ಮುಸ್ಲಿಮ್ ಬಹುಸಂಖ್ಯಾತ ಪಾಕ್‍ನ ಬಳಿಯಿದ್ದೂ ಅದರೊಂದಿಗೆ ಸೇರದೇ ಇದ್ದುದಕ್ಕೆ ನಾವು ಸಲ್ಲಿಸಿದ ಕೃತಜ್ಞತೆಯೇ 370ನೇ ವಿಧಿ ರದ್ದು?

0
1434

ಏ ಕೆ ಕುಕ್ಕಿಲ

ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ಮಸೂದೆಯನ್ನು ಬೆಂಬಲಿಸಿದ ರಾಜಕೀಯ ಪಕ್ಷಗಳಲ್ಲಿ ‘ಆಮ್ ಆದ್ಮಿ ಪಾರ್ಟಿ’(AAP) ಮತ್ತು ‘ತೆಲಂಗಾಣ ರಾಷ್ಟ್ರ ಸಮಿತಿ’(TRS) ಗಳು ಇದ್ದುವು ಅನ್ನುವುದೇ ಅತಿದೊಡ್ಡ ವ್ಯಂಗ್ಯ. ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಗೆ ರಾಜ್ಯ ಸ್ಥಾನಮಾನವನ್ನು ಆಗ್ರಹಿಸಿ ಉಪವಾಸ, ಪ್ರತಿಭಟನೆ, ಧರಣಿ ಇತ್ಯಾದಿ ಇತ್ಯಾದಿಗಳನ್ನು ನಿರಂತರ ನಡೆಸುತ್ತಾ ಬಂದವರು ಕೇಜ್ರಿವಾಲ್. ಅವರ ಪಕ್ಷದ ತಾಯಿ ಬೇರೇ ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ರಾಜ್ಯದ ಸ್ಥಾನಮಾನದ ಬೇಡಿಕೆ. TRSನ ಚಂದ್ರಶೇಖರ್ ರಾವ್ ಅವರು ತೆಲಂಗಾಣವನ್ನು ಪಡೆದುಕೊಂಡದ್ದೇ ಆಮರಣಾಂತ ಉಪವಾಸವನ್ನು ಕೈಗೊಂಡು. ಆಂಧ್ರದ ಭಾಗವಾಗಿ ತಣ್ಣಗಿದ್ದ ಈ ಜಿಲ್ಲೆಗೆ ರಾಜ್ಯದ ಸ್ಥಾನಮಾನ ನೀಡಿ ಆಂಧ್ರದಿಂದ ಪ್ರತ್ಯೇಕಗೊಳಿಸಬೇಕೆಂದು ಅವರು ಎಷ್ಟರ ತನಕ ಹೋರಾಡಿದರೆಂದರೆ, ಅವರಿಂದಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯವು ರಣರಂಗವಾಯಿತು. ಜೀವಹಾನಿಯಾಯಿತು. TRS ಮತ್ತು AAP ಗಳು ಜನಪ್ರಿಯವಾದದ್ದೇ ಅವುಗಳು ಮುಂದಿರಿಸಿದ ‘ರಾಜ್ಯ’ದ ಬೇಡಿಕೆಯಿಂದಾಗಿ. ವ್ಯಂಗ್ಯ ಏನೆಂದರೆ, ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುವ ಮತ್ತು ಅದನ್ನು ಎರಡಾಗಿ ವಿಭಜಿಸುವ ಕೇಂದ್ರದ ಮಸೂದೆಯನ್ನು ಇವೇ ಪಕ್ಷಗಳು ಬೆಂಬಲಿಸಿದ್ದು. ಇದನ್ನು ಚಾರಿತ್ರಿಕ ವಿಸ್ಮೃತಿ ಅನ್ನಬೇಕೋ ಅಥವಾ ಸಮಯ ಸಾಧಕತನ, ಸೈದ್ಧಾಂತಿಕ ತಿಕ್ಕಲುತನ ಅನ್ನಬೇಕೋ? ಹಾಗಂತ,

ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಉಳಿದಂತೆ ಈ ದೇಶ ದಲ್ಲಿರುವ ಎಲ್ಲ 29 ರಾಜ್ಯಗಳ ನಡುವೆಯೂ ಸಮಾನತೆಯಿದೆ, ಅವುಗಳಿಗೆ ಯಾವ ವಿಶೇಷಾಧಿಕಾರವನ್ನೂ ನೀಡಲಾಗಿಲ್ಲ, ಅಲ್ಲಿಗೆ ಯಾವ ಪ್ರತ್ಯೇಕ ವಿಧಿಗಳೂ ಇಲ್ಲ ಎಂದಾಗಿದ್ದರೆ 370ನೇ ವಿಧಿ ರದ್ಧತಿಯನ್ನು ಭಿನ್ನ ನೆಲೆಯಲ್ಲಿ ನೋಡಬಹುದಿತ್ತೋ ಏನೋ. ಆದರೆ ವಸ್ತುಸ್ಥಿತಿ ಹಾಗಿಲ್ಲ. 370ನೇ ವಿಧಿಯಂತೆ 371ಎ, 371ಜೆ ಮತ್ತು 371ಹೆಚ್ ವಿಧಿಗಳೂ ಈ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿವೆ ಮತ್ತು ಈ ವಿಧಿಗಳ ಆಧಾರದಲ್ಲಿ ಕರ್ನಾಟಕವೂ ಸೇರಿದಂತೆ ಅಸ್ಸಾಮ್, ಮಹಾರಾಷ್ಟ್ರ, ಗುಜರಾತ್, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಝೋರಾಂ, ಮಣಿಪುರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ವಿಶೇಷ ಸವಲತ್ತುಗಳನ್ನು ಪಡೆಯುತ್ತಲೂ ಇವೆ. ಮಾತ್ರವಲ್ಲ, ಇದಕ್ಕೆ ಕಾರಣವೂ ಇದೆ.

ಈ ದೇಶ ಒಂದೇ ಭಾಷೆ, ಒಂದೇ ಧರ್ಮ ಮತ್ತು ಒಂದೇ ಸಂಸ್ಕೃತಿಯನ್ನು ಒಳಗೊಂಡ ಭೌಗೋಳಿಕ ಭೂಮಿಯಲ್ಲ. ಬುಡಕಟ್ಟುಗಳು, ಆದಿವಾಸಿಗಳು, ವಿವಿಧ ಭಾಷೆಗಳನ್ನಾಡುವವರು ಮತ್ತು ಭಿನ್ನ ಸಂಸ್ಕೃತಿ, ಆಹಾರ, ಆರಾಧನಾ ಪದ್ಧತಿಗಳನ್ನು ಹೊಂದಿದವರ ಜನಸಮೂಹ ಇಲ್ಲಿನದು. ಈ ವೈವಿಧ್ಯತೆಯನ್ನು ಪರಿಗಣಿಸಿ 371ನೇ ವಿಧಿಯನ್ನು ಅಳವಡಿಸಿಕೊಳ್ಳಲಾಗಿದೆ. ಅದರಲ್ಲೂ ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಿಗೆ ನೀಡಲಾಗಿರುವ 371ಎ ಮತ್ತು 371ಜೆ ವಿಧಿಗಳು ಬಹುತೇಕ ಕಾಶ್ಮೀರದ 370ನೇ ವಿಧಿಯನ್ನೇ ಹೋಲುತ್ತದೆ. ಈ ಎರಡು ರಾಜ್ಯಗಳಲ್ಲಿ ಹೊರಗಿನವರು ಜಮೀನು ಖರೀದಿಸುವಂತಿಲ್ಲ. ಹೊರಗಿನವರಿಗೆ ಸ್ಥಳೀಯರು ಜಮೀನು ಮಾರುವಂತೆಯೂ ಇಲ್ಲ. 371ಎಫ್ ವಿಧಿಯ ಅನ್ವಯ ಸಿಕ್ಕಿಂನ ಭೂ ಒಡೆತನದ ಮೇಲೆ ಸರಕಾರಕ್ಕೆ ಹಕ್ಕಿರುತ್ತದೆ. ಬುಡಕಟ್ಟು ಸಮುದಾಯಗಳೇ ಇರುವ ನಾಗಾಲ್ಯಾಂಡ್ ಮತ್ತು ಮಿಜೋರಾಂಗಳನ್ನು ಹಿಂದುಳಿದ ಪ್ರದೇಶಗಳೆಂದು ಘೋಷಿಸಿದ ಭಾರತ ಸರಕಾರವು ಆ ಮೂಲಕ ಅಲ್ಲಿನ ಜಮೀನನ್ನು ಹೊರಗಿನವರು ಖರೀದಿಸದಂತೆ 371ನೇ ವಿಧಿಯ ಮೂಲಕ ನಿಯಂತ್ರಿಸಿತು. ಈ ಎರಡು ರಾಜ್ಯಗಳ ಅನನ್ಯತೆಗೆ (ಐಡೆಂಟಿಟಿ) ಧಕ್ಕೆ ಬರಬಾರದೆಂಬುದೇ ಈ ನಿಯಮದ ಉದ್ದೇಶ. ಹೊರಗಿನವರು ಅಲ್ಲಿ ಭೂಮಿ ಖರೀದಿಸಿ ನೆಲೆಸತೊಡಗಿದರೆ ಒಂದು ದಿನ ಬುಡಕಟ್ಟು ಧರ್ಮ, ಸಂಸ್ಕೃತಿ, ಭಾಷೆ, ಆಚಾರ, ಸಂಪ್ರದಾಯಗಳು ನಶಿಸಿ ಹೋಗಬಹುದು ಎಂಬ ಭೀತಿಯ ಹಿನ್ನೆಲೆಯೂ ಇದಕ್ಕಿದೆ. ಅಂದಹಾಗೆ,

ಕಾಶ್ಮೀರದ 370ನೇ ವಿಧಿಗೆ ಈ ಅನನ್ಯತೆಯ ಜೊತೆಗೇ ಇನ್ನೊಂದು ಪ್ರಮುಖ ಕಾರಣವೂ ಇದೆ. 1947 ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡಾಗ ಭಾರತದ ಜೊತೆ ಈಗಿನ ಅರ್ಧಭಾಗವಷ್ಟೇ ಇತ್ತು. ಬ್ರಿಟಿಷರ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣದಲ್ಲಿದ್ದ 562 ಸಂಸ್ಥಾನಗಳ ಪೈಕಿ ಅರ್ಧದಷ್ಟು ಸ್ವತಂತ್ರ ಭಾರತದ ಹೊರಗಿದ್ದುವು. ಕಾಶ್ಮೀರವೂ ಇದರಲ್ಲಿ ಒಂದು. ಭಾರತ ಸ್ವತಂತ್ರವಾಗುವುದಕ್ಕಿಂತ ಮೊದಲು ಕಾಶ್ಮೀರವು ಒಂದು ರೀತಿಯಲ್ಲಿ ಸ್ವತಂತ್ರವಾಗಿಯೇ ಇತ್ತು. ಬ್ರಿಟಿಷರು ಅಲ್ಲಿನ ಆಡಳಿತದ ಮೇಲೆ ಹಸ್ತಕ್ಷೇಪ ನಡೆಸುತ್ತಿರಲಿಲ್ಲ. ಕಪ್ಪ ಪಡೆದುಕೊಂಡು ಅದರ ಪಾಡಿಗೆ ಅದನ್ನು ಬಿಟ್ಟುಬಿಟ್ಟಿದ್ದರು. ಆದ್ದರಿಂದ ಭಾರತ ಇಲ್ಲವೇ ಪಾಕಿಸ್ತಾನದ ಜೊತೆ ಸೇರಿಕೊಳ್ಳುವುದಕ್ಕಿಂತ ಸ್ವತಂತ್ರವಾಗಿರುವುದನ್ನೇ ಅಲ್ಲಿನ ರಾಜನಾಗಿದ್ದ ಹರಿಸಿಂಗ್ ಬಯಸಿದ್ದರು. ನೆನಪಿರಲಿ, 1947ರ ಜನಗಣತಿಯಂತೆ, ಜಮ್ಮು-ಕಾಶ್ಮೀರದಲ್ಲಿ 77.11% ಮುಸ್ಲಿಮರಿದ್ದರು. 20.12% ಹಿಂದೂಗಳು ಮತ್ತು 1.64% ಸಿಕ್ಖರಿದ್ದರು. ಅಲ್ಲದೇ ಕಾಶ್ಮೀರದ ಗಡಿಗೆ ತಾಗಿಕೊಂಡಿದ್ದುದು ಮುಸ್ಲಿಮ್ ಪಾಕಿಸ್ತಾನ. ಈ ಹಿನ್ನೆಲೆಯಲ್ಲಿ ನೋಡಿದರೆ, ಮುಸ್ಲಿಮರೇ ಹೆಚ್ಚಿರುವ ಕಾಶ್ಮೀರವು ಪಾಕಿಸ್ತಾನದ ಜೊತೆ ವಿಲೀನವಾಗುವುದು ಅಥವಾ ಸ್ವತಂತ್ರವಾಗಿ ಉಳಿಯುವುದು – ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತೇ ಹೊರತು ಭಾರತದ ಜೊತೆ ಸೇರುವುದಲ್ಲ. ಮಹಾರಾಜ ಹರಿಸಿಂಗ್‍ರಂತೂ ಸ್ವತಂತ್ರ ಕಾಶ್ಮೀರದ ಪರ ಇದ್ದರು. ಅವರು ತನ್ನ ಪ್ರಧಾನಿ ರಾಮಚಂದ್ರ ಕಾಕ್‍ರನ್ನು ಶೇಖ್ ಅಬ್ದುಲ್ಲಾರ ಬಳಿಗೆ ಕಳುಹಿಸಿ ಈ ಕುರಿತಂತೆ ಬೆಂಬಲ ಯಾಚಿಸಿದ್ದರು. ಆದರೆ ಶೇಖ್ ಅಬ್ದುಲ್ಲ ಈ ಪ್ರಸ್ತಾಪವನ್ನು ಬೆಂಬಲಿಸಲಿಲ್ಲ. 1947ರಲ್ಲಿ ಎನ್. ರಾಮಸ್ವಾಮಿ ಅಯ್ಯಂಗಾರ್ ರ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ತೆರಳಿದ ನಿಯೋಗದಲ್ಲಿ ಸೇರಿಕೊಂಡ ಶೇಖ್ ಅಬ್ದುಲ್ಲ, ಅಲ್ಲಿ ಘೋಷಿಸಿದ್ದು ಹೀಗೆ;

We shall prefer death rather than join Pakistan. We shall have nothing to do with such a country. (ಪಾಕ್‍ನ ಜೊತೆ ಸೇರುವುದಕ್ಕಿಂತ ನಾವು ಸಾವನ್ನೇ ಆಯ್ಕೆ ಮಾಡುವೆವು. ಪಾಕ್‍ನೊಂದಿಗೆ ನಮಗಾವ ಸಂಬಂಧವೂ ಇಲ್ಲ.) ಹೀಗೆ ಘೋಷಿಸುವಾಗ ಅವರು ಮುಸ್ಲಿಮ್ ಬಹುಸಂಖ್ಯಾತ ಜಮ್ಮು ಕಾಶ್ಮೀರವನ್ನು ಪ್ರತಿನಿಧಿಸುತ್ತಿದ್ದರು ಮತ್ತು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾದ ಪಾಕ್‍ನೊಂದಿಗೆ ಗಡಿಯನ್ನು ಹಂಚಿಕೊಂಡಿದ್ದರು. ಅಂದಹಾಗೆ, ಇಲ್ಲಿ ಎರಡು ಮುಖ್ಯ ಅಂಶಗಳಿವೆ.

1. ಮುಸ್ಲಿಮ್ ಪಾಕ್‍ನ ಜೊತೆ ಸೇರುವುದೇ ಮುಸ್ಲಿಮ್ ಬಹುಸಂಖ್ಯಾತ ಕಾಶ್ಮೀರದ ಇಚ್ಛೆಯಾಗಿರುತ್ತಿದ್ದರೆ ಶೇಖ್ ಅಬ್ದುಲ್ಲಾರ ನಿಲುವಿಗೆ ಕಾಶ್ಮೀರದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿರೋಧ ಎದುರಾಗಬೇಕಿತ್ತು.

2. ಮುಸ್ಲಿಮ್ ಬಹುಸಂಖ್ಯಾತ ಸಂಸ್ಥಾನವೊಂದು ಆವರೆಗೆ ಭಾರತದೊಂದಿಗೆ ಸ್ವಇಚ್ಛೆಯಿಂದ ಸೇರಿಕೊಂಡಿರಲಿಲ್ಲ. ಮುಸ್ಲಿಮರು ಹೆಚ್ಚಿದ್ದ ಹೈದರಾಬಾದನ್ನು ಬಲವಂತದಿಂದ ಭಾರತದೊಂದಿಗೆ ವಿಲೀನಗೊಳಿಸಲಾಗಿತ್ತೇ ಹೊರತು ಅಲ್ಲಿನ ದೊರೆಗಳಾದ ನಿಜಾಮರ ಇಚ್ಛೆ ಅದು ಆಗಿರಲಿಲ್ಲ. ಆದ್ದರಿಂದ ಹಿಂದೂಗಳೇ ಬಹುಸಂಖ್ಯಾತರಿರುವ ಭಾರತದ ಜೊತೆ ಸೇರಿಕೊಳ್ಳುವ ಶೇಖ್ ಅಬ್ದುಲ್ಲಾರ ನಿರ್ಧಾರಕ್ಕೆ ಅಸಾಧಾರಣ ಧೈರ್ಯ ಬೇಕು. ಕಾಶ್ಮೀರದ ಲಾಲ್‍ಚೌಕ್‍ನಲ್ಲಿ ಪ್ರಧಾನಿ ನೆಹರೂರನ್ನು 1948ರಲ್ಲಿ ಶೇಖ್ ಅಬ್ದುಲ್ಲಾರು ಸ್ವಾಗತಿಸಿದ್ದು ಕವಿ ಅಮೀರ್ ಖುಸ್ರೋರ ಪ್ರಸಿದ್ಧ ಹಾಡಿನೊಂದಿಗೆ – ಮುನ್ ತು ಶುದಾಂ ತು ಮುನ್ ಶುದಿ, ಮುನ್ ತುನ್ ಶುದಾಂ ತು ಜಾನ್ ಶುದಿ. (ನಾನು ಬೇರೆಯಲ್ಲ, ನೀನು ಬೇರೆಯಲ್ಲ. ನಾನು ದೇಹ, ನೀನು ಆತ್ಮ.) 370ನೇ ವಿಧಿಯನ್ನು ನಾವು ಗ್ರಹಿಸಿಕೊಳ್ಳಬೇಕಾದುದು ಈ ಹಿನ್ನೆಲೆಯಲ್ಲಿ. ಮುಸ್ಲಿಮ್ ಬಹುಸಂಖ್ಯಾತ ಜಮ್ಮು ಕಾಶ್ಮೀರವು ಭಾರತದ ಭಾಗವಾಗುವ ಸಾಧ್ಯತೆಯೇ ಇಲ್ಲದಿದ್ದಾಗ ಮತ್ತು ಅದನ್ನು ಆಳುತ್ತಿದ್ದ ಹಿಂದೂ ರಾಜನು ಸ್ವತಂತ್ರವಾಗುವುದನ್ನೇ ಬಯಸುತ್ತಿದ್ದಾಗ ಅದನ್ನು ಒಪ್ಪಿಕೊಳ್ಳದೇ ಹಿಂದೂ ಬಾಹುಳ್ಯದ ಭಾರತದೊಂದಿಗೆ ಸೇರಿಕೊಳ್ಳಲು ಕಾಶ್ಮೀರಿಗಳು ಒಪ್ಪಿಕೊಂಡುದಕ್ಕೆ ನೀಡಲಾದ ಕೊಡುಗೆ ಅದು. 370ನೇ ವಿಧಿ ಕಾಶ್ಮೀರಿಗಳ ಸ್ವಾಯತ್ತತೆಗೆ ಸಂಬಂಧಿಸಿದ್ದರೆ ಅದರಲ್ಲೇ ಅಡಕವಾಗಿರುವ 35ಎ ವಿಧಿಯು ಶಾಶ್ವತ ನಿವಾಸಿಗಳ ಹಕ್ಕುಗಳಿಗೆ ಸಂಬಂಧಿಸಿದೆ. ಒಂದು ರೀತಿಯಲ್ಲಿ, 371ನೇ ವಿಧಿಯ ಮೂಲಕ ನಾಗಾಲ್ಯಾಂಡ್ ಮತ್ತು ಮಿಜೋರಾಂಗಳ ಸ್ಥಳೀಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೇಗೆ ಏರ್ಪಾಡು ಮಾಡಲಾಗಿದೆಯೋ ಅದೇ ರೀತಿಯ ಏರ್ಪಾಡು ಇದುವೇ ಹೊರತು ಇನ್ನೇನಲ್ಲ. 370ನೇ ವಿಧಿ ಇದ್ದಾಗಲೂ ಜಮ್ಮು ಕಾಶ್ಮೀರ ಭಾರತದ್ದೇ ಆಗಿತ್ತು. ರದ್ದುಪಡಿಸಿ ದಾಗಲೂ ಭಾರತದ್ದೇ ಆಗಿದೆ. 370ನೇ ವಿಧಿಯ ಮೂಲಕ ಅವರಿಗೆ ಅವರ ಸಂಸ್ಕೃತಿ, ಭಾಷೆ, ವೇಷಭೂಷಣ, ಆಹಾರ ಇತ್ಯಾದಿ ಇತ್ಯಾ ದಿಗಳು ಒಳಗೊಂಡ ‘ಕಾಶ್ಮೀರಿಯತ್’(ಅನನ್ಯತೆ) ಅನ್ನು ಕಾಪಾಡಿಕೊಳ್ಳಬಹುದಾಗಿತ್ತು. ಹೊರಗಿನವರು ಬಂದು ಅಲ್ಲಿ ನೆಲೆಸಿ ಅವರ ಮೇಲೆ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳಬಹುದಾಗಿತ್ತು. ಈಗ ಅದನ್ನು ಕಸಿದುಕೊಳ್ಳಲಾಗಿದೆ ಮತ್ತು ನಾಗಾಲ್ಯಾಂಡ್ ಮತ್ತು ಮಿಜೋರಾಂ ಜನತೆಗೆ ಮಾತ್ರ ಈ ಹಕ್ಕನ್ನು ನೀಡಲಾಗಿದೆ. ಅಷ್ಟಕ್ಕೂ,

370ನೇ ವಿಧಿಯಿಂದಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಹುಟ್ಟಿ ಕೊಂಡದ್ದಲ್ಲ. ಈ ವಿಧಿಯನ್ನು ರದ್ದುಪಡಿಸುವುದು ಅದಕ್ಕೆ ಪರಿಹಾರವೂ ಅಲ್ಲ. ನೋಟು ಅಮಾನ್ಯೀಕರಣದ ಬಳಿಕ ಅದರ ಫಲಿತಾಂಶದ ಕುರಿತು ದೇಶದಲ್ಲಿ ಚರ್ಚೆ ನಡೆಯುತ್ತಿದ್ದಾಗ ಕೇಂದ್ರ ಸರಕಾರ ಕಾಶ್ಮೀರವನ್ನು ತೋರಿಸಿತ್ತು. ಕಾಶ್ಮೀರದಲ್ಲಿ ಕಲ್ಲೆಸೆತ ಕಡಿಮೆಯಾಗಿದೆ, ಗುಂಡಿನ ದಾಳಿ ಕಡಿಮೆಯಾಗಿದೆ ಎಂದು ಅದು ವಾದಿಸಿತ್ತು. ಒಂದುವೇಳೆ, ಅದು ನಿಜವೇ ಆಗಿದ್ದರೆ, 370ನೇ ವಿಧಿಯನ್ನು ರದ್ದುಪಡಿಸಬೇಕಾದ ಅಗತ್ಯವೇ ಇರ ಲಿಲ್ಲ. ನೋಟು ಅಮಾನ್ಯೀಕರಣದಲ್ಲೇ ಭಯೋತ್ಪಾದನೆ ಶಾಶ್ವತವಾಗಿ ಕೊನೆಗೊಳ್ಳಬೇಕಿತ್ತು. ಆದರೆ ಕಾಶ್ಮೀರದ ಹಿಂಸಾಚಾರದಲ್ಲಿ ಹೆಚ್ಚಳ ವಾದದ್ದೇ ನೋಟು ಅಮಾನ್ಯೀಕರಣದ ನಂತರ. ಅಂದರೆ, ನೋಟು ಅಮಾನ್ಯೀಕರಣ ಹೇಗೆ ಆರ್ಥಿಕ ಕ್ಷೇತ್ರದ ಸುಧಾರಣೆಗೆ ಪರಿಹಾರ ಅಲ್ಲವೋ ಹಾಗೆಯೇ 370ನೇ ವಿಧಿ ರದ್ಧತಿಯೂ ಕಾಶ್ಮೀರದ ಪ್ರತ್ಯೇಕತಾವಾದಕ್ಕೆ ಪರಿಹಾರವಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾನ ಮಾಡಿದ್ದ ಮತ್ತು ಆ ಮೂಲಕ ಭಾರತೀಯ ಪ್ರಜಾಸತ್ತೆಯಲ್ಲಿ ನಂಬಿಕೆ ವ್ಯಕ್ತಪಡಿಸಿದ್ದ ಕಾಶ್ಮೀರಿಗಳನ್ನು ಸಾರಾಸಗಟು ಪಾಕ್ ಬೆಂಬಲಿಗರು ಎಂದು ಪಟ್ಟ ಕಟ್ಟಿದರೆ ಹೇಗೆ? ಪ್ರತ್ಯೇಕತಾವಾದಿಗಳು ಖಂಡಿತ ಇದ್ದಾರೆ. ಭಯೋತ್ಪಾದಕರೂ ಇದ್ದಾರೆ. ಆದರೆ, ಅವರಿಗಿರುವ ಸವಲತ್ತುಗಳನ್ನು ಅಥವಾ ಅವರ ಅನನ್ಯತೆಯನ್ನು ಕಿತ್ತುಕೊಳ್ಳುವುದರಿಂದ ಪ್ರತ್ಯೇಕವಾದಿಗಳನ್ನು ಭಾರತ ಪರ ವಾದಿಗಳಾಗಿ ಬದಲಿಸಲು ಸಾಧ್ಯವೇ? ಹಾಗಿದ್ದರೆ,

ನಾಗಾಲ್ಯಾಂಡ್ ಮತ್ತು ಮಿಜೋರಾಂನ 371ನೇ ವಿಧಿಯನ್ನು ಕೇಂದ್ರ ಸರಕಾರ ಯಾಕೆ ಕಿತ್ತುಕೊಂಡಿಲ್ಲ? ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಮನ್ನು ಸೇರಿಸಿಕೊಂಡು ‘ಸ್ವತಂತ್ರ ನಾಗಲಿಂ’ ರಾಷ್ಟ್ರವನ್ನು ಕಟ್ಟುವುದಕ್ಕಾಗಿ 1980ರಲ್ಲಿ ಸ್ಥಾಪಿತವಾದ ನ್ಯಾಶನಲ್ ಸೋಷಿಯ ಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) ಎಂಬ ಗುಂಪು ಮಾಡಿದ್ದೇನು? ಭಯೋತ್ಪಾದನೆಯನ್ನೇ ಅಲ್ಲವೇ? ಮ್ಯಾನ್ಮಾರ್ ಮತ್ತು ನೇಪಾಳದ ಗಡಿಭಾಗದಲ್ಲಿದ್ದುಕೊಂಡು ಅದು ಎಸಗಿದ ಭಯೋತ್ಪಾದನಾ ಸಂಚುಗಳೆಷ್ಟು? ದಾಳಿಗಳೆಷ್ಟು? ಈ ದಾಳಿಗಳನ್ನು ಮಟ್ಟ ಹಾಕುವುದಕ್ಕಾಗಿಯೇ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(AFSPA) ಯನ್ನು ಈ ರಾಜ್ಯಗಳ ಮೇಲೆ ಕೇಂದ್ರ ಹೇರಿದ್ದಲ್ಲವೇ? ಈ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿಯೇ ಮಣಿಪುರದ ಇರೋಮ್ ಶರ್ಮಿಳಾ ಅನ್ನಾಹಾರ ತ್ಯಜಿಸಿ ಉಪವಾಸ ಕೂತದ್ದು. ಅಸ್ಸಾಮ್‍ನಲ್ಲಿ ಉಲ್ಫಾಗಳು, ಬೋಡೋಗಳು ಮಾಡಿದ್ದೂ ಭಯೋತ್ಪಾದನೆಯನ್ನೇ. 371ನೇ ವಿಧಿಯ ಅನ್ವಯ ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವ ಈ ರಾಜ್ಯವನ್ನೇ ಸ್ವತಂತ್ರಗೊಳಿಸುವುದು ಅವುಗಳ ಉದ್ದೇಶ. ಹಾಗೆಯೇ ಇದೇ ಅಸ್ಸಾಮ್ ನಲ್ಲಿ ಕುರ್ಬಿಗಳಿಗಾಗಿ ಸ್ವತಂತ್ರ ರಾಷ್ಟ್ರದ ಬೇಡಿಕೆಯೊಂದಿಗೆ ಯುನೈಟೆಡ್ ಪೀಪಲ್ಸ್ ಡೆಮಾಕ್ರಾಟಿಕ್ ಸಾಲಿಡಾರಿಟಿ (UPDS) ಎಂಬ ಗುಂಪು ಅಸ್ತಿತ್ವಕ್ಕೆ ಬಂತು. ಸ್ವತಂತ್ರ ತ್ರಿಪುರಕ್ಕಾಗಿ ನ್ಯಾಶನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (NLFT) ಎಂಬ ಸಂಘಟನೆ ಈಗಲೂ ಹೋರಾಟದಲ್ಲಿದೆ. ಈ ನಡುವೆ 2015 ರಲ್ಲಿ ನಾಗಾಲ್ಯಾಂಡ್‍ನ ಭಯೋತ್ಪಾದಕ ಗುಂಪಾದ NSCN ಮತ್ತು ಕೇಂದ್ರ ಸರಕಾರದ ನಡುವೆ ‘ನಾಗಾಲ್ಯಾಂಡ್ ಶಾಂತಿ ಒಪ್ಪಂದ’ ಏರ್ಪಟ್ಟಿತು. ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಧ್ಯಸ್ತಿಕೆದಾರನಾಗಿ ಕಾರ್ಯನಿರ್ವಹಿಸಿದ್ದು ಆರ್.ಎಸ್. ರವಿ. ನಿಜವಾಗಿ, ಆ ಒಪ್ಪಂದದಲ್ಲಿ NSCNನ ಪ್ರತಿನಿಧಿಗಳು ಇಟ್ಟ ಬೇಡಿಕೆಯ ಮುಂದೆ ಕಾಶ್ಮೀರದ 370ನೇ ವಿಧಿ ಏನೇನೂ ಅಲ್ಲ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಮ್ ಮತ್ತು ಮಣಿಪುರಗಳನ್ನೊಳ ಗೊಂಡ ನಾಗಲಿಂ ರಾಷ್ಟ್ರದ ಕನಸು ಕಾಣುತ್ತಿರುವ ಈ ಸಂಘಟನೆಯು ನಾಗಾಗಳಿಗೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಪಾಸ್‍ಪೋರ್ಟ್ ಮತ್ತು ಧ್ವಜದ ಬೇಡಿಕೆಯನ್ನಿಟ್ಟಿತು. ಈವರೆಗೂ ಈ ಒಪ್ಪಂದ ಅಂತಿಮಗೊಂಡಿಲ್ಲವಾದರೂ ಪ್ರತ್ಯೇಕ ಧ್ವಜ ಮತ್ತು ಪ್ರತ್ಯೇಕ ಸಂವಿಧಾನದ ಬೇಡಿಕೆಯಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಅದು ಮೊನ್ನೆ ಪುನಃ ಘೋಷಿಸಿದೆ.

370 ಮತ್ತು 371ನೇ ವಿಧಿ- ಇವೆರಡೂ ಆಯಾ ಪ್ರದೇಶಗಳ ಅನನ್ಯತೆಯನ್ನು ಕಾಪಾಡುವ ಗುರುತುಗಳೇ ಹೊರತು ಪ್ರತ್ಯೇಕತೆಯ ಸಂಕೇತಗಳಲ್ಲ. ಕಾಶ್ಮೀರದ ಭಯೋತ್ಪಾದನೆಯನ್ನು ಮಟ್ಟ ಹಾಕುವುದಕ್ಕೆ 370ನೇ ವಿಧಿ ರದ್ಧತಿಯಿಂದ ಮಾತ್ರ ಸಾಧ್ಯ ಎಂದು ವಾದಿಸುವ ಕೇಂದ್ರ ಸರಕಾರವು ನಾಗಾಲ್ಯಾಂಡ್‍ನ ಭಯೋತ್ಪಾದನೆಗೆ 371ನೇ ವಿಧಿಯೇ ಕಾರಣ ಎಂದು ಹೇಳುತ್ತಲೇ ಇಲ್ಲ. ನಾಗಾಲ್ಯಾಂಡ್‍ನ ಭಯೋತ್ಪಾದಕ ಸಂಘಟನೆಯಾದ NSCN ನೊಂದಿಗೆ ಶಾಂತಿ ಒಪ್ಪಂದಕ್ಕೆ ಮುಂದಾಗುವ ಕೇಂದ್ರ ಸರಕಾರವು ಕಾಶ್ಮೀರದ ಭಯೋತ್ಪಾದಕ ಗುಂಪುಗಳ ಜೊತೆ ಬಿಡಿ, ಪ್ರತ್ಯೇಕತಾವಾದಿಗಳೊಂದಿಗೆ ಮಾತಾಡುವುದಕ್ಕೂ ಒಲವು ತೋರುತ್ತಿಲ್ಲ. 371ನೇ ವಿಧಿಯನ್ನು ಉಳಿಸಿಕೊಂಡೇ ನಾಗಾಲ್ಯಾಂಡ್‍ನಲ್ಲಿ ಭಯೋತ್ಪಾದಕ ಗುಂಪುಗಳೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೆಂದಾದರೆ, ಕಾಶ್ಮೀರದಲ್ಲಿ ಯಾಕೆ ಅದು ಅಸಾಧ್ಯ ಎಂಬ ಪ್ರಶ್ನೆಯನ್ನು ಯಾರೂ ಮುನ್ನೆಲೆಗೆ ತರುತ್ತಲೂ ಇಲ್ಲ. 370ನೇ ವಿಧಿಯನ್ನು ಪ್ರತ್ಯೇಕತೆಯ ಸಂಕೇತವಾಗಿ ಉಬ್ಬಿಸಿ, ಭಯೋತ್ಪಾದನೆಗೆ ಅದನ್ನೇ ಕಾರಣವಾಗಿ ಬಿಂಬಿಸಿ, ಉಪ್ಪು-ಖಾರ ಸೇರಿಸಿ ಹಂಚಿದವರು ಒಮ್ಮೆಯೂ ಕಾಶ್ಮೀರದ ಭಯೋತ್ಪಾದಕರಿಗೆ 46 ಸಾವಿರದಷ್ಟು ಕಾಶ್ಮೀರಿಗಳು ಜೀವ ತೆತ್ತಿರುವುದನ್ನು, ಕಷ್ಟಕ್ಕೆ ಗುರಿಯಾಗಿರುವುದನ್ನು, ಸಹಜ ಬದುಕು ನಷ್ಟಗೊಂಡಿರುವುದನ್ನು ಗಂಭೀರ ಚರ್ಚೆಗೆ ಒಳಪಡಿಸುತ್ತಲೂ ಇಲ್ಲ. ಈ ದೇಶದ ಅಭಿವೃದ್ಧಿಯಲ್ಲಿ ಕಾಶ್ಮೀರಿಗಳ ಪಾಲು ಇದೆ. ಅವರು ತೆರಿಗೆ ಕಟ್ಟುತ್ತಿದ್ದಾರೆ. ಅವರು ಹಣ್ಣು-ಹಂಪಲುಗಳನ್ನು ಬೆಳೆದು ಭಾರತೀಯರಿಗೆ ನೀಡುತ್ತಿದ್ದಾರೆ. ಅವರ ಕೃಷಿ ಚಟುವಟಿಕೆಗಳು ಭಾರತದ ಜಿಡಿಪಿಯ ವೃದ್ಧಿಗೆ ನೆರವಾಗುತ್ತಿದೆ.

ಕಾಶ್ಮೀರಿಗಳೆಂದರೆ ಮನುಷ್ಯರು. ಮುಸ್ಲಿಮ್ ಬಾಹುಳ್ಯದ ಪಾಕಿಸ್ತಾನದ ಪಕ್ಕವೇ ಇದ್ದೂ ಮತ್ತು ಅದರೊಂದಿಗೆ ಕರುಳಬಳ್ಳಿ ಸಂಬಂಧ ಹೊಂದಿಯೂ ಕಾಶ್ಮೀರಿಗಳು ಭಾರತವನ್ನು ತಮ್ಮ ದೇಶವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ಪಾಕ್‍ನೊಂದಿಗೆ ಸೇರಿಕೊಳ್ಳುವುದಕ್ಕೆ ಅವರಿಗೆ ಅವಕಾಶ ಮುಕ್ತವಾಗಿತ್ತು. ಒಂದುವೇಳೆ, ಹಾಗೆ ಮಾಡಿರುತ್ತಿದ್ದರೆ ಅದಕ್ಕೆ ಅಡ್ಡಿಪಡಿಸುವವರು ಯಾರೂ ಇರಲಿಲ್ಲ. ಸ್ವತಂತ್ರವಾಗಿದ್ದ ಆ ಸಂಸ್ಥಾನ ಪಾಕ್‍ನ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾವು ಗೌರವ ಸಲ್ಲಿಸಬೇಕೇ ಹೊರತು ತೆಗಳುವುದಲ್ಲ. 370ನೇ ವಿಧಿ ಒಂದು ರೀತಿಯಲ್ಲಿ ಅವರ ನಿರ್ಧಾರಕ್ಕೆ ಕೊಡಲಾದ ಪಾರಿತೋಷಕ. ಅದರಿಂದಾಗಿ, ಅವರು ಭಾರತದಿಂದ ಹೊರತಾದವರೇನೂ ಆಗಿರಲಿಲ್ಲ. ಭಾರತಕ್ಕಿಂತ ಮೇಲಿನವರೂ ಆಗಿರಲಿಲ್ಲ. ಅವರು ಭಾರತೀಯರು ಅನ್ನುವುದಕ್ಕೆ ಆ ವಿಧಿಯೇ ಸಾಕ್ಷಿ. ನಾಗಾಲ್ಯಾಂಡ್, ಮಿಜೋರಾಂಗಳಿಗೆ ನೀಡಲಾದ 371ನೇ ವಿಧಿ ಹೇಗೆ ಅವರನ್ನು ಅಭಾರತೀಯಗೊಳಿಸುವುದಿಲ್ಲವೋ ಹಾಗೆಯೇ ಇದು. ಅದು ಅನನ್ಯತೆಯನ್ನು ಕಾಪಾಡಿಕೊಳ್ಳುವುದಕ್ಕೆ ಇರುವ ಅಸ್ತ್ರ. ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಿಗೆ ಈ ಅನನ್ಯತೆಯ ವಿಧಿಯನ್ನು ಹಾಗೆಯೇ ಇರಗೊಟ್ಟು ಕಾಶ್ಮೀರಿಗಳಿಂದ ಮಾತ್ರ ಅದನ್ನು ಕಿತ್ತು ಕೊಳ್ಳುವುದು ಶುದ್ಧ ಅನ್ಯಾಯ, ದಬ್ಬಾಳಿಕೆ ಮತ್ತು ಭುಜಬಲದ ಪ್ರದರ್ಶನ.