11 ಮಕ್ಕಳು, ಸಾಕಷ್ಟು ಆಸ್ತಿ ಇದ್ದರೂ ತುತ್ತು ಅನ್ನಕ್ಕೆ ಗತಿ ಇಲ್ಲ: ದಯಾಮರಣ ಕೋರಿ ಮನವಿ ಸಲ್ಲಿಸಿದ 75 ವರ್ಷದ ವೃದ್ಧೆ!

0
169

ಸನ್ಮಾರ್ಗ ವಾರ್ತೆ

ಹಾವೇರಿ: 11 ಮಕ್ಕಳು, ಸಾಕಷ್ಟು ಆಸ್ತಿ ಇದ್ದರೂ ತುತ್ತು ಊಟಕ್ಕಾಗಿ ಪರದಾಡುತ್ತಿರುವ ವಯೋವೃದ್ಧೆಯೋರ್ವರು ದಯಾಮರಣ ಕೋರಿ ಜಿಲ್ಲಾಡಳಿತ ಭವನದ ಎದುರು ಅಳುತ್ತಾ ಅರ್ಜಿ ಸಲ್ಲಿಸಿದ ದಾರುಣ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಂಗನಾಥ ನಗರದ ನಿವಾಸಿ ಪುಟ್ಟವ್ವ ಕೊಟ್ಟೂರ(75) ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದ ದುರ್ದೈವಿ.

ಪುಟ್ಟವ್ವರಿಗೆ 7 ಜನ ಗಂಡು ಹಾಗೂ 4 ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದ್ದು, 1-2 ಎಂಬಂತೆ ಮಕ್ಕಳಿದ್ದಾರೆ. ಪುಟ್ಟವ್ವರ ಪತಿಗೆ ಸಂಬಂಧಿಸಿ ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನಿದೆ. ತಾಲೂಕಿನ ಹುಲ್ಲತ್ತಿ ಗ್ರಾಮದ ಹದ್ದಿನಲ್ಲಿರೋ 28 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.

ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವರ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ವಯೋಸಹಜ ಕಾಯಿಲೆಗಳೂ ಪುಟ್ಟವ್ವರನ್ನು ಆವರಿಸಿದ್ದು ಮಕ್ಕಳು ಆರೈಕೆಗೆ ಮುಂದಾಗದಿರುವುದರಿಂದ ನೊಂದು ದಯಾಮರಣ ಕೋರಿದ್ದಾಗಿ ಹೇಳಿದ್ದಾರೆ.

28 ಎಕರೆ ಜಮೀನು, 7 ಮನೆಗಳಿದ್ದರೂ ಮಕ್ಕಳು ಆದಾಯದ ಪಾಲು ನೀಡಲು ಸಿದ್ಧರಿಲ್ಲ ಎಂದು ವೃದ್ಧೆ ಅಳಲು ತೋಡಿಕೊಂಡಿದ್ದಾರೆ‌. ಅಕ್ಕ ಪಕ್ಕದವರೇ ಊಟ ಕೊಡುತ್ತಾರೆ ಎನ್ನುತ್ತಾರೆ ಪುಟವ್ವ. ಆಯುಕ್ತರ ಮೂಲಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ.