ಇರಾನ್ ತೈಲ ಹಡಗಿನ ಸಿಬ್ಬಂದಿಗಳಿಗೆ ವೀಸಾ ನೀಡಲು ನಿರಾಕರಿಸಿದ ಅಮೆರಿಕ

0
523

ಸನ್ಮಾರ್ಗ ವಾರ್ತೆ
ಲಂಡನ್,ಆ. 17: ಜಿಬ್ರಾಲ್ಟರ್ ಸರೋವರದಲ್ಲಿ ಬ್ರಿಟನ್ ವಶಪಡಿಸಿಕೊಂಡಿರುವ ಇರಾನ್ ತೈಲ ಹಡಗು ಗ್ರೇಸ್ ವನ್ ಸಿಬ್ಬಂದಿಗಳಿಗೆ ವೀಸಾ ನಿಷೇಧಿಸಲಾಗುವುದು ಎಂದು ಅಮೆರಿಕ ಹೇಳಿದೆ. ಹಡಗು ಬಿಟ್ಟುಕೊಡಬೇಡಿ ಎಂದು ಅಮೆರಿಕ ಬ್ರಿಟನ್‍ನ್ನು ಆಗ್ರಹಿಸಿತ್ತು. ಆದರೆ ಇದನ್ನು ಬ್ರಿಟನ್ ತಿರಸ್ಕರಿಸಿದ್ದು ಹಡಗನ್ನು ಬಿಟ್ಟು ಕೊಡಲು ತೀರ್ಮಾನಿಸಿದ್ದು, ಅಮೆರಿಕದ ಆಕ್ರೊಶಕ್ಕೆ ಕಾರಣವಾಗಿತ್ತು. ಸಿರಿಯಾಕ್ಕೆ ಕಳುಹಿಸಲಾದ ತೈಲವಲ್ಲ ಎಂದು ಬರಹದ ಮೂಲಕ ಇರಾನ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ಹಡಗನ್ನು ಬಿಟ್ಟುಕೊಡಲು ಸಿದ್ಧವಾಯಿತು.

ಇರಾನ್‍ನ ಗ್ರೇಸ್ ವನ್‍ನಲ್ಲಿ ಭಾರತದ 24 ಮಂದಿ ಸಿಬ್ಬಂದಿಗಳಿದ್ದರು. ನಿಷೇಧವನ್ನು ಉಲ್ಲಂಘಿಸಿ ತೈಲ ಕಳುಹಿಸಲಾಗುತ್ತಿದೆ ಎಂಬ ಆರೋಪದ ಮೇರೆ ಗ್ರೇಸ್ ವನ್ ಹಡಗನ್ನು ಬ್ರಿಟಿಷ್ ನೌಕಾ ಸೇನೆ ಜುಲೈ 4 ರಂದು ವಶಪಡಿಸಿಕೊಂಡಿತ್ತು.ಆದರೆ ಅಮೆರಿಕದ ಒತ್ತಡಕ್ಕೆ ಮಣಿದು ಬ್ರಿಟನ್ ತಮ್ಮ ಹಡಗನ್ನು ವಶಪಡಿಸಿಕೊಂಡಿದೆ ಎಂದು ಇರಾನ್ ಆರೋಪಿಸಿತ್ತು. ಹಡಗನ್ನು ಬಿಟ್ಟುಕೊಡುತ್ತೇವೆ, ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ಕಳೆದ ದಿವಸ ಜಿಬ್ರಾಲ್ಟರ್ ಅಧಿಕಾರಿಗಳು ತಿಳಿಸಿದ್ದರು. ಜಿಬ್ರಾಲ್ಟರ್ ಅರ್ಧ ಸ್ವಯಂ ಆಡಳಿತವಿರುವ ಬ್ರಿಟಿಷ್ ಪ್ರಾಂತ್ಯವಾಗಿದೆ.

ತಮ್ಮ ತೈಲ ಹಡಗನ್ನು ವಶಪಡಿಸಿದ್ದಕ್ಕೆ ಪ್ರತ್ಯುತ್ತರವಾಗಿ ಬ್ರಿಟಿಷ್ ತೈಲ ಹಡಗು ಸ್ಟೆನೊ ಎಂಪರನ್ನು ಹುರ್ಮುಸ್ ಜಲಸಂಧಿಯಲ್ಲಿ ಇರಾನ್‍ನ ರೆವೆಲ್ಯೂಶನರಿ ಗಾರ್ಡ್‌ಗಳು ವಶಕ್ಕೆ ಪಡೆದಿದ್ದರು. ಇದನ್ನು ಇರಾನ್ ಬಿಟ್ಟು ಕೊಡಲಿದೆಯೇ ಎನ್ನುವ ಕುರಿತು ಇರಾನ್‍ನ ನಿಲುವು ವ್ಯಕ್ತವಾಗಿಲ್ಲ. ಗ್ರೇಸ್ ವನ್ ಹಡಗನ್ನು ಬಿಟ್ಟಕೊಡುವುದರಿಂದ ಎಂಪರವನ್ನು ಕೂಡ ಇರಾನ್ ಬಿಟ್ಟುಕೊಡಬಹುದು.