ಕೇರಳ: ಫೀಸು ಕೊಡದ ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಬಿಸಿಲಿಗೆ ನಿಲ್ಲಿಸಿ ಶಿಕ್ಷೆ; ಕುಸಿದು ಬಿದ್ದ ವಿದ್ಯಾರ್ಥಿ ಆಲುವ ಜಿಲ್ಲಾಸ್ಪತ್ರೆಗೆ ದಾಖಲು!

0
579

ಆಲಂಗಾಡ್,ಮಾ. 28: ಶಾಲೆಯ ಫೀಸು ಕೊಡಲಿಲ್ಲ ಎನ್ನುವ ಕಾರಣದಿಂದ ಎರಡನೆ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಸುಡು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಲಾಗಿದೆ. ಒಂದು ಮಗು ಬಿಸಿಲಿನ ತಾಪಕ್ಕೊಳಗಾಗಿ ಕುಸಿದು ಬಿತ್ತು. ಆಲುವ ಸೆಟಲ್‍ಮೆಂಟ್ ಎಚ್.ಎಸ್. ಎಸ್‍ಎಲ್‍ಪಿ ಯ ಎರಡನೆ ತರಗತಿಯ ವಿದ್ಯಾರ್ಥಿಗಳಾದ ಕಾರಕುನ್ನ್ ದೇವನಾರಾಯಣನ್, ವೆಳಿಯತ್ತುನಾಡ್ ರೈಹಾನ್ ಎಂಬಿಬ್ಬರು ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಅಧ್ಯಾಪಕನೊಬ್ಬ ದುಷ್ಟತನ ಮೆರೆದಿದ್ದಾನೆ. ಇಬ್ಬರಿಗೂ ಪರೀಕ್ಷೆ ಬರೆಯಲು ಅವಕಾಶ ಕೊಡದೆ ಮಕ್ಕಳನ್ನು ಎರಡು ಗಂಟೆಗೂ ಹೆಚ್ಚು ಸಮಯ ಬಿಸಿಲಿನಲ್ಲಿ ನಿಲ್ಲಿಸಲಾಗಿದೆ.

ಕೇರಳದಲ್ಲಿ ಸೂರ್ಯಾಘಾತದಿಂದ ಸಾವುಗಳು ಸಂಭವಿಸುವ ಘಟನೆಗಳು ನಡೆಯುತ್ತಿವೆ. ಹಿರಿಯರೇ ಸೂರ್ಯಾಘಾತದಿಂದ ಅಲ್ಲಿ ಮೃತಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಿರುವಾಗ ಪುಟ್ಟ ಮಕ್ಕಳನ್ನು ಬಿಸಿಲಿಗೆ ನಿಲ್ಲಿಸಿದ ಅಧ್ಯಾಪಕನ ಕ್ರೌರ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕುಸಿದು ಬಿದ್ದ ವಿದ್ಯಾರ್ಥಿಯನ್ನು ಆಲುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಒಂದು ಮಗು ಮಾರ್ಚ್ ತಿಂಗಳ ಫೀಸು ಕೊಟ್ಟಿಲ್ಲ. ಇನ್ನೊಂದು ಮಗು ಬಸ್ ಫೀಸು ಕೊಟ್ಟಿಲ್ಲ ಎಂದು ಅಧ್ಯಾಪಕ ಇಂತಹ ಧೂರ್ತತನ ಮೆರೆದಿದ್ದಾನೆ.

ಶಾಲಾಡಳಿತದ ಸೂಚನೆಯ ಮೇರೆಗೆ ಅಧ್ಯಾಪಕ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದಾನೆ. ಪರೀಕ್ಷೆ ಬರೆಯಲು ಬಿಡದ್ದನ್ನು ಮಕ್ಕಳು ಮನೆಯಲ್ಲಿ ಹೋಗಿ ತಿಳಿಸಿದ್ದರಿಂದ ಶಾಲೆಯ ದುಷ್ಟತನ ಬಹಿರಂಗವಾಯಿತು. ಹೆತ್ತವರು ಶಾಲೆಯನ್ನು ಸಂಪರ್ಕಿಸಿದಾಗ ಫೀಸು ಕೊಡದ್ದರಿಂದ ಪರೀಕ್ಷೆ ಬರೆಯಲು ಬಿಟ್ಟಿಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಶಿಕ್ಷೆ ನೀಡಲಾದ ಮಕ್ಕಳಲ್ಲಿ ಒಂದು ಮಗು ಜನ್ಮತಃ ದೃಷ್ಟಿ ದೋಷವನ್ನು ಹೊಂದಿದೆ ಎಂದು ಹೆತ್ತವರು ಹೇಳಿದ್ದಾರೆ. ಘಟನೆ ಬಹಿರಂಗಗೊಂಡನೆ ಕರುಮಾಲೂರ್ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಊರವರು ಶಾಲೆಗೆ ಮುತ್ತಿಗೆ ಹಾಕಿದರು. ನಂತರ ಆಲುವ ಡಿಇಒ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ತಪ್ಪಿತಸ್ಥ ಅಧ್ಯಾಪಕನನ್ನು ಅಮಾನತುಗೊಳಿಸುವುದಾಗಿ ತಿಳಿಸಿದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಿದ್ದಾರೆ ಮತ್ತು ಆಡಳಿತ ಮಂಡಳಿಯಿಂದ ವಿವರಣೆ ಕೇಳಲಾಗುವುದು ಎಂದು ಅವರು ಹೇಳಿದರು. ನಂತರ ಊರವರು ಪ್ರತಿಭಟನೆ ಕೊನೆಗೊಳಿಸಿದರು.