ಅನಿವಾಸಿ ಭಾರತೀಯರ ಆತಂಕಕ್ಕೆ ಕಾರಣವಾದ 2000 ನೋಟು: ಕಮಿಷನ್ ದಂಧೆಗೆ ಅವಕಾಶ

0
159

ಸನ್ಮಾರ್ಗ ವಾರ್ತೆ

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಲ್ಲಿ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳಿದ್ದರೆ ಅದನ್ನು ಸ್ವದೇಶಕ್ಕೆ ಮರಳಿಸುವುದು ಒಳಿತು. ಈ ನೋಟುಗಳನ್ನು ಭಾರತ ಸರಕಾರ ಅಮಾನ್ಯ ಮಾಡಿರುವುದರಿಂದ ಕುವೈತ್ ನ ಹಣ ವಿನಿಮಯ ಸಂಸ್ಥೆಗಳು ಈಗ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಸೆಪ್ಟೆಂಬರ್ 30ರ ವರೆಗೆ ಈ ನೋಟುಗಳನ್ನು ಬದಲಿಸಿಕೊಳ್ಳುವುದಕ್ಕೆ ಅವಕಾಶವಿದ್ದು ಅನಿವಾಸಿ ಭಾರತೀಯರು ತಮ್ಮಲ್ಲಿರುವ ನೋಟುಗಳನ್ನು ಸ್ವದೇಶಕ್ಕೆ ಮರಳಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.

ಅನಿವಾಸಿ ಭಾರತೀಯರ ಕೈಯಲ್ಲಿ 2000 ಮುಖಬೆಲೆಯ ನೋಟು ಭಾರಿ ಸಂಖ್ಯೆಯಲ್ಲಿ ಇರುವ ಸಾಧ್ಯತೆ ಕಡಿಮೆ. ಆದರೆ ಇದ್ದವರು ಊರಿಗೆ ಮರಳುವವರ ಕೈಯಲ್ಲಿ ಕೊಟ್ಟು ಬದಲಾಯಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

ಸಾಮಾನ್ಯವಾಗಿ ಕುಟುಂಬ ಸಮೇತ ಗಲ್ಫ್ ನಲ್ಲಿ ಬದುಕುತ್ತಿರುವವರಲ್ಲಿ ಇಂಥ ನೋಟುಗಳು ಇರಬಹುದು. ಊರಿಗೆ ಮರಳಿದಾಗ ಖರ್ಚಿಗೆ ಬೇಕು ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳನ್ನು ಗೊತ್ತು ಪಡಿಸುವುದಕ್ಕೆ ಒಂದಿಷ್ಟು ನೋಟುಗಳನ್ನು ಸಂಗ್ರಹಿಸಿಟ್ಟಿರಬಹುದು. ಈಗಾಗಲೇ ಅಂಥವರು ಊರಿಗೆ ಮರಳುವವರಲ್ಲಿ ನೋಟುಗಳನ್ನು ಕೊಟ್ಟು ವಿನಿಮಯ ಮಾಡಿಕೊಳ್ಳಲು ವಿನಂತಿಸುತ್ತಿದ್ದಾರೆ ಮತ್ತು ಅದಕ್ಕಾಗಿ ಸಣ್ಣ ಮಟ್ಟಿನ ಕಮಿಷನ್ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.