ಗುಜರಾತ್: ಫೂಟ್‌ಪಾತ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್; 15 ಮಂದಿ ಕಾರ್ಮಿಕರು ಮೃತ್ಯುವಶ

0
424

ಸನ್ಮಾರ್ಗ ವಾರ್ತೆ

ಸೂರತ್: ಫೂಟ್‌ಪಾತ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ನಿಯಂತ್ರಣ ಕಳೆದುಕೊಂಡ ಟ್ರಕ್‌ವೊಂದು ಹರಿದ ಪರಿಣಾಮವಾಗಿ 15 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಆರು ಜನರು ಗಂಭೀರ ಗಾಯಗೊಂಡ ಭೀಕರ ಅಪಘಾತವು ಮಂಗಳವಾರ ಗುಜರಾತ್‌ನ ಸೂರತ್‌ ನಗರದ ಕೊಸಂಬಾದಲ್ಲಿ ನಡೆದಿದೆ.

ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಇದ್ದಕ್ಕಿದ್ದಂತೆ ಫೂಟ್‌ಪಾತ್‌ಗೆ ನುಗ್ಗಿದ್ದು, ಈ ಸಂದರ್ಭದಲ್ಲಿ ಕಾರ್ಮಿಕರು ಫೂಟ್‌ಪಾತ್‌‌ನಲ್ಲಿ ಮಲಗಿದ್ದರೆಂಬುದಾಗಿ ವರದಿಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ್ದ ಎಲ್ಲರೂ ಕಾರ್ಮಿಕರಾಗಿದ್ದು, ರಾಜಸ್ಥಾನ ಮೂಲದವರಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಪ್ರಧಾನಿ ಮೋದಿ ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.