ಭಾರತ-ಪಾಕ್ ಸಂಘರ್ಷ: ಪರಸ್ಪರ ಕೈ ಕುಲುಕಿ ಸಮಸ್ಯೆ ಬಗೆಹರಿಸಿಕೊಳ್ಳಲಿ- ಮಲಾಲ ಯೂಸುಫ್‌ಝೈ

0
1568

ಇಸ್ಲಾಮಾಬಾದ್: ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲ ಯೂಸುಫ್‌ಝೈ ಭಾರತ ಪಾಕಿಸ್ತಾನ ನಡುವಿನ ಸಂಘರ್ಷವನ್ನು ಮಾತುಕತೆಯಿಂದ ಬಗೆಹರಿಸಬೇಕೆಂದು ಕರೆ ನೀಡಿದ್ದಾರೆ.

“ನಾನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ವಸ್ತು ನಿಷ್ಠ ನಾಯಕತ್ವವನ್ನು ಪ್ರದರ್ಶಿಸಬೇಕೆಂದು ಮನವಿ ಮಾಡುತ್ತಿದ್ದೇನೆ. ಇಬ್ಬರು ನಾಯಕರು ಪರಸ್ಪರ ಹಸ್ತಲಾಘವ ನಡೆಸಬೇಕು. ಈಗಿನ ಘರ್ಷಣೆ ಮತ್ತು ಸುದೀರ್ಘ ಸಮಯದಿಂದ ಮುಂದುವರಿದು ಬಂದಿರುವ ಕಾಶ್ಮೀರ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಬೇಕು” ಎಂದು ಬುಧವಾರ ಮಲಾಲ ಟ್ವೀಟ್ ಮಾಡಿದ್ದರು.

“ಪ್ರತಿಯೊಬ್ಬರು ಯುದ್ಧದ ಅಪಾಯದ ಕುರಿತು ಜಾಗೃತರಾಗಿರಬೇಕು. ಸೇಡು ಮತ್ತು ಪ್ರತೀಕಾರ ಸರಿಯಾದ ಪ್ರಕ್ರಿಯೆಯಲ್ಲ.ಯುದ್ಧ ಒಮ್ಮೆ ಆರಂಭವಾದರೆ ಕೊನೆಯಾಗುವ ಯಾವ ಭರವಸೆಯೂ ಇಲ್ಲ ಎಂದು ಮಲಾಲ ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಯನ್ನು ಬೆಂಬಲಿಸಬೇಕು ಮತ್ತು ಮಾನವ ಜೀವ ನಷ್ಟವಾಗದಂತೆ ತಡೆಯಬೇಕೆಂದು ಮಲಾಲ ಯೂಸುಫ್‍‌ಝೈ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ. “ಎರಡು ದೇಶಗಳ ಜನರು ನಿಜವಾದ ವೈರಿ ಭಯೋತ್ಪಾದನೆ, ಅನಕ್ಷರತೆ ಮತ್ತು ಆರೋಗ್ಯ ಸಮಸ್ಯೆಗಳೆಂದು ಅರಿತಿದ್ದಾರೆ ಎಂದು ಮಲಾಲ ಹೇಳಿದರು.