ಸನ್ಮಾರ್ಗ ವಾರ್ತೆ
ಶ್ರೀನಗರ, ಆ.30: ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿಗಿಂತ ಮೊದಲು ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಮರ್ಥಿಸಿಕೊಂಡಿದ್ದಾರೆ. ಈಗಿರುವ ಜೀವನವನ್ನು ಯಾಕೆ ಕಾಶ್ಮೀರದ ನಾಯಕರು ಆಸ್ವಾದಿಸಬಾರದು ಎಂದು ರಾಜ್ಯಪಾಲರು ಪ್ರಶ್ನಿಸಿದರು. ಮೆಹಬೂಬ ಮುಫ್ತಿಯವರನ್ನು ಸುಂದರವಾದ ಕಾಟೇಜ್ನಲ್ಲಿ ಗೃಹಬಂಧನದಲ್ಲಿರಿಸಲಾಗಿದೆ. ಆ ಕಾಟೇಜಿನಲ್ಲಿ ವಾಸಿಸಲು ನಾನು ಕೂಡ ಬಯಸುತ್ತೇನೆ. ನಾಯಕರು ಜೈಲಿನಲ್ಲಿರುವುದನ್ನು ಕಲಿಯಬೇಕು. ಉಮರ್ ಅಬ್ದುಲ್ಲ್ ಹರಿ ನಿವಾಸ್ ಕಾಟೇಜಿನಲ್ಲಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ರಾಜ್ಯಪಾಲರು ಹೇಳಿದರು.
ಪ್ರಜಾಪ್ರಭುತ್ವ ರೀತಿಯಲ್ಲಿಯೇ ಆರ್ಟಿಕಲ್ 370 ರದ್ದು ಪಡಿಸಲಾಗಿದೆ. ಮೋದೀಜಿ ಜೇಬಿನಿಂದ ಒಂದು ಕಾಗದ ತೆಗೆದು ಆದೇಶ ಹೊರಡಿಸಿದ್ದಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅದು ಪಾಸಾಗಿದೆ. ಆರ್ಟಿಕಲ್ 370 ನಮ್ಮನ್ನು ಬಲಶಾಲಿಗೊಳಿಸಿದೆ ಎನ್ನುವ ಕಾಶ್ಮೀರಗಳ ಭಾವನೆ ಸರಿಯಲ್ಲ. ಇನ್ನು ಅವರಿಗೆ ಹೊಸ ವಾತಾವರಣವನ್ನು ತೆರೆಯಬಹುದು. 50,000 ಮಂದಿಗೆ ಕೆಲಸ ಕೊಡುತ್ತೇವೆ ಎಂದು ರಾಜ್ಯಪಾಲರು ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಲ್ಯಾಂಡ್ಲೈನ್ ಲ-ಮೊಬೈಲ್ ಸಂಪರ್ಕಗಳನ್ನು ಮರುಸ್ಥಾಪಿಸಲಾಗಿದೆ. ಆದರೆ ಇಂಟರ್ನೆಟ್ ಸೇವೆಯನ್ನು ಯಾವಾಗ ಆರಂಭಿಸಲಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಇಂಟರ್ನೆಟ್ ಪಾಕಿಸ್ತಾನ ಮತ್ತು ಭಯೋತ್ಪಾದಕರ ಕೈಯಲ್ಲಿ ಆಯುಧವಾಗಿದೆ. ನಾವೆಲ್ಲರೂ ಇಂಟರ್ನೆಟ್ ಇಲ್ಲದೆ ಬದುಕಿದವರು. ಇನ್ನೂ ಸ್ವಲ್ಪ ಸಮಯ ಅದು ಮುಂದುವರಿಯಲಿ. ಕಾಶ್ಮೀರಕ್ಕೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಂದ ಪ್ರತಿಪಕ್ಷ ನಾಯಕರನ್ನು ಯಾಕೆ ಹಿಂದಕ್ಕೆ ಕಳುಹಿಸಲಾಯಿತು ಎಂಬ ಪ್ರಶ್ನೆಗೆ ಚಾ ಸ್ಯಾಂಡ್ವಿಚ್ ಕೊಟ್ಟು ಅವರನ್ನು ಮರಳಿ ಕಳುಹಿಸಿದ್ದೇವೆ ಎಂದು ರಾಜ್ಯಪಾಲರು ಹೇಳಿದರು.












