ಸನ್ಮಾರ್ಗ ವಾರ್ತೆ
ಮಂಗಳೂರು,ಆ,27:ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿಯಿಂದ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಹಮ್ಮಿಕೊಳಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಮಿತಿಯ ಗೌರವಾಧ್ಯಕ್ಷ ನಝೀರ್ ಹುಸೇನ್ ಮಾತಾಡಿದರು.
“ಮಂಗಳೂರು ತಾಲೂಕಿನಲ್ಲಿರುವ ಬೆಂಗರೆ ಗ್ರಾಮವು, ಮಹಾನಗರ ಪಾಲಿಕೆಯ 60 ಮತ್ತು 11ನೇ ವಾರ್ಡಿಗೆ ಒಳಪಟ್ಟಿದ್ದು, ಫಾತಿಮಾ ಚರ್ಚ್ನಿಂದ ಪ್ರಾರಂಭಿಸಿ, ಬೊಕ್ಕಪಟ್ಣ ಬೆಂಗರೆ, ಕುದ್ರೋಳಿ ಬೆಂಗರೆ, ಕಸಬಾ ಬೆಂಗರೆ, ಹಾಗೂ ತೋಟಬೆಂಗರೆಯ ವರೆಗಿನ ಪ್ರದೇಶಗಳನ್ನು ಒಳಗೊಂಡಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 3500ಕ್ಕಿಂತ ಹೆಚ್ಚು ಮನೆಗಳಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆ ವಾಸಿಸುತ್ತಿದ್ದು, ಈ ಹಿಂದೆ ಕಸಬಾ ಬಜಾರ್ಗೆ ಒಳಪಟ್ಟಿತ್ತು. ತದನಂತರ 1996ರಲ್ಲಿ ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡಿರುತ್ತದೆ.
2012ರಲ್ಲಿ ಜಿಲ್ಲಾಡಳಿತವು ಇದನ್ನು `ಬೆಂಗರೆ ಗ್ರಾಮ’ವೆಂದು ಅಧಿಕೃತವಾಗಿ ಘೋಷಿಸಿತು. ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಧರ್ಮದ ಜನರು ಅನ್ಯೋನ್ಯವಾಗಿ ಇದ್ದು, ಹೆಚ್ಚಿನವರು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದಿಂದ ಪ್ರತೀ ಮನೆಗೆ, ತಲಾ ಸುಮಾರು ರೂ. 500ರಿಂದ ರೂ.1500 ತನಕ ವಾರ್ಷಿಕ ತೆರಿಗೆಯನ್ನು ಮಹಾನಗರ ಪಾಲಿಕೆ ಪಡೆಯುತ್ತಿದೆ. ಅಲ್ಲದೆ, ಬೇರೆ ಮೂಲಗಳ ಮೂಲಕವು ಸರಕಾರಕ್ಕೆ ಈ ಗ್ರಾಮದಿಂದ ಆದಾಯ ಹೋಗುತ್ತಿದೆ. ಆದರೆ ಇಂದಿನವರೆಗೆ ಸದ್ರಿ ಪಾಲಿಕೆಯಾಗಲೀ, ಜನಪ್ರತಿನಿಧಿಯಾಗಲೀ, ಸಂಸದರ ನಿಧಿಯಿಂದಾಗಲೀ ಈ ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ಸಿಕ್ಕಿರುವುದಿಲ್ಲ. ಶಾಸಕರ ಮತ್ತು ಕಾರ್ಪೊರೇಟರ್ರ ನಿಧಿಗಳಿಂದಲೂ ಮೂಲಭೂತ ಸೌಲಭ್ಯಗಳ ಕಾರ್ಯಗಳೇನು ನಡೆದಿರುವುದಿಲ್ಲ.
ಬೆಂಗರೆ ಗ್ರಾಮದಲ್ಲಿ ಮುಖ್ಯವಾಗಿ ಚರಂಡಿ, ನೀರು ಸರಬರಾಜಿನ ವ್ಯವಸ್ಥೆ, ಒಳಚರಂಡಿ, ಮುಖ್ಯರಸ್ತೆಗೆ ಸಂಪೂರ್ಣ ಕಾಂಕ್ರಿಟೀಕರಣ, ಒಳರಸ್ತೆ ನಿರ್ಮಾಣ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಅಭಿವೃದ್ಧಿ, ಹೆರಿಗೆ ಆಸ್ಪತ್ರೆ ನಿರ್ಮಾಣ, ಉಪ ಪೋಲೀಸ್ ಠಾಣೆ ನಿರ್ಮಾಣ ಮೊದಲಾಗಿ ಹೆಚ್ಚಿನ ಮೂಲಭೂತ ಸೌಲಭ್ಯಗಳು ಪೂರ್ತಿಯಾಗದೆಯೇ ಉಳಿದಿವೆ.
ಇದೀಗ ಇಲ್ಲಿನ ಪ್ರಜ್ಞಾವಂತ ನಾಗರಿಕರೆಲ್ಲಾ ಒಗ್ಗಟ್ಟಾಗಿ, “ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿ” ಯನ್ನು ರಚಿಸಿ ಊರಿನ ಸಂಪೂರ್ಣ ಪ್ರಗತಿಗೆ ಪಣ ತೊಟ್ಟಿರುತ್ತಾರೆ. ಇಲ್ಲಿಯವರೆಗೆ ಸರಕಾರದಿಂದ ನಿರ್ಲಕ್ಷ್ಯಗೊಳಗಾಗಿರುವ ಬೆಂಗರೆ ಗ್ರಾಮದ ಸದ್ರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಒಂದೊಂದಾಗಿ ಪರಿಹರಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯು ಹೆಚ್ಚಿನ ನಿಗಾ ವಹಿಸಬೇಕೆಂದು ಸಮಿತಿಯು ಆಗ್ರಹಿಸಿದೆ. ಈ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ತಾಲೂಕಿನ ಮುಖ್ಯವಾಹಿನಿಗೆ ಬೆಂಗರೆ ಗ್ರಾಮವನ್ನು ತರಬೇಕೆಂದು “ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿ”ಯು ಜಿಲ್ಲಾಡಳಿತಕ್ಕೆ ಮನವಿ ಮಾಡಲಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಬೆಂಗರೆಯ ಸಾರ್ವಜನಿಕರನ್ನು ಒಗ್ಗೂಡಿಸಿ, ಸಮಿತಿಯ ನೇತೃತ್ವದಲ್ಲಿ ಹೋರಾಟಗಳನ್ನು ನಡೆಸಲಾಗುವುದು ಎಂದು ಕೂಡಾ ಈ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ವಕೀಲರಾದ ಸರ್ಫರಾಝ್, ಸಮಿತಿ ಅಧ್ಯಕ್ಷರಾದ ಸಲಾವುದ್ದೀನ್, ಊರಿನ ಸಮಾಜ ಸೇವಕರಾದ ಶ್ರೀಕಾಂತ್ ಸಾಲಿಯಾನ್ ಮತ್ತು ಸಮಿತಿಯ ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್ ಉಪಸ್ಥಿತರಿದ್ದರು.












