ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ. 21: ಐಎನ್ ಎಕ್ಸ್ ಮೀಡಿಯ ಪ್ರಕರಣದಲ್ಲಿ ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ವಿರುದ್ಧ ಎನ್ಫೋರ್ಸ್ ಮೆಂಟ್ ನಿರ್ದೇಶನಾಲಯ ಲುಕ್ ಔಟ್ ನೋಟಿಸು ಜಾರಿಗೊಳಿಸಿದೆ. ಚಿದಂಬರಂರ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟು ತಿರಸ್ಕರಿಸಿದ್ದು ನಂತರ ಜಾಮೀನು ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರೂ ಚಿದಂಬರಂರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳದಿರುವುದರಿಂದ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ. ಬಂಧನವನ್ನು ತಡೆಯಬೇಕೆನ್ನುವ ಚಿದಂಬರಂರ ಬೇಡಿಕೆಯನ್ನು ಸುಪ್ರೀಂಕೋರ್ಟು ಪರಿಗಣಿಸಿಲ್ಲ.
ಅರ್ಜಿ ವಿಚಾರಣೆಯನ್ನು ಚೀಫ್ ಜಸ್ಟಿಸ್ ಪರಿಗಣನೆಗೆ ನೀಡಲಾಗಿದೆ. ಇದು ಮಧ್ಯಾಹ್ನದ ನಂತರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಚಿದಂಬರಂ ದೇಶದಿಂದ ಹೊರ ಹೋಗಬಾರದೆಂದು ಕೋರ್ಟು ಸೂಚಿಸಿದೆ. ಈಗ ಅವರೆಲ್ಲಿದ್ದಾರೆಂದು ಗೊತ್ತಿಲ್ಲ. ಸಿಬಿಐ ಮಂಗಳವಾರ ರಾತ್ರೆ ಮತ್ತು ಇಂದು ಎರಡು ಬಾರಿ ಚಿದಂಬರಂರ ವಸತಿಗೆ ಹೋಗಿ ಬಂದಿದ್ದು ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಪ್ರಥಮ ಯುಪಿಎ ಸರಕಾರದ ವಿತ್ತ ಸಚಿವರ ವಿರುದ್ಧ 2007ರಲ್ಲಿ ಐಎನ್ಎಕ್ಸ್ ಮೀಡಿಯಕ್ಕೆ ವಿದೇಶಿ ಲಾಭ ಮಾಡಿ ಕೊಡಲು ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ(ಎಫ್ಐಪಿಬಿ) ಅನುಮತಿ ನೀಡಲಾಗಿತ್ತು.
ಅನುಮತಿ ಲಭಿಸುವುದಕ್ಕಾಗಿ ಪೀಟರ್ ಮುಖರ್ಜಿ, ಇಂದ್ರಾಣಿ ಮುಖರ್ಜಿಗೆ ಚಿದಂಬರಂ ಸಹಾಯ ಮಾಡಿದ್ದರು. ಪ್ರತ್ಯುಪಕಾರವಾಗಿ ಚಿದಂಬರಂ ಪುತ್ರ ಕಾರ್ತಿ ಚಿಂದಂಬರಂಗೆ ಆರ್ಥಿಕ ಸಹಾಯ ಮಾಡಿದ್ದಾರೆ ಎಂದು ಸಿಬಿಐ ಚಿದಂಬರಂ ವಿರುದ್ಧ ಕೇಸು ದಾಖಲಿಸಿಕೊಂಡಿತ್ತು. ಆದರೆ ಪ್ರಕರಣದಲ್ಲಿ ಸಿಬಿಐ ಚಿದಂಬರಂರನ್ನು ಆರೋಪಿಯನ್ನಾಗಿ ಸೇರಿಸಿರಲಿಲ್ಲ. ಆರೋಪಿ ಇಂದ್ರಾಣಿ ಮುಖರ್ಜಿಯವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡಿ ಸಿಬಿಐ ಚಿದಂಬರಂ ಬಂಧನಕ್ಕೆ ದಾರಿ ಮಾಡಿಕೊಂಡಿದೆ.
ಪಿ. ಚಿದಂಬರಂ ಕೇಂದ್ರ ಗೃಹ ಮಂತ್ರಿಯಾಗಿದ್ದಾಗ ನಕಲಿ ಎನ್ಕೌಂಟರ್ ಕೇಸಿನಲ್ಲಿ ಬಂಧಿಸಲಾಗಿದ್ದ ಅಮಿತ್ ಶಾ ಈಗ ಗೃಹ ಮಂತ್ರಿಯಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರತೀಕಾರ ತೀರಿಸಲು ಹೊರಟಿದೆ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿದೆ. ಯಾವುದೇ ರೀತಿಯಲ್ಲಾದರೂ ಚಿದಂಬರಂರನ್ನು ಬಂಧಿಸುವ ಸಾಧ್ಯತೆ ಇದೆ. ಮೊದಲು ಪುತ್ರ ಕಾರ್ತಿ ಚಿದಂಬರಂರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂಬ ಆರೋಪವು ಕೇಳಿ ಬಂದಿತ್ತು.












