ಸನ್ಮಾರ್ಗ ವಾರ್ತೆ
ಲಕ್ನೊ,ಆ. 29: ಮಾಜಿ ಕೇಂದ್ರ ಸಚಿವ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ದಿಲ್ಲಿಯಲ್ಲಿ ಪತ್ತೆಹಚ್ಚಿದ್ದಾರೆ. ಕಿರುಕುಳ ದೂರು ಬಹಿರಂಗವಾದ ಬಳಿಕ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದರು. ದಿಲ್ಲಿಯ ಹೊಟೇಲೊಂದರಲ್ಲಿ ವಿದ್ಯಾರ್ಥಿನಿ ಕಾಣಿಸಿಕೊಂಡಿದ್ದಾಳೆ ಮತ್ತು ಆಕೆಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ಫೋನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಳು. ಸಿಸಿಟಿವಿ ದೃಶ್ಯಗಳಲ್ಲಿ ದ್ವಾರಕದ ಹೊಟೇಲಿನಲ್ಲಿ ತಂಗಿರುವುದು ಕೂಡ ದೃಢವಾಗಿದೆ. ಆಗಸ್ಟ್ 24ರ ಸಿಸಿಟಿವಿ ದೃಶ್ಯಗಳಲ್ಲಿ ವಿದ್ಯಾರ್ಥಿನಿ ಇರುವುದು ಧೃಢೀಕರಿಸಲಾಗಿದೆ. ನಂತರ ವಿದ್ಯಾರ್ಥಿನಿ ಮತ್ತು ಆಕೆಯೊಂದಿಗಿದ್ದ ಯುವಕ ಬೇರೆ ಸ್ಥಳಕ್ಕೆ ವಾಸ್ತವ್ಯ ವರ್ಗಾಯಿಸಿದ್ದಾರೆ. ಆದರೆ, ಹೊಟೇಲಿನಲ್ಲಿ ರೂಮ್ ಪಡೆಯಲು ನೀಡಿದ್ದ ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯುವತಿಯನ್ನು ಅತ್ಯಾಚಾರ ಮಾಡಿದ ವೀಡಿಯೊ ಮತ್ತು ಸಾಕ್ಷ್ಯಗಳನ್ನು ಸಮಾಜಿಕ ಮಾಧ್ಯಮದಲ್ಲಿ ಬಹಿರಂಗಗೊಳಿಸುತ್ತೇವೆ. ಇಲ್ಲದಿದ್ದರೆ ಐದು ಕೋಟಿ ಕೊಡಬೇಕೆಂದು ಸ್ವಾಮಿ ಚಿನ್ಮಯಾನಂದರಿಗೆ ಅಜ್ಞಾತ ವ್ಯಕ್ತಿಯೊಬ್ಬ ಫೋನ್ ಮಾಡಿದ್ದ. ವಿದ್ಯಾರ್ಥಿನಿ ಮತ್ತು ಯುವಕ ಉತ್ತರಪ್ರದೇಶದ ಶಹಜಾನ್ ಪುರದವರೆಂದು ಪೊಲೀಸರು ಹೇಳಿದ್ದಾರೆ.
ಶಹಜಾನ್ಪುರದ ಸ್ವಾಮಿ ಚಿನ್ಮಯಾನಂದ ನಿರ್ದೇಶಕರಾದ ಸಂಸ್ಥೆಯ ಎಲ್ಎಲ್ಎಂ ವಿದ್ಯಾರ್ಥಿನಿಯಾಗಿದ್ದು ತನ್ನಂತೆ ಹಲವು ಹೆಣ್ಣುಮಕ್ಕಳನ್ನು ಚಿನ್ಮಯಾನಂದ ಅತ್ಯಾಚಾರ ಮಾಡಿದ್ದಾನೆಂದು ಯುವತಿ ಫೇಸ್ಬುಕ್ ಮೂಲಕ ವೀಡಿಯೊ ಬಹಿರಂಗಪಡಿಸಿದ್ದಳು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಂದ ಸಹಾಯವನ್ನು ಆಕೆ ಯಾಚಿಸಿದ್ದಳು. ಆದರೆ ಆಗಸ್ಟ್ 24ರ ನಂತರ ಆಕೆ ನಾಪತ್ತೆಯಾಗಿದ್ದಳು. ಯುವತಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ದಿವಸ 72 ವರ್ಷದ ಚಿನ್ಮಾಯನಂದರ ವಿರುದ್ಧ ಅಪಹರಣ, ಕೊಲೆ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಆರೋಪ ಸ್ಪಷ್ಟವಾಗದ್ದರಿಂದ ಪ್ರಕರಣ ದಾಖಲಿಸಕೊಂಡಿಲ್ಲ.












