ಗೊರಖ್‌ಪುರ ದುರಂತ: 9 ತಿಂಗಳು ಜೈಲು, ಎರಡು ವರ್ಷ ಅಮಾನತು ಬಳಿಕ ಡಾ. ಕಫೀಲ್ ಖಾನ್‌ಗೆ ಕ್ಲೀನ್ ಚಿಟ್

0
943

ಗೊರಖ್‌ಪುರ,ಸೆ.27: ಉತ್ತರಪ್ರದೇಶ ಗೊರಖ್‌ಪುರ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ವಿತರಣೆ ಸ್ಥಗಿತವಾದ ಹಿನ್ನೆಲೆಯಲ್ಲಿ 60ರಷ್ಟು ಮಕ್ಕಳು ಮೃತರಾಗಲು ಕಾರಣವಾದ ದುರಂತದಲ್ಲಿ ಸ್ವಂತ ನೆಲೆಯಲ್ಲಿ ಆಕ್ಸಿಜನ್ ಆಸ್ಪತ್ರೆಗೆ ತಂದು ಕೊಟ್ಟು ಮಕ್ಕಳ ರಕ್ಷಣೆಗೆ ಯತ್ನಿಸಿದ್ದ ಡಾ. ಕಫೀಲ್ ಖಾನ್‍ರು ದೋಷಮುಕ್ತರಾಗಿ ಕ್ಲೀನ್ ಚಿಟ್ ಪಡೆದಿದ್ದಾರೆ. ದುರಂತ ನಡೆದ ಬೆನ್ನಿಗೆ ಡಾ.ಕಫೀಲ್ ಖಾನ್‍ರನ್ನು ಸರಕಾರ ಅಮಾನತುಗೊಳಿಸಿ ಆರೋಪಿ ಸ್ಥಾನಗಳಲ್ಲಿ ನಿಲ್ಲಿಸಿ ಒಂಬತ್ತು ತಿಂಗಳು ಜೈಲಿನಲ್ಲಿರಿಸಲಾಗಿತ್ತು.

ಭ್ರಷ್ಟಾಚಾರ, ಚಿಕಿತ್ಸಾ ವೈಫಲ್ಯ, ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಂಬಿತ್ಯಾದಿ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದ ತನಿಖಾ ಅಧಿಕಾರಿಗಳು ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಬಿಆರ್‍‌ಡಿ ಅಧಿಕಾರಿಗಳು ಅವರಿಗೆ ನೀಡಿದ್ದಾರೆ.

ಘಟನೆ ನಡೆಯುವಾಗ ಡಾ. ಕಫೀಲ್ ಖಾನ್ ಎನ್‍ಸೆಫಲೈಟಿಸ್ ವಾರ್ಡಿನ ನೋಡಲ್ ಅಧಿಕಾರಿಯಾಗಿದ್ದರು. ರಜೆಯಲ್ಲಿದ್ದರೂ ಸ್ವಂತವಾಗಿ 500 ಜಂಬೋ ಆಕ್ಸಿಜನ್ ಸಿಲಿಂಡರ್‍‌ಗಳನ್ನು ಸಂಗ್ರಹಿಸಿ ಮಕ್ಕಳ ಜೀವ ಉಳಿಸಲು ತಮ್ಮಿಂದಾದಷ್ಟು ಅವರು ಪ್ರಯತ್ನಿಸಿದ್ದರು.

ಆಕ್ಸಿಜನ್ ವಿತರಣೆ ಟೆಂಡರ್, ಹಣ ಪಾವತಿ ಇದರಲ್ಲಿ ಕಫೀಲ್ ಹೊಣೆಗಾರರಲ್ಲ. ಆಗಸ್ಟ್ 10-12ರವರೆಗೆ 54 ಗಂಟೆಗಳ ಕಾಲ ಆಕ್ಸಿಜನ್ ವಿತರಣೆ ತಡೆಯುಂಟಾಗಿತ್ತು ಎಂದು ದೃಢೀಕರಣವಾಗಿದೆ. ಹದಿನೈದು ಪುಟಗಳ ವರದಿಯ ವಿವರಗಳು ನ್ಯೂಸ್ 18 ಪ್ರಸಾರ ಮಾಡಿದೆ. 2017 ಆಗಸ್ಟ್‌ನಲ್ಲಿ ಶಿಶುಗಳ ಸಹಿತ 60ಕ್ಕೂ ಹೆಚ್ಚು ಮಕ್ಕಳು ಬಿಆರ್‌ಡಿ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತವಾಗಿದ್ದರಿಂದ ಮೃತಪಟ್ಟಿದ್ದರು.