ಲೆಬನಾನ್‌: ಮನೆಯೊಂದರ ಮೇಲೆ ಇಸ್ರೇಲ್ ದಾಳಿ 19 ಮಂದಿ ಸಾವು

0
32

ಸನ್ಮಾರ್ಗ ವಾರ್ತೆ

ಬೈರೂತ್ : ದಕ್ಷಿಣ ಲೆಬನಾನ್‌ನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಆರು ಮಹಿಳೆಯರು ಮತ್ತು ಐದು ಮಕ್ಕಳನ್ನು ಒಳಗೊಂಡಂತೆ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಲೆಬನಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೀಡಾದವರಲ್ಲಿ, ಶಾಲೆಯ ಮಾಜಿ ಮುಖ್ಯೋಪಾಧ್ಯಾಯ ಅಹ್ಮದ್ ಎಝೆಡಿನ್ ಮತ್ತು ಅವರ ಕುಟುಂಬದ ಮೂರು ತಲೆಮಾರು ಸೇರಿದ್ದಾರೆ ಎಂದು ಸೌದ್ ಹಮ್ಮೌದ್ ಬಿಬಿಸಿಗೆ ತಿಳಿಸಿದರು. ಈ ಕುಟುಂಬವು ತೆಫಹತಾ ಗ್ರಾಮದ ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟಾಗಿ ವಾಸಿಸುತ್ತಿತ್ತು.

ಈ ದಾಳಿಯಲ್ಲಿ ಒಂದೇ ಗ್ರಾಮದ ಇಮಾಮ್ ಶೇಖ್ ಅಬ್ದೋ ಕೂಡ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ದಾಳಿ ನಡೆದಾಗ, ಇಮಾಮ್ ಇಬ್ಬರು ವ್ಯಕ್ತಿಗಳೊಂದಿಗೆ ಕಟ್ಟಡದ ಬಳಿ ನಡೆದುಕೊಂಡು ಹೋಗುತ್ತಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಇಸ್ರೇಲಿ ಸೇನೆಯ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ನಾಗರಿಕರನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪದೇ ಪದೇ ಇಸ್ರೇಲಿ ಅಧಿಕಾರಿಗಳು ಹೇಳಿದರೂ ಕಳೆದ ನಾಲ್ಕು ವಾರಗಳಲ್ಲಿ ಇಸ್ರೇಲಿ ಸೇನೆಯು ಲೆಬನಾನ್‌ನಲ್ಲಿ ಸಾವಿರಾರು ವೈಮಾನಿಕ ದಾಳಿಗಳನ್ನು ನಡೆಸಿದೆ.