ರವೀಶ್ ಕುಮಾರ್ ಯೂಟ್ಯೂಬ್ ಚಾನೆಲ್ ಗೆ ಒಂದು ಕೋಟಿ ಚಂದಾದಾರರು!

0
1348

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಖ್ಯಾತ ಪತ್ರಕರ್ತ ಹಾಗೂ ಎನ್‌ಡಿಟಿವಿಯ ಮಾಜಿ ಕಾರ್ಯಕಾರಿ ಸಂಪಾದಕ ರವೀಶ್‌ ಕುಮಾ‌ರ್ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದು, ಅವರ ಯೂಟ್ಯೂಬ್ ಚಾನೆಲ್ ಚಂದಾದಾರರ ಸಂಖ್ಯೆ ಒಂದು ಕೋಟಿಯನ್ನು ಮೀರಿದೆ.

ಅಕ್ಟೋಬರ್ 2022ರಲ್ಲಿ ರವೀಶ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದರು. ಆದರೆ ಅವರು ಅದರಲ್ಲಿ ನಿಯಮಿತವಾಗಿ ಕಾರ್ಯಕ್ರಮ ನೀಡಲು ಶುರು ಮಾಡಿದ್ದು ಎನ್ ಡಿ ಟಿ ವಿ ಗೆ ರಾಜೀನಾಮೆ ನೀಡಿದ ಬಳಿಕ ಡಿಸೆಂಬರ್ 2022 ರಲ್ಲಿ. ಈಗ 17 ತಿಂಗಳ ಅಂತರದಲ್ಲಿ ಅವರು ಕೋಟಿ Subscribers ಪಡೆದ ಸಾಧನೆ ಮಾಡಿದ್ದಾರೆ.

ಡಿಸೆಂಬರ್ 1, 2022ರಂದು ವಿಡಿಯೊ ಮೂಲಕ ಎನ್‌ಡಿಟಿವಿಯಿಂದ ತಾವು ನಿರ್ಗಮಿಸುತ್ತಿರುವ ಕುರಿತು ಅವರು ಪ್ರಕಟಿಸಿದ ನಂತರ, ತಮ್ಮ ಯೂಟ್ಯೂಬ್ ವೇದಿಕೆ ಮೂಲಕ ಅವರು ತಮ್ಮ ಒಳನೋಟಗಳು ಹಾಗೂ ಹಲವಾರು ವಿಷಯಗಳ ಕುರಿತು ತಮ್ಮ ವಿಶ್ಲೇಷಣೆಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದರು.

ರವೀಶ್‌ ಕುಮಾ‌ರ್ ಅವರ ಆಕರ್ಷಕ ನಿರೂಪಣೆ, ನವಿರಾದ ಹಿಂದಿ ಭಾಷೆ, ಒಳನೋಟಗಳುಳ್ಳ ವಿಶ್ಲೇಷಣೆ ಹಾಗೂ ಸ್ವತಂತ್ರ ನಿಲುವಿನ ಕಾರಣಕ್ಕೆ ಅವರ ಯೂಟ್ಯೂಬ್ ಚಾನೆಲ್ ಅಲ್ಪ ಸಮಯದಲ್ಲೇ ವ್ಯಾಪಕ ಜನಪ್ರಿಯತೆಯನ್ನು ಸಂಪಾದಿಸಿದೆ. ನಿರಂತರವಾಗಿ ಅವರು ತಮ್ಮ ವಿಡಿಯೊಗಳಿಗೆ ಲಕ್ಷಾಂತರ ವೀಕ್ಷಕರನ್ನು ಆಕರ್ಷಿಸುತ್ತಿದ್ದಾರೆ.

ಎನ್‌ಡಿಟಿವಿಯಲ್ಲಿ 27 ವರ್ಷಗಳನ್ನು ಕಳೆದಿದ್ದ, ಅಲ್ಲಿ ಹಿರಿಯ ಕಾರ್ಯಕಾರಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ರವೀಶ್‌ ಕುಮಾ‌ರ್, ಹಲವಾರು ಪ್ರಮುಖ ಕಾರ್ಯಕ್ರಮಗಳ ನಿರೂಪಕರಾಗಿದ್ದರು. ಡಿಜಿಟಲ್ ಮಾಧ್ಯಮಕ್ಕೆ ರೂಪಾಂತರಗೊಂಡಿರುವ ರವೀಶ್ ಕುಮಾ‌ರ್ ಈಗ ಯುಟ್ಯೂಬ್ ನಲ್ಲಿ ದೇಶದ ಕೆಲವು ಪ್ರತಿಷ್ಠಿತ ಟಿವಿ ಚಾನಲ್ ಗಳಿಗಿಂತಲೂ ಹೆಚ್ಚು ಜನಪ್ರಿಯರಾಗಿದ್ದಾರೆ.

NDTV ಅದಾನಿ ತೆಕ್ಕೆಗೆ ಹೋದ ಬೆನ್ನಿಗೇ ಅವರು ರಾಜೀನಾಮೆ ಪ್ರಕಟಿಸಿದ್ದರು. ಭಾರತದಲ್ಲಿ ಪತ್ರಕರ್ತರು ವ್ಯಾಪಕ ಪ್ರಮಾಣದಲ್ಲಿ ಎದುರಿಸುತ್ತಿರುವ ಬೆದರಿಕೆಗಳು ಹಾಗೂ ಒತ್ತಡಗಳಂತಹ ಸವಾಲುಗಳಿಂದಲೂ ಅವರ ನಿರ್ಧಾರ ಪ್ರಭಾವಿತವಾಗಿತ್ತು. ಸರಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವುದಕ್ಕೆ ಹೆಸರಾಗಿರುವ ಅದಾನಿ ಸಮೂಹವು ಎನ್‌ಡಿಟಿವಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಿಂದ ರವೀಶ್ ಕುಮಾ‌ರ್ ಅವರ ಖಾಸಗಿ ಮೊಬೈಲ್ ಸಂಖ್ಯೆಗೆ ಬೆದರಿಕೆ ಕರೆಗಳು ಬಂದಿದ್ದವು.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ರಾಜಿನಾಮೆಯನ್ನು ಪ್ರಕಟಿಸಿದ್ದ ರವೀಶ್‌ ಕುಮಾರ್, ಹಲವಾರು ವರ್ಷಗಳಿಂದ ತಮಗೆ ಅಚಲ ಬೆಂಬಲ ನೀಡಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದರು. ದೇಶವನ್ನು ವಿಭಜಿಸುತ್ತಿರುವ ನಿರಂಕುಶಾಧಿಕಾರಿ ಶಕ್ತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅವರು, ಭಾರತದಲ್ಲಿನ ಪತ್ರಿಕೋದ್ಯಮ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದರು. ಈ ಸ್ಥಿತಿಯನ್ನು ಅವರು “ಪತ್ರಿಕೋದ್ಯಮದ ಕರಾಳ ಯುಗ” ಎಂದು ಬಣ್ಣಿಸಿದ್ದರು.

ಸ್ವತಂತ್ರ ಡಿಜಿಟಲ್ ಮಾಧ್ಯಮ ಉಪಸ್ಥಿತಿಯಲ್ಲಿ ಮುಂದುವರಿಯಲು ಮುಖ್ಯ ವಾಹಿನಿ ಮಾಧ್ಯಮದಿಂದ ನಿರ್ಗಮಿಸಿದ್ದ ರವೀಶ್ ಕುಮಾರ್, ಭಾರತೀಯ ಪತ್ರಕರ್ತರಲ್ಲಿ ಬೆಳೆಯುತ್ತಿರುವ ಹೊಸ ಪ್ರವೃತ್ತಿಗೆ ಕನ್ನಡಿಯಾಗಿದ್ದರು. ಹಾಲಿ ರಾಜಕೀಯ ವಾತಾವರಣದಲ್ಲಿ ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಲು ಹಲವರು ಯೂಟ್ಯೂಬ್ ಹಾಗೂ ಸಾಮಾಜಿಕ ಮಾಧ್ಯಮಗಳಂತಹ ವೇದಿಕೆಗಳನ್ನು ಬಳಸಿಕೊಳ್ಳುವ ಆಯ್ಕೆ ಮಾಡಿಕೊಂಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಿರುವ ರವೀಶ್ ಕುಮಾ‌ರ್, ಜ್ವಲಂತ ಸಮಸ್ಯೆಗಳ ಕುರಿತು ತಮ್ಮ ಕಾಣೆಯನ್ನು ಒದಗಿಸುವ ಮೂಲಕ ಭಾರತದಲ್ಲಿನ ಪತ್ರಿಕೋದ್ಯಮದ ಕುರಿತ ವ್ಯಾಖ್ಯೆಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here