ಉಮರ್ ಖಾಲಿದ್ ಗೆ ಜಾಮೀನು ಕೊಡಿ, ಗಲಭೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ: ರಾಷ್ಟ್ರಮಟ್ಟದಲ್ಲಿ ಇ-ಮೇಲ್ ಕ್ಯಾಂಪೇನ್

0
67

ಸನ್ಮಾರ್ಗ ವಾರ್ತೆ

ನಾಲ್ಕು ವರ್ಷಗಳಿಂದ ಜೈಲಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರ ಬಿಡುಗಡೆಗೆ ಒತ್ತಾಯಿಸಿ, ದೇಶಾದ್ಯಂತ ಇಮೇಲ್ ಕ್ಯಾಂಪೇನ್ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 1 ಲಕ್ಷ ಇಮೇಲ್ ಕಳಿಸುವ ಗುರಿಯೊಂದಿಗೆ ಈ ಕ್ಯಾಂಪೇನ್ ಪ್ರಾರಂಭವಾಗಿದೆ.

ಉಮರ್ ಖಾಲಿದ್ ಅವರ ಜಾಮೀನು ಕೋರಿಕೆಯನ್ನು ತಕ್ಷಣವೇ ಪರಿಗಣಿಸಬೇಕು, ಅವರ ವಿರುದ್ಧದ ಪ್ರಕರಣಗಳ ಮರು ವಿಶ್ಲೇಷಣೆ ನಡೆಯಬೇಕು ಮತ್ತು 2020ರ ದೆಹಲಿ ಗಲಭೆಯ ಕುರಿತಂತೆ ಪಕ್ಷಪಾತ ರಹಿತ ತನಿಖೆ ನಡೆಯಬೇಕು ಎಂದು ಈ ಕ್ಯಾಂಪೇನ್ ನಲ್ಲಿ ಆಗ್ರಹಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಉಮರ್ ಖಾಲಿದ್ 2020 ಸೆಪ್ಟೆಂಬರ್ 13 ರಿಂದ ಜೈಲಿನಲ್ಲಿ ಇದ್ದಾರೆ. ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ನಡೆಯದೆ 1500 ರಷ್ಟು ದಿನಗಳನ್ನು ಓರ್ವ ವ್ಯಕ್ತಿ ಜೈಲಲ್ಲಿ ಕಳೆಯುವುದೆಂದರೆ ಅದು ನ್ಯಾಯಾಂಗದ ಪಾಲಿನ ಅತ್ಯಂತ ಕಡುಕೆಟ್ಟ ಕತ್ತಲೆ ಎಂದು ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಆಕ್ಟಿವಿಸ್ಟ್ ವಿನಯ್ ಕುಮಾರ್ ಹೇಳಿದ್ದಾರೆ.

ದೆಹಲಿ ಹೈಕೋರ್ಟು ನವಂಬರ್ 25 ರಂದು ಉಮರ್ ಖಾಲಿದ್ ರ ಜಾಮೀನು ಕೋರಿಕೆ ಅರ್ಜಿಯನ್ನು ಪರಿಗಣಿಸಲಿದೆ ಎಂದು ವರದಿಯಾಗಿದೆ. ಜಸ್ಟಿಸ್ ನವೀನ್ ಚಾವ್ಲಾ ಮತ್ತು ಸಲೀಂದರ್ ಕೌರ್ ಅವರ ಪೀಠ ಈ ಜಾಮೀನು ಕೋರಿಕೆಯ ಅರ್ಜಿಯನ್ನು ಪರಿಗಣಿಸಲಿದೆ.