ಉತ್ತರ ಪ್ರದೇಶ: ರಸ್ತೆ ನಿರ್ಮಾಣ ಶಿಲಾನ್ಯಾಸದಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಂಸದ, ಶಾಸಕರಿಂದ ಚಪ್ಪಲಿಯಿಂದ ಮಾರಾಮಾರಿ

0
753

ಲಕ್ನೊ, ಕಬೀರ್ ನಗರ, ಮಾ.7: ಬಿಜೆಪಿ ಸಂಸದ ಶರದ್ ತ್ರಿಪಾಠಿ ಮತ್ತು ಮೆಂಹದಾವಲ್ ಶಾಸಕ ರಾಕೇಶ್ ಸಿಂಗ್ ಬಘೆಲ್ ನಡುವೆ ಬುಧವಾರ ಸಾರ್ವಜನಿಕವಾಗಿ ಹೊಡೆದಾಟ ನಡೆದಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಇಬ್ಬರಿಗೂ ಲಕ್ನೊಕ್ಕೆ ಬುಲಾವ್ ನೀಡಿದ್ದಾರೆ.

ಮೂಲಗಳ ಪ್ರಕಾರ ಜಿಲ್ಲಾಧಿಕಾರಿ ಕಚೇರಿ ಸಭಾಗೃಹದಲ್ಲಿ ಯೋಜನಾ ಸಮಿತಿಯ ಸಭೆಯು ನಡೆಯುತ್ತಿತ್ತು. ಜಿಲ್ಲೆಯ ಉಸ್ತುವಾರಿ ಸಚಿವ ಅಶುತೋಷ್ ಟಂಡನ್ ಉಪಸ್ಥಿತರಿದ್ದರು. ಇದೇ ವೇಳೆ ಕಬೀರ್ ನಗರದ ಬಿಜೆಪಿ ಸಂಸದ ತ್ರಿಪಾಠಿ ಮತ್ತು ಬಿಜೆಪಿ ಶಾಸಕ ಬಘೆಲ್ ರಸ್ತೆ ನಿರ್ಮಾಣದ ಶ್ರೇಯಸ್ಸಿನ ಕುರಿತು ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳಲು ಚಪ್ಪಲಿಯನ್ನು ಎತ್ತಿಕೊಂಡರು. ಪೊಲೀಸರು ಮಧ್ಯಪ್ರವೇಶಿಸಿ ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಂಹದಾವಲ್ ರಸ್ತೆ ನಿರ್ಮಾಣದ ಶಿಲಾಫಲಕದಲ್ಲಿ ಸಂಸದರ ಹೆಸರಿರಲಿಲ್ಲ ಇದು ಇಬ್ಬರಲ್ಲಿ ಮಾತಿನ ಚಕಮಕಿಗೆ ಆಸ್ಪದವಾಯಿತು ಎನ್ನಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸೆತ್ ಭಾನ್ ರಾಯ್‍ರಲ್ಲಿ ಈ ಕುರಿತು ವಿಚಾರಿಸಿದಾಗ” ಉಸ್ತುವಾರಿ ಸಚಿವರು ತನಗೆ ಫೋನ್‍ನಲ್ಲಿ ಮಾತಿನ ಚಕಮಕಿ ಕುರಿತು ತಿಳಿಸಿದ್ದಾರೆ. ಘಟನೆ ನಡೆಯುವ ವೇಳೆ ಬೇರೆ ಸಭೆಯಲ್ಲಿ ಭಾಗವಹಿಸಿದ್ದೆ. ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಘಟನೆಯ ಕುರಿತು ವಿವರ ಕೇಳಿದ್ದಾರೆ. ಘಟನಾ ಸ್ಥಳಕ್ಕೆ ತೆರಳುತ್ತಿದ್ದು ಪ್ರದೇಶ ಅಧ್ಯಕ್ಷರ ಕುರಿತು ಘಟನೆಯ ಕುರಿತು ತಿಳಿಸಲಿದ್ದೇನೆ” ಎಂದು ಹೇಳಿದ್ದಾರೆ.

ಬಿಜೆಪಿ ಉತ್ತರಪ್ರದೇಶ ಅಧ್ಯಕ್ಷ ಪಾಂಡೆ ಘಟನೆಯನ್ನು ಅಸಭ್ಯ ಮತ್ತು ತಪ್ಪು ನಡವಳಿಕೆ ಎಂದು ಹೇಳಿದ್ದಾರೆ. ಸಂಸದರನ್ನು ಮತ್ತು ಶಾಸಕರನ್ನು ಲಕ್ನೊಕ್ಕೆ ಬರಲು ತಿಳಿಸಲಾಗಿದೆ ಎಂದು ಪಾಂಡೆ ಹೇಳಿದರು. ಇದೇವೇಳೆ ಶಾಸಕ ಬಘೆಲ್‍ರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಆರ್ ಕೆ ಗುಪ್ತ, ‘ಸಂಸದರನ್ನು ಹೊರಗೆ ಕಳುಹಿಸಲಾಗಿದೆ. ಘಟನೆಯ ತನಿಖೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.