ಸನ್ಮಾರ್ಗ ವಾರ್ತೆ
ಚೆನ್ನೈ, ಆ. 21: ವೆಳಾಂಕಣ್ಣಿ ತೀರ್ಥ ಯಾತ್ರೆಗಾಗಿ ಪಾದಯಾತ್ರೆಯಲ್ಲಿ ಹೋಗುತ್ತಿದ್ದ ಭಕ್ತರ ಮೇಲೆ ತಿರುಪಟ್ಟೂರು ಸಮೀಪ ದಾಳಿ ಮಾಡಿದ ಆರು ಮಂದಿ ಹಿಂದೂ ಮುನ್ನಣಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿಂಗಾರ ವೇಲನ್(48), ಸಾಮುಂಡೀಶ್ವರನ್(41), ಪ್ರಭು(35), ಶಿವಕುಮಾರ್(42), ಮಣಿ(26), ವೆಂಕಟೇಶ್ವರನ್(38) ಎಂದು ಗುರುತಿಸಲಾಗಿದೆ.
ವೆಳಾಂಕಣ್ಣಿ ಹಬ್ಬ ಪ್ರಯುಕ್ತ ಕರ್ನಾಟಕದ ಕೋಲಾರದಿಂದ ದೇವ ಸಹಾಯಕ ಜೋಸೆಫ್‍ರ ನೇತೃತ್ವದಲ್ಲಿ ನಲ್ವತ್ತು ಮಂದಿ ಭಕ್ತರು ಆರೋಗ್ಯ ಮಾತೆಯ ಪ್ರತಿಮೆಯೊಂದಿಗೆ ಪಾದಯಾತ್ರೆ ಕೈಗೊಳ್ಳುತ್ತಿದ್ದ ವೇಳೆ ನತ್ತರಂಪಳ್ಳಿ ಪಾಚ್ಚೂರ್ ಟೋಲ್‍ಗೇಟ್ ಸಮೀಪ ಹಿಂದೂ ಮುನ್ನಣಿ ಕಾರ್ಯಕರ್ತರು ಪಾದಯಾತ್ರೆಯನ್ನು ತಡೆಹಿಡಿದರು.
ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಆರೋಗ್ಯ ಮೇರಿಯ ಪ್ರತಿಮೆಯೊಂದಿಗೆ ಹೋಗಗೊಡಲಾರೆವು ಎಂದು ಅವರು ಹಟ ಹಿಡಿದರು. ಮತಾಂತರ ನಡೆಸಲು ಬಂದ ತಂಡ ಇದು ಎಂದು ಆರೋಪಿಸಿ ಹಲ್ಲೆ ನಡೆಸಿ ಪ್ರತಿಮೆಗೆ ಚಪ್ಪಲಿ ಮಾಲೆ ಹಾಕಿದ್ದರು. ಆರೋಪಿಗಳನ್ನು ಸೋಮವಾರ ಸಂಜೆ ಅಂಬೂರ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರು ಪಡಿಸಿ ಜೈಲಿಗಟ್ಟಲಾಗಿದೆ.












