ಮಿರ್ಜಾ ಗಾಲಿಬ್ ರನ್ನು ನೆನಪಿಸಿದ ಗೂಗಲ್

0
2841

ಇರ್ಶಾದ್ ಬೆಂಗಳೂರು

220 ನೇ ಜನ್ಮ ದಿನೋತ್ಸವದ ಪ್ರಯುಕ್ತ ಇಂದು ಗೂಗಲ್ ಗಾಲಿಬ್ ರ ಡೂಡಲ್ ಮಾಡುವ ಮೂಲಕ ಅವರನ್ನು ಸ್ಮರಿಸಿಕೊಂಡಿದೆ.
ಉರ್ದು ಕವಿಗಳಲ್ಲಿ ಅಗ್ರಗಣ್ಯರಾದ ಮಿರ್ಜಾ ಗಾಲಿಬ್ ಎಂಬ ಕಾವ್ಯ ನಾಮದಿಂದ ಪ್ರಖ್ಯಾತವಾಗಿದ್ದ ಮಿರ್ಜಾ ಅಸದುಲ್ಲಾ
ಖಾನ್ ಅವರ ಜನನ ಡಿಸೆಂಬರ್ 27, 1797 ರಲ್ಲಿ ಆಗ್ರಾದಲ್ಲಿ ಆಯಿತು (ಆಗ ಆಗ್ರಾ ಅಕ್ಬರಾಬಾದ್ ಅನಿಸಿಕೊಳ್ಳುತ್ತಿತ್ತು)
ಬದುಕಿದ್ದಾಗಲೇ ಅವರ ಕಾವ್ಯಪ್ರತಿಭೆಯ ಬಗ್ಗೆ ಜನರು ಸಮ್ಮಿಶ್ರ ಅಭಿಪ್ರಾಯನ್ನು ವ್ಯಕ್ತಪಡಿಸಿದ್ದರು. ಅವರ ಮರಣದ ನಂತರವೂ ಅವರ ಕಾವ್ಯಕಸಬು ಮತ್ತು ಪ್ರತಿಭೆ ಕುರಿತು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಕೆಲವರು ಇವನೇನು ಮಹಾ ಎಂದು ಮೂದಲಿಸಿದ್ದರು. ಆದರೆ ಅವರ ಕಾವ್ಯ ವಿದೇಶಗಳಲ್ಲಿ ಮಾನ್ಯತೆ ಪಡೆದ ನಂತರ ನಮ್ಮ ದೇಶದ ಹಲವು ವಿದ್ವಾಂಸರು ಕಣ್ಣು ತೆರೆದರು.
ಕಾವ್ಯದ ಜೊತೆಗೆ ದುಬಾರಿ ಮನರಂಜನೆಗಳ ಚಟವನ್ನೂ ಗಾಲಿಬ್ ಬೆಳೆಸಿಕೊಂಡಿದ್ದರು. ಪಗಡೆ ಆಟ ಮತ್ತು ಮದ್ಯದ ದಾಸರಾಗಿದ್ದರು.
ಕುಡಿಯುವ ಹವ್ಯಾಸ ಕೊನೆ ತನಕವೂ ಅವರನ್ನು ಬಿಡಲಿಲ್ಲ.
ತನ್ನ ಬಗ್ಗೆ ಅವರೇ ಹೇಳಿಕೊಳ್ಳುವುದು ಹೀಗೆ –
ಎ ಮಸಾಯಿಲೆ ತಸವ್ವುಫ್ ,
ಎ ತೆರಾ ಬಯಾನ್ ಗಾಲಿಬ್,
ತುಝೆ ಹಮ್ ವಲಿ ಸಮಝ್ತೆ
ಜೋ ನ ಬಾದಖ್ವಾರ್ ಹೋತಾ.
(ಈ ನಿನ್ನ ಸೂಫಿ ಸಿದ್ಧಾಂತಗಳನ್ನು ಚರ್ಚಿಸುವ ರೀತಿ, ಈ ನಿನ್ನ ವಿಶಿಷ್ಟ ಶೈಲಿ ; ಗಾಲಿಬ್ ನಿನ್ನನ್ನು ನಾವು ಸಂತನೆನ್ನುತ್ತಿದ್ದೆವು ಕುಡಿಯದೇ ಇರುತ್ತಿದ್ದರೆ)
ಮಿರ್ಜಾ ಬದುಕಿದ್ದ ಕಾಲದಲ್ಲಿ ಹಲವಾರು ರಾಜಕೀಯ ಮತ್ತು ಸಾಮಾಜಿಕ ಆಂದೋಲನಗಳು ನಡೆದರೂ ಅವರು ಕಾವ್ಯದಲ್ಲಿ ಅದರ ಉಲ್ಲೇಖ ಮಾಡಿಲ್ಲ.
ಅವರು ಸದಾ ನಿರ್ಲಿಪ್ತ ಪ್ರೇಕ್ಷಕನ ಹಾಗೆ ಬದುಕನ್ನು, ಸಾಂಸ್ಕೃತಿಕ ಹಾಗೂ ರಾಜಕೀಯ ಏರುಪೇರುಗಳನ್ನು ಗಮನಿಸುತ್ತಿದ್ದಂತೆ ತೋರುತ್ತದೆ.
‘ ದಿವಾನೆ ಗಾಲಿಬ್ ‘ ಅವರ ಕಾವ್ಯ ಸಂಗ್ರಹವಾಗಿದೆ.
ಅತ್ಯಂತ ಸ್ವಾಭಿಮಾನಿಯಾಗಿದ್ದ ಅವರು ರಾಜರ, ಶ್ರೀಮಂತರ ಮುಂದೆ ಎಂದೂ ತಲೆ ಬಾಗಲಿಲ್ಲ. ಪದವಿ ಪುರಸ್ಕಾರಗಳಿಗಾಗಿ ಹಾತೊರೆಯಲಿಲ್ಲ.
ಆದರೆ ತಮ್ಮ ಹಕ್ಕಿಗಾಗಿ ಹೋರಾಡಿದರು.
ಮತಾಂಧತೆ ಮತ್ತು ಗೊಡ್ಡು ತತ್ವಗಳಿಂದ ಗಾಲಿಬ್ ಸದಾ ಮುಕ್ತರಿದ್ದರು. ತಮ್ಮ ಅತ್ಯಂತ ಪ್ರಿಯ ಶಿಷ್ಯರಾದ ಮುನ್ಷಿ ಹರ್ ಗೋಪಾಲ್ ತಫ್ತ ಅವರಿಗೆ ಹೀಗೆ ಬರೆಯುತ್ತಾರೆ-
” ಎಲ್ಲಾ ಮಾನವರು ಮುಸಲ್ಮಾನ , ಹಿಂದೂ , ಕ್ರೈಸ್ತ – ನನಗೆ ಪ್ರಿಯರಾದವರು ಮತ್ತು ನಾನೆಲ್ಲರನ್ನೂ ಸಹೋದರರೆಂದು ಭಾವಿಸುತ್ತೇನೆ. ”
ಹಜಾರೋಂ ಖಾಹಿಷೆಂ ಐಸಿ ಕೆ ಹರ್ ಖಾಹಿಷ್ ಪೆ ದಮ್ ನಿಕಲೆ
ಬಹುತ್ ನಿಕಲೆ ಮೇರೆ ಅರಮಾನ್ ಲೇಕಿನ್ ಕಮ್ ನಿಕಲೆ
( ಸಾವಿರಾರು ಆಸೆಗಳು ಎಂಥವೆಂದರೆ ಒಂದೊಂದು ಆಸೆಯ ಭಾರಕ್ಕೂ ಉಸಿರು ನಿಂತು ಹೋಗುತ್ತದೆ/ ನನ್ನ ಹಲವಾರು ಆಸೆಗಳು ಫಲಿಸಿದವು , ಆದರೂ ಫಲಿಸದುದು ಕೆಲವೇ ಮಾತ್ರ )
ಅವರ ಅತ್ಯಂತ ಜನಪ್ರಿಯ ದ್ವಿಪದಿಗಳಲ್ಲೊಂದಾಗಿದೆ.

ಮೃತರಾಗುವುದಕ್ಕೆ ಕೆಲವು ದಿನ ಮೊದಲು ಅವರು ತಮ್ಮದೇ ಆದ ದ್ವಿಪದಿಯನ್ನು ಪದೇ ಪದೇ ಹೇಳುತ್ತಿದ್ದರು
ದಮೆ ವಾಪಸಿ ಬರ್ ಸರೆ ರಾಹ್ ಹೈ ಯಾರೋಂ ,
ಬಸ್ ಅಬ್ ಅಲ್ಲಾಹ್ ಹಿ ಅಲ್ಲಾಹ್ ಹೈ
(ನನ್ನ ಉಸಿರು ಈಗ ತನ್ನ ದಾರಿ ಹಿಡಿದಿದೆ ಗೆಳೆಯರೇ , ನನಗುಳಿದವನೀಗ ಅಲ್ಲಾಹ್ ಮಾತ್ರ )

ಗಜಲ್ , ದ್ವಿಪದಿಗಳನ್ನು ಬರೆಯವುದರ ಮೂಲಕ ಭಾರತೀಯ ಸಾಹಿತ್ಯದ ಅತ್ಯುತ್ತಮ ಕವಿಗಳಲ್ಲೊಬ್ಬರಾಗಿ ಗುರುತಿಸಿಕೊಂಡ ಗಾಲಿಬ್ 1869 ಫೆಬ್ರುವರಿ 15 ರಂದು ಮರಣ ಹೊಂದಿದರು.

ಹುವಿ ಮುದ್ದತ್ ಕಿ ಗಾಲಿಬ್ ಮರ್ ಗಯಾ ಪರ್ ಯಾದ್ ಆತಾ ಹೈ
ವೊ ಹರ್ ಏಕ್ ಬಾತ್ ಪರ್ ಕಹನಾ ಕೆ ಯೊಂ ಹೋತಾತೊ ಕ್ಯಾ ಹೋತಾ
(ಗಾಲಿಬ್ ಸತ್ತು ಬಹಳ ದಿನಗಳಾಗಿವೆ. ಆದರೆ ಪ್ರತಿಯೊಂದು ಮಾತಿಗೂ ಅವನು ಹೀಗಾಗಿದ್ದರೆ ಹೇಗಿರುತ್ತಿತ್ತು ಎಂದು ಹೇಳುತ್ತಿದ್ದುದು ನೆನಪಾಗುತ್ತದೆ.)

(* ಅಬ್ದುಲ್ ಮಜೀದ್ ಖಾನ್ ಅವರ ‘ ಮಿರ್ಜಾ ಗಾಲಿಬ್ ‘ ಉಪನ್ಯಾಸ ಗ್ರಂಥಮಾಲೆಯ ಸಹಾಯದಿಂದ)