ಹಿಮಾಚಲ ಪ್ರದೇಶದಲ್ಲಿ ಸಂಘ ಪರಿವಾರದಿಂದ ಪರ್ಯಾಯ ಸರ್ಕಾರ: ಸತ್ಯಶೋಧನಾ ವರದಿಯನ್ನು ಬಿಡುಗಡೆಗೊಳಿಸಿದ ಎಪಿಸಿಆರ್

0
53

ಸನ್ಮಾರ್ಗ ವಾರ್ತೆ

ಹಿಮಾಚಲ ಪ್ರದೇಶದಲ್ಲಿ ದಿನೇ ದಿನೇ ಮುಸ್ಲಿಂ ದ್ವೇಷದ ವಾತಾವರಣ ಹೆಚ್ಚುತ್ತಿದ್ದು ಈ ಬಗ್ಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ಸಂಘಟನೆಯು ಸತ್ಯಶೋಧನಾ ವರದಿಯನ್ನು ಬಿಡುಗಡೆಗೊಳಿಸಿದೆ.

ಶಿಮ್ಲಾ ಸಂಜೋಲಿ ಮಂಡಿ ಸೋಲಾನ್ ಕುಲ್ಲು ಮತ್ತು ಪಲಾಂಪುರ್ ಪ್ರದೇಶಗಳಲ್ಲಿ ತೀವ್ರ ಮುಸ್ಲಿಂ ದ್ವೇಷದ ವಾತಾವರಣವಿದ್ದು ತಕ್ಷಣ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ಕ್ರಿಯೇಟಿಂಗ್ ದಿ ಮುಸ್ಲಿಂ ಔಟ್ ಸೈಡರ್ : ಹೇಟ್ ಸ್ಪೀಚ್, ಮೈಗ್ರಾಂಟ್ ವೆಲಿನರಿ ಬಿಲಿಟಿ ಅಂಡ್ ಫಾಲ್ಟರಿಂಗ್ ಲಾ ಅಂಡ್ ಆರ್ಡರ್ ಇನ್ ಹಿಮಾಚಲ್ ಪ್ರದೇಶ್” ಎಂಬ ಶೀರ್ಷಿಕೆಯಲ್ಲಿ ಈ ಸತ್ಯಶೋಧನ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.

ದೆಹಲಿಯಲ್ಲಿ ಈ ಸತ್ಯಶೋಧನಾ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಸಂಜಯ್ ಹೆಗಡೆ, ಆಕ್ಟಿವಿಸ್ಟ್ ಸೈದಾ ಹಮೀದ್, ಶಿಮ್ಲಾದ ಮಾಜಿ ಡೆಪ್ಯುಟಿ ಮೇಯರ್ ಟಿಕೇಂದ್ರ ಪವಾರ್ ಮತ್ತು ಜರ್ನಲಿಸ್ಟ್ ಗಳಾದ ಕೌಶಿಕ್ ರಾಜ್ ಮತ್ತು ಸೃಷ್ಟಿ ಜಸ್ವಾಲ್ ಸಹಿತ ಕಾನೂನು ತಜ್ಞರು, ಮಾನವ ಹಕ್ಕು ಹೋರಾಟಗಾರರು ಮುಂತಾದವರು ಉಪಸ್ಥಿತರಿದ್ದರು.

ಎಪಿಸಿಆರ್ ನ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಅವರು ಹಿಮಾಚಲ ಸರಕಾರದ ಕಾರ್ಯವೈಖರಿಯನ್ನು ಈ ಸಭೆಯಲ್ಲಿ ತೀವ್ರವಾಗಿ ಖಂಡಿಸಿದರು. ಹಿಮಾಚಲ ಪ್ರದೇಶದಲ್ಲಿ ಸಂಘ ಪರಿವಾರವು ಸಮಾನಾಂತರ ಸರ್ಕಾರವನ್ನು ನಡೆಸುತ್ತಿದೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದವರು ಹೇಳಿದರು.

ಸತ್ಯಶೋಧನಾ ಸಮಿತಿಯಲ್ಲಿದ್ದ ಸೃಷ್ಟಿ ಜಸ್ವಾಲ್ ಅವರು ತಾವು 20 ದಿನಗಳ ಕಾಲ ಹಿಮಾಚಲದಲ್ಲಿ ಕಂಡುಂಡ ಅನುಭವವನ್ನು ಹಂಚಿಕೊಂಡರು. ಮುಸ್ಲಿಮರು ಮಾತಾಡುವುದಕ್ಕೆ ಭಯ ಪಡುತ್ತಾರೆ. ಮುಸ್ಲಿಮರಲ್ಲಿ ಗುಣನಡತೆಯ ಸರ್ಟಿಫಿಕೇಟ್ ಅನ್ನು ಪೊಲೀಸರು ಕೇಳುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದರೂ ಮುಸ್ಲಿಮರನ್ನು ಪಕ್ಷಪಾತಿತನದಿಂದ ನಡೆಸಿಕೊಳ್ಳಲಾಗುತ್ತಿದೆ. ಕೆಲವೇ ಕೆಲವು ಮಂದಿಯ ಪ್ರತಿಭಟನೆಯ ಕಾರಣಕ್ಕಾಗಿ ಸಂಜೋಲಿ ಮಸೀದಿಯ ಅಂತಸ್ತನ್ನು ಬೀಳಿಸಿರುವುದೇ ಇದಕ್ಕೊಂದು ಉದಾಹರಣೆ ಎಂದವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕೋಮು ಘರ್ಷಣೆಯನ್ನು ತಡೆಯುವುದಕ್ಕೆ ಪೂರಕವಾದ ಹತ್ತು ಸಲಹೆಗಳನ್ನು ಈ ಸತ್ಯಶೋಧನ ವರದಿಯಲ್ಲಿ ಎಪಿಸಿಆರ್ ಸರಕಾರದ ಮುಂದೆ ಇರಿಸಿದೆ.