ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ಪಾದ್ರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಪೋಪ್ ಫ್ರಾನ್ಸಿಸ್

0
580

ವ್ಯಾಟಿಕನ್: ಕ್ರೈಸ್ತರ ಪರಮೋನ್ನತ ಧರ್ಮಗುರು ಪೋಪ್ ಫ್ರಾನ್ಸಿಸ್ ಮಕ್ಕಳನ್ನು ದುರುಪಯೋಗ ಪಡಿಸುವ ವೈದಿಕರ(ಪಾದ್ರಿಗಳ) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕ್ಯಾಥೋಲಿಕ್ ಕ್ರೈಸ್ತ ಸಭೆಗಳಿಗೆ ಸೂಚಿಸಿದ್ದಾರೆ. ಮಕ್ಕಳ ವಿರುದ್ಧ ಪಾದ್ರಿಗಳ ಲೈಂಗಿಕ ಕಿರುಕುಳ ನರಬಲಿಗೆ ಸಮಾನವಾದುದು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಈ ಅಪರಾಧಕೃತ್ಯವನ್ನು ಭೂಮಿಯಿಂದಲೇ ನಿವಾರಿಸಬೇಕಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಹೋರಾಟ ಮಾಡಬೇಕೆಂದು ಪೋಪ್ ಫ್ರಾನ್ಸಿಸ್ ಹೇಳಿದರು. ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ವೈದಿಕರು(ಪಾದ್ರಿಗಳು) ಶೈತಾನರ ಉಪಕರಣಗಳಾಗಿದ್ದು ಇವರ ಕೃತ್ಯಗಳಿಂದ ಮಕ್ಕಳನ್ನು ಸಂರಕ್ಷಿಸಲು ಕ್ರೈಸ್ತ ಸಭೆ ಕಟಿಬದ್ಧವಾಗಿರಬೇಕು ಮತ್ತು ಅದರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರಗಿಸಬೇಕೆಂದು ಪೋಪ್ ಹೇಳಿದರು.
ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದನ್ನು ತಡೆಯುವುದಕ್ಕಾಗಿ ಕರೆಯಲಾದ ಬಿಷಪ್‍ಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪೋಪ್ ಮಾತಾಡುತ್ತಿದ್ದರು.

ಅಧಿಕಾರ, ಸ್ವಾರ್ಥ ಕೆಲವು ಪಾದ್ರಿಗಳನ್ನು ಕೆಡಿಸಿದೆ. ಕ್ರೈಸ್ತಸಭೆಗಳು ಇದಕ್ಕೆ ಬೆಲೆ ತೆರೆಬೇಕಾಗುತ್ತದೆ. ವೈದಿಕರ ಲೈಂಗಿಕ ಅತಿಕ್ರಮಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಸಮಿತಿಯ ಮಾರ್ಗಸೂಚಿಯನ್ನು ನವೀಕರಣಗೊಳಿಸಬೇಕು ಎಂದರು.

ವ್ಯಾಟಿಕನ್‍ನಲ್ಲಿ ನಾಲ್ಕು ದಿವಸಗಳ ಸಮ್ಮೇಳನ ನಡೆದಿದ್ದು ಇದರಲ್ಲಿ ಜಗತ್ತಿನ ವಿವಿಧ ಕಡೆಗಳಿಂದ 114 ಬಿಷಪ್‍ಗಳು ಭಾಗವಹಿಸಿದ್ದರು. ಕೈಸ್ತಭಗಿನಿಯರ ಸಹಿತ 10 ಮಹಿಳೆಯರೂ ಸಭೆಯಲ್ಲಿ ಭಾಗವಹಿಸಿದ್ದರು. 14 ವರ್ಷಕ್ಕಿಂತ ಕೆಳವಯೋಮಾನದವರನ್ನು ಸಭೆ ಮಕ್ಕಳೆಂದು ಪರಿಗಣಿಸುತ್ತಿದೆ. ಈ ವಯಸ್ಸಿನ ಮಿತಿಯನ್ನು ಹೆಚ್ಚಿಸಬೇಕೆಂದು ಪೋಪ್ ಹೇಳಿದರು.