾಗಿದ್ದರು. ಆ ಬಳಿಕ ದ್ವಿತೀಯ ಹಂತದ ಪರೀಕ್ಷೆಯೂ ನಡೆಯಿತು. ಅದರಲ್ಲೂ ತೇರ್ಗಡೆಯಾದರು. ಕೊನೆಗೆ ಸಂದರ್ಶನಕ್ಕೆ ಕರೆ ಪಡೆದ 52 ಮಂದಿಯಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಆ 52 ಮಂದಿಯಿಂದ ಆಯ್ಕೆಯಾದ 15 ಮಂದಿಯಲ್ಲಿ ಬ್ಯಾರಿ ಸಮುದಾಯದ ಈ ನಾಸಿರಾ ಕೂಡ ಒಬ್ಬರು.

ನಾಸಿರಾ ಅವರಿಗೆ ತಾವು ಸಾಗಿ ಬಂದ ಹಾದಿಯ ಬಗ್ಗೆ ಅರಿವಿದೆ. ಸಾಗಬೇಕಾದ ದಾರಿಯ ಬಗ್ಗೆಯೂ ಗೊತ್ತಿದೆ. ಜೊತೆಗೇ, ಕುತೂಹಲ, ಕಲಿಕಾ ಆಸಕ್ತಿಯೂ ಇದೆ. ಕಳೆದ ಒಂದು- ಒಂದೂವರೆ ದಶಕಗಳಿಂದೀಚೆಗೆ ಮುಸ್ಲಿಂ ಸಮುದಾಯದಲ್ಲಿ ಅದರಲ್ಲೂ ಬ್ಯಾರಿ ಸಮುದಾಯದಲ್ಲಿ ಉಂಟಾಗಿರುವ ಶೈಕ್ಷಣಿಕ ಜಾಗೃತಿಯ ಫಲಿತಾಂಶ ಈ ಹೆಣ್ಣುಮಗಳು. ನಾಸಿರಾರಿಗೆ ಶುಭವಾಗಲಿ. ಸಾಧನೆಯ ಇನ್ನಷ್ಟು ಎತ್ತರಕ್ಕೆ ಏರಲಿ.