ಸನ್ಮಾರ್ಗ ವಾರ್ತೆ
2006ರ ಮುಂಬೈ ರೈಲು ಸ್ಪೋಟದ ಆರೋಪಿಗಳೆಂದು 12 ಮಂದಿಯನ್ನು ಬಂಧಿಸಿದ್ದ ಮಹಾರಾಷ್ಟ್ರದ ಪೊಲೀಸರು ಅತ್ಯಂತ ಕ್ರೂರವಾಗಿ ಈ ಆರೋಪಿಗಳೊಂದಿಗೆ ನಡಕೊಂಡಿದ್ದರು ಮತ್ತು ಚಿತ್ರಹಿಂಸೆ ನೀಡಿದರು ಎಂದು ಬಾಂಬೆ ಹೈಕೋರ್ಟು ಹೇಳಿದೆ. 19 ವರ್ಷಗಳ ಕಾಲ ಜೈಲಲ್ಲಿದ್ದ ಇವರನ್ನು ನಿರ್ದೋಷಿಗಳು ಎಂದು ಬಾಂಬೆ ಹೈಕೋರ್ಟು ದಿನದ ಹಿಂದೆ ಬಿಡುಗಡೆಗೊಳಿಸಿತ್ತು.
ಪೊಲೀಸರು ನೀಡಿದ ಚಿತ್ರಹಿಂಸೆಯನ್ನು ತೀರ್ಪಿನಲ್ಲಿ ನ್ಯಾಯಾಧೀಶರು ವಿವರಿಸಿದ್ದಾರೆ. ಆರೋಪಿಗಳ ಎರಡು ಕಾಲನ್ನು ವಿರುದ್ಧ ದಿಕ್ಕಿಗೆ 180 ಡಿಗ್ರಿಯಲ್ಲಿ ಎಳದಿರುವುದು, ಇಡೀ ದಿನ ರಾತ್ರಿ ಕುರ್ಸಿಗೆ ಅವರನ್ನು ಕಟ್ಟಿ ಹಾಕಿರುವುದು ಬೆಳಗಿನಿಂದ ಸಂಜೆವರೆಗೆ ಆಹಾರವನ್ನು ನಿರಾಕರಿಸಿರುವುದು ಮತ್ತು ಅವರ ಅಂಡರ್ವೇರ್ ಗೆ ಇಲಿ ಮತ್ತು ಜಿರಳೆಯನ್ನು ಹಾಕಿ ಥಳಿಸಿರುವ ಕ್ರೌರ್ಯದ ಮಾಹಿತಿಯನ್ನು ತೀರ್ಪಿನಲ್ಲಿ ನೀಡಲಾಗಿದೆ.
ನ್ಯಾಯಾಧೀಶರಾದ ಅನಿಲ್ ಕಿಲ್ಲೂರು ಮತ್ತು ಶ್ಯಾಮ್ ಚಂದಕ್ ಅವರು 12 ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆಗೊಳಿಸಿದ ವೇಳೆ ಈ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಂಬರ್ ವನ್ ಆರೋಪಿಯಾಗಿದ್ದ ಕಮಲ್ ಅನ್ಸಾರಿಗೆ ನೀಡಲಾದ ಭಯಾನಕ ಶಿಕ್ಷೆಯನ್ನು ನ್ಯಾಯಾಧೀಶರು ಸ್ಮರಿಸಿದ್ದಾರೆ. ಇವರು 2021 ರಲ್ಲಿ ಜೈಲಿನಲ್ಲಿಯೇ ನಿಧನರಾಗಿದ್ದರು.
350 ಪುಟಗಳ ತೀರ್ಪಿನಲ್ಲಿ ಸುಮಾರು 100 ಪುಟಗಳಲ್ಲಿ ಚಿತ್ರಹಿಂಸೆಯ ವಿವರಗಳಿವೆ.












