ಅಲ್ಪಸಂಖ್ಯಾತರಿಗೆ 10% ಸೀಟು : ಬಿಜೆಪಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಅಜಿತ್ ಪವಾರ್

0
304

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಗಾಗಿ ಸೀಟು ಹಂಚಿಕೆಯ ವೇಳೆ 10% ಸೀಟುಗಳನ್ನು ಅಲ್ಪಸಂಖ್ಯಾತರಿಗೆ ಮೀಸಲಿಡುವುದಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಮುಜುಗರ ತರಿಸಿದ್ದಾರೆ. ಬಿಜೆಪಿ ಶಾಸಕ ನಿತೀಶ್ ರಾಣೆ ಮತ್ತು ಉಪಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರ ಕೋಮು ಪ್ರಚೋದನಕಾರಿ ಹೇಳಿಕೆಯ ಬಳಿಕ ಅಜಿತ್ ಪವಾರ್ ಅವರ ಈ ಹೇಳಿಕೆಯು ಬಾರಿ ಮಹತ್ವವನ್ನ ಪಡೆದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ವೋಟ್ ಜಿಹಾದ್ ನಡೆಸಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿ ಇತ್ತೀಚಿಗಷ್ಟೇ ಆರೋಪಿಸಿದ್ದರು. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ ಆಡಳಿತಾರೂಢ ಮಹಾಯುತಿ ಒಕ್ಕೂಟವು ಕೇವಲ 14 ಸ್ಥಾನಗಳನ್ನು ಪಡೆಯುವುದಕ್ಕೆ ಮುಸ್ಲಿಮರ ಯೋಜನಾ ಬದ್ಧ ಮತದಾನವೇ ಕಾರಣ ಎಂದವರು ಆರೋಪಿಸಿದ್ದರು. ಈ ಹೇಳಿಕೆಯಿಂದ ಮಹಾಯುತಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇನ್ನಷ್ಟು ತೊಂದರೆ ಉಂಟಾದೀತು ಎಂದು ಹೇಳಲಾಗಿತ್ತು. ಇದೀಗ ಅಜಿತ್ ಪವರ್ ಅವರು ಈ ಸಮಸ್ಯೆಗೆ ಮದ್ದರೆಯಲು ಪ್ರಯತ್ನಿಸಿದ್ದಾರೆ.

ಬಿಜೆಪಿ ಶಾಸಕ ನಿತೀಶ್ ರಾಣೆ ಅವರು ಇತ್ತೀಚೆಗೆ ಸರಣಿಯಾಗಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಮತ್ತು ಹೇಳಿಕೆಗಳನ್ನು ಕೂಗುತ್ತಿದ್ದಾರೆ. ಮಸೀದಿಗೆ ನುಗ್ಗಿ ಹೊಡೆಯುತ್ತೇವೆ ಎಂದು ಅವರು ಇತ್ತೀಚಿಗೆ ಬೆದರಿಸಿದ್ದರು. ಮುಸ್ಲಿಮರನ್ನು ಗುರಿ ಮಾಡುವ ರಾಜಕೀಯ ನೀತಿಯನ್ನು ಬಿಜೆಪಿ ಪದೇ ಪದೇ ವ್ಯಕ್ತಪಡಿಸುತ್ತಿರುವುದರ ನಡುವೆಯೇ ಅಜಿತ್ ಪವಾರ್ ಅವರ ಈ ಹೇಳಿಕೆ ಹೊರಬಿದ್ದಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಮಹಾಯುತಿ ಒಕ್ಕೂಟದಲ್ಲಿ ಬಿರುಕು ಮೂಡಿಸುತ್ತಾ ಎಂದು ಕಾದು ನೋಡಬೇಕಾಗಿದೆ