ಜಮ್ಮು: ಬಸ್ಸಿನಲ್ಲಿ ಗ್ರೆನೇಡ್ ಸ್ಫೋಟ: 26 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

0
510

ಜಮ್ಮು,ಮಾ.7: ಜಮ್ಮುವಿನಲ್ಲಿ ಗ್ರೆನೇಡ್ ಸ್ಫೋಟದಿಂದಾಗಿ 26 ಮಂದಿ ಗಾಯಗೊಂಡಿದ್ದಾರೆ. ಪುಲ್ವಾಮದ ಭಯೋತ್ಪಾದನಾ ದಾಳಿ ನಡೆದು ಸರಿಯಾಗಿ ಮೂರು ವಾರಗಳ ಬಳಿಕ ಜಮ್ಮುವಿನಲ್ಲಿ ಗ್ರೆನೆಡ್ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಐವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದ ವೈದ್ಯರು ತಿಳಿಸಿದ್ದಾರೆ.

ಜಮ್ಮು ನಗರದ ಹೃದಯ ಭಾಗದಲ್ಲಿರುವ ಬಸ್ ಸ್ಟಾಂಡಿನಲ್ಲಿದ್ದ ಬಸ್ಸಿನೊಳಗೆ ಗ್ರೆನೆಡ್ ಇತ್ತು. ಬಸ್‍ ಚಾಲಕ,ನಿರ್ವಾಹಕ ಸಹಿತ ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ ಮತ್ತು ಬಸ್ಸಿನೊಳಗೆ ಯಾರೆಲ್ಲ ಇದ್ದರು ಎಂದು ಸದ್ಯ ಖಚಿತವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗ್ರೆನೇಡ್ ಬಸ್ ನೊಳಗೆ ಇರಿಸಲಾಗಿದ್ದು ಸುಮಾರು 11:30ಕ್ಕೆ ತೆರಳುವಾಗ ಗ್ರೆನೆಡ್ ಹೊರಳಾಡಿ ಸ್ಫೋಟವಾಗಿರಬಹುದು ಎಂದು ಹಿರಿಯ ಪೊಲೀಸಧಿಕಾರಿ ಮನೀಶ್ ಕುಮಾರ್ ಸಿನ್ಹಾ ಹೇಳಿದರು. ಘಟನಾ ಸ್ಥದಲ್ಲಿ ಭದ್ರತಾ ಪಡೆಗಳು ತಕ್ಷಣ ಬ್ಯಾರಿಕೇಡ್‍ಗಳು ಇರಿಸಿವೆ.ಸ್ಥಳೀಯರು ಸ್ಫೋಟ ನಡೆದ ಸ್ಥಳಕ್ಕೆ ಧಾವಿಸಿ ಬಂದರು.

“ನಾನು ಟಯರ್ ಸ್ಫೋಟಗೊಂಡಿತೆಂದು ಭಾವಿಸಿದ್ದೆ. ಆದರೆ ಇದು ದೊಡ್ಡ ಸ್ಫೋಟವಾಗಿದೆ. ಗಾಯಾಳುಗಳನ್ನು ಜನರು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಕಳೆದ ವರ್ಷ ಮೇ ತಿಂಗಳ ನಂತರ ಬಸ್‍ಸ್ಟಾಂಡ್ ಪ್ರದೇಶದಲ್ಲಿ ನಡೆದ ಮೂರನೆ ಗ್ರೆನೇಡ್ ದಾಳಿಯಾಗಿದೆ.

ಪೊಲೀಸರು ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡುತ್ತಿದ್ದಾರೆ ಮತ್ತು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ ಎಂದು ಪೊಲೀಸಧಿಕಾರಿ ತಿಳಿಸಿದರು. ಪಾಕಿಸ್ತಾನದ ಬಾಲಕೋಟ್‍ನಲ್ಲಿರುವ ಭಯೋತ್ಪಾದಕ ಸಂಘಟನೆ ಜೈಷೆ ಮುಹಮ್ಮದ್‍ನ ಬಹುದೊಡ್ಡ ಕೇಂದ್ರಕ್ಕೆ ಭಾರತದ ವಾಯುಸೇನೆ ದಾಳಿ ನಡೆಸಿದ ಒಂದು ವಾರದಲ್ಲಿ ಜಮ್ಮುವಿನಲ್ಲಿ ಗ್ರೆನೆಡ್ ದಾಳಿ ನಡೆದಿದೆ. ಪುಲ್ವಾಮ ದಾಳಿಯ ಹೊಣೆಯನ್ನು ಜೈಷೆ ಮುಹಮ್ಮದ್ ಹೊತ್ತುಕೊಂಡಿದೆ. ಆದರೆ ಜೈಷೆ ಮುಹಮ್ಮದ್ ಪುಲ್ವಾಮ ದಾಳಿಯನ್ನು ಸ್ಥಳೀಯ ಭಯೋತ್ಪಾದಕರು ನಡೆಸಿದ್ದಾರೆ ಎಂದು ಹೇಳಿಕೊಂಡಿತ್ತು.