ರಾಜಸ್ತಾನ ಮೂಲದ ಬಾಲಕಿ ಅಪಹರಣ ಘಟನೆ: ಅಪಹೃತ ಬಾಲಕಿ, ಅಪಹರಣಕಾರ ಯುವಕ ಇಂದು ಕೇರಳಕ್ಕೆ!

0
658

ಓಚ್ಚಿರ,ಮಾ. 28: ಓಚ್ಚಿರದಿಂದ ಅಪಹರಿಸಿಕೊಂಡು ಹೋಗಿದ್ದ ರಾಜಸ್ತಾನದ ಬಾಲಕಿ ಮತ್ತು ಆರೋಪಿ ಯುವಕನನ್ನು ಪೊಲೀಸರು ಗುರುವಾರ ಮಧ್ಯಾಹ್ನದ ವೇಳೆ ಓಚ್ಚಿರ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಲಿದ್ದಾರೆ. ಖಾಸಗಿ ವಾಹನದಲ್ಲಿ ಇಬ್ಬರನ್ನು ಕರೆತರಲಾಗುತ್ತಿದ್ದು ಅವರನ್ನು ಪೊಲೀಸರ ತನಿಖಾ ತಂಡ ಹಿಂಬಾಲಿಸುತ್ತಿದೆ. ಊರಿಗೆ ತಲುಪಿದ ಕೂಡಲೇ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿ ಲೈಂಗಿಕ ಕಿರುಕುಳ ನೀಡಲಾಗಿದೆಯೇ ಎಂದು ದೃಢಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ವಯಸ್ಸನ್ನು ಪರಿಗಣಿಸಿ ಯುವಕನ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಬಾಲಕಿಗೆ ಹದಿನೈದು ವರ್ಷ ಎಂದು ತಂದೆ ಹೇಳುತ್ತಾರೆ. ತಂದೆ ಹಾಜರು ಪಡಿಸಿದ ದಾಖಲೆ ಪ್ರಕಾರ ಬಾಲಕಿ ವಯಸ್ಕಳಾಗಿಲ್ಲ. ಆದರೆ ಬಾಲಕಿಗೆ ಹದಿನೆಂಟ ವರ್ಷ ವಯಸ್ಸಾಗಿದೆ ಎಂದು ಆಧಾರ್ ಕಾರ್ಡಿನಲ್ಲಿದೆ ಎಂದು ಅಪಹರಿಸಿ ಕರೆದುಕೊಂಡು ಹೋದ ಯುವಕ ಹೇಳುತ್ತಿದ್ದಾನೆ. ಆಧಾರ್ ಕಾರ್ಡನ್ನು ವಯಸ್ಸಿನ ಅಧಿಕೃತ ದಾಖಲೆಯಾಗಿ ಕೋರ್ಟು ಪರಿಗಣಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದ್ದರಿಂದ ವೈದ್ಯಕೀಯ ಪರೀಕ್ಷೆಯ ಮೂಲಕ ಬಾಲಕಿಯ ವಯಸ್ಸನ್ನು ದೃಢಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಪೊಕ್ಸೊ ಕಾನೂನಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪೊಲೀಸರು ಎಚ್ಚರಿಕೆಯಿಂದ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ. ನಾವು ಪ್ರೀತಿಸಿ ಓಡಿ ಹೋಗಿದ್ದೇವೆ ಎಂದು ಯುವಕ ಹೇಳುತ್ತಿದ್ದಾನೆ. ಆದರೆ ಇದಕ್ಕಾಗಿ ಈತ ಕ್ರಿಮಿನಲ್‍ಗಳ ಸಹಾಯ ಪಡೆದಿರುವುದು ಪ್ರಕರಣದಲ್ಲಿ ತಿರುವು ಆಗಿ ಪರಿಣಮಿಸಿದೆ.