ಸನ್ಮಾರ್ಗ ವಾರ್ತೆ-
ದೆಹಲಿ; ಅ. 18- ದೇಶದಲ್ಲಿ ದನಗಳ ಜನಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದ್ದರೂ, ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶದಲ್ಲಿ ದನಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ, ಬಿಜೆಪಿಯೇತರ ಆಳ್ವಿಕೆಯಿರುವ ಪಶ್ಚಿಮ ಬಂಗಾಳದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಬಿಡುಗಡೆ ಮಾಡಿದ 20 ನೇ ಜಾನುವಾರು ಜನಗಣತಿ ವರದಿಯ ಪ್ರಕಾರ, ದೇಶದ ಒಟ್ಟು ಜಾನುವಾರು ಜನಸಂಖ್ಯೆಯು 2019 ರಲ್ಲಿ 192.49 ಮಿಲಿಯನ್ ಆಗಿದ್ದು, 2012ರಲ್ಲಿ ಈ ಸಂಖ್ಯೆ 190.90 ಮಿಲಿಯನ್ ಆಗಿತ್ತು.
ಯೋಗಿ ಆದಿತ್ಯನಾಥ್ ಸರಕಾರವಿರುವ ಉತ್ತರ ಪ್ರದೇಶದಲ್ಲಿ, ದನಗಳ ಸಂಖ್ಯೆ 2012 ರಲ್ಲಿ 19.6 ದಶಲಕ್ಷದಿಂದ ಇಟ್ಟಾದರೆ, ಈಗ ಅದು 18.8 ದಶಲಕ್ಷಕ್ಕೆ (ಶೇಕಡಾ 3.93 ರಷ್ಟು ಕಡಿಮೆಯಾಗಿದೆ) ಇಳಿದಿದೆ. ರಾಜ್ಯದಲ್ಲಿ ಎಮ್ಮೆಯ ಜನಸಂಖ್ಯೆಯು ಶೇಕಡಾ 7.81ರಷ್ಟು ಏರಿಕೆಯಾಗಿದೆ- 2012 ರಲ್ಲಿ 30.6 ದಶಲಕ್ಷವಿತ್ತು. ಈಗ ಅದು 33 ದಶಲಕ್ಷಕ್ಕೆ ಏರಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಹಸುವಿನ ರಕ್ಷಣೆಯನ್ನು ಪ್ರಮುಖ ರಾಜಕೀಯ ವಿಷಯವನ್ನಾಗಿ ಮಾಡಿ ದನಗಳನ್ನು ಉಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ಉತ್ತರಪ್ರದೇಶದಲ್ಲಿ ದನಗಳ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಉತ್ತರ ಪ್ರದೇಶದ ಹೊರತಾಗಿ, ಮಧ್ಯಪ್ರದೇಶದಲ್ಲಿ (ಶೇ 4.42 ರಷ್ಟು), ಮಹಾರಾಷ್ಟ್ರ (ಶೇ .10.07) ಮತ್ತು ಒಡಿಶಾ (ಶೇ 15.01) ರಷ್ಟು ದನಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಜಾನುವಾರುಗಳ ಸಂಖ್ಯೆ ಶೇ 15.18, ಬಿಹಾರ 25.18 ಮತ್ತು ಜಾರ್ಖಂಡ್ ಶೇ 28.16 ರಷ್ಟು ಏರಿಕೆ ಕಂಡಿದೆ. ಇತ್ತೀಚಿನ ಜಾನುವಾರುಗಳ ಜನಗಣತಿಯ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ದನಗಳ ಸಂಖ್ಯೆ 2012 ರಲ್ಲಿ 16.5 ದಶಲಕ್ಷದಿಂದ 2019 ರಲ್ಲಿ 19 ದಶಲಕ್ಷಕ್ಕೆ ಏರಿದೆ. ಅದೇ ಅವಧಿಯಲ್ಲಿ, ಪಕ್ಕದ ಬಿಹಾರದಲ್ಲಿ ದನಗಳ ಸಂಖ್ಯೆ 12.2 ದಶಲಕ್ಷದಿಂದ 15.3 ದಶಲಕ್ಷಕ್ಕೆ ಏರಿದೆ. ಜಾರ್ಖಂಡ್ ನಲ್ಲಿ ಈ ಅವಧಿಯಲ್ಲಿ ಜಾನುವಾರುಗಳ ಸಂಖ್ಯೆ 8.7 ದಶಲಕ್ಷದಿಂದ 11.2 ದಶಲಕ್ಷಕ್ಕೆ ಏರಿದೆ.
ದೇಶದ ಒಟ್ಟು ಎಮ್ಮೆಗಳ ಜನಸಂಖ್ಯೆಯು 2012 ರಲ್ಲಿ 108.70 ದಶಲಕ್ಷದಿಂದ 2019 ರಲ್ಲಿ 109.85 ದಶಲಕ್ಷಕ್ಕೆ ಏರಿದೆ. ಈ ಅವಧಿಯಲ್ಲಿ ಎಮ್ಮೆ ಜನಸಂಖ್ಯೆಯಲ್ಲಿ ಏರಿಕೆ ಕಂಡ ರಾಜ್ಯಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿದೆ. ಅದೇವೇಳೆ, ಆಂಧ್ರಪ್ರದೇಶ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಮ್ಮೆ ಜನಸಂಖ್ಯೆಯಲ್ಲಿ ಇಳಿಕೆ ಕಂಡಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.












