ಎ ಪ್ಲಸ್ ಮಾರ್ಕ್ ನಿಂದ ಎಲ್ಲವನ್ನೂ ಸಾಧಿಸಬಹುದೇ?

0
1508

ಖದೀಜ ನುಸ್ರತ್ ಅಬು ಧಾಬಿ

ಮಗು ಹುಟ್ಟಿದಾಗ ಆ ಮಗುವಿನ ಎಲ್ಲಾ ವಿಷಯಗಳಲ್ಲೂ ಅತ್ಯುತ್ತಮವಾಗಿರಬೇಕೆಂದು ಮಾತಾಪಿತರು ಬಯಸುವುದು ಸಹಜವಾಗಿದೆ. ಮಕ್ಕಳು ಮಾತಾಪಿತರ ಬಳಿ ಕೆಲವು ಸಮಯದವರೆಗೆ ಮಾತ್ರ ಇರುವ ಅಮಾನತ್(ವಿಶ್ವಸ್ಥ ನಿಧಿ) ಎಂದು ನಾವು ತಿಳಿದಿರಬೇಕು. ನಮ್ಮ ಮೇಲೆ ಅವಲಂಬಿತವಾಗಿರುವ ಈ ಮುಗ್ದ ಮಕ್ಕಳನ್ನು ಜವಾಬ್ದಾರಿಯುತ ಸ್ವತಂತ್ರ ವ್ಯಕ್ತಿಯನ್ನಾಗಿ ಬೆಳೆಸುವುದು ಪೋಷಕರ ಉದ್ದೇಶವಾಗಿರಬೇಕು. ನನ್ನ ಮಗು ಎಂಬುದಕ್ಕಿಂತಲೂ ಹೆಚ್ಚಾಗಿ ಖೈರ್ ಉಮ್ಮತ್ (ಅತ್ಯುತ್ತಮ ಸಮುದಾಯದ) ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಬೆಳೆಸಲು ಪ್ರಯತ್ನಿಸಬೇಕು. ಹೆತ್ತವರ ಉತ್ತಮ ತರಬೇತಿಯ ಪರಿಣಾಮವಾಗಿ ಸಜ್ಜನರಾಗಿ ಬೆಳೆದ ಮಕ್ಕಳ ಪ್ರಾರ್ಥನೆಯ ಪುಣ್ಯವು ಮರಣಾನಂರತರವೂ ಮಾತಾಪಿತರಿಗೆ ತಲುಪುವುದು.

ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಾತಾಪಿತರು ಹಾಗೂ ಮಕ್ಕಳ ಸಂಬಂಧ, ಸಹೋದರ ಸಹೋದರಿಯರ ಸಂಬಂಧ ಮತ್ತು ಮಾತಾಪಿತರ ಮಧ್ಯೆ ಇರುವ ಸಂಬಂಧ ಪ್ರಮುಖ ಪಾತ್ರ ವಹಿಸುತ್ತದೆ. ಮಾನವನು ಬಯಸುವ ಶಾಂತಿಯು ಮನೆಯಿಂದಲೇ ಆರಂಭವಾಗಬೇಕು. ಯಾವಾಗಲೂ ಮಕ್ಕಳ ಕಲಿಕೆ, ಉದ್ಯೋಗ, ವಿವಾಹ ಅಥವಾ ಸಂಪತ್ತು ಸ್ಥಾನಮಾನದ ವಿಷಯದಲ್ಲಿ ಅತಿಯಾದ ನಿರೀಕ್ಷೆಯನ್ನಿಡಬಾರದು. ಕಲಿಯುವ ವಿಷಯದಲ್ಲಿಎ ಪ್ಲಸ್, ಮೊದಲನೇ ಸ್ಥಾನ ಪಡೆಯಬೇಕು ಎಂದು ಒತ್ತಡ ಹಾಕಬೇಡಿರಿ. ಅವರಿಗೆ ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ಪ್ರಯತ್ನಿಸಲು ಪ್ರೋತ್ಸಾಹಿಸಿರಿ. ಪರೀಕ್ಷೆ ಕಳೆದ ನಂತರ ಸಿಕ್ಕಿದುದರಲ್ಲಿ ಸಂತೃಪ್ತಿ ಪಡಿರಿ. 99 ಅಂಕ ಸಿಕ್ಕಿದರೂ ಒಂದು ಅಂಕ ಎಲ್ಲಿ ಹೋಯಿತು ಎಂದು ಪ್ರಶ್ನಿಸುವವರಿದ್ದಾರೆ. ಕಡಿಮೆ ಅಂಕ ಸಿಕ್ಕಿದರೆ ಪೋಲೀಸರಂತೆ ಹೆತ್ತವರನ್ನು ಎದುರಿಸಲು ಹೆದರುವ ಮಕ್ಕಳಿದ್ದಾರೆ. ಅಂತಹ ಮಕ್ಕಳು ಪರೀಕ್ಷೆಯಲ್ಲಿ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾ ನಿರೀಕ್ಷಿಸಿದಷ್ಟು ಫಲಿತಾಂಶ ಪಡೆಯಲು ವಿಫಲರಾಗುತ್ತಾರೆ.

ನಮಗೆ ಸಾಧ್ಯವಿಲ್ಲದನ್ನು ಕಲಿಯಲು ಅಥವಾ ಸಂಪಾದಿಸಿ ತರಲು ಯಾರಾದರೂ ನಮ್ಮ ಮೇಲೆ ಒತ್ತಡ ಹಾಕುವುದನ್ನು ನಾವು ಇಚ್ಛಿಸುತ್ತೇವೆಯೇ? ಖಂಡಿತ ಇಲ್ಲ. ಬೆಳೆಯುವ ಮಕ್ಕಳ ಮೇಲೆ ಒತ್ತಡ ಹಾಕಬೇಡಿರಿ. ಅವರ ಬಾಲ್ಯ ಕಾಲದಲ್ಲಿ ಆಹ್ಲಾದಿಸಲು ಬಿಡಿರಿ . ನಮ್ಮ ಕಳೆದುಹೋದ ಬಾಲ್ಯವೆನ್ನುವುದು ಜೀವನದಲ್ಲಿ ಇನ್ನೊಮ್ಮೆ ಸಿಗಲು ಸಾಧ್ಯವಿಲ್ಲ. ನಮ್ಮ ಬಾಲ್ಯ ಕಾಲದಲ್ಲಿ ಶಾಲೆಗೆ ತಡವಾಗಿ ಹೋದುದು, ಹೋಮ್ ವರ್ಕ್ ಮಾಡದೆ ಹೋದುದು ಇಲ್ಲವೇ? ಎ ಪ್ಲಸ್ ಪಡೆದು ಒಂದು ದಿನ ಆತ್ಮ ಹತ್ಯೆ ಮಾಡಿದ, ಪ್ರೇಮ ಜಾಲದಲ್ಲಿ ಸಿಲುಕಿ ಓಡಿ ಹೋದ ಘಟನೆಗಳೆಷ್ಟು ನಡೆದಿದೆ. ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಮನೋಲ್ಲಾಸವು ಅತಿ ಅಗತ್ಯವಾಗಿದೆ. ಮನೆಯ ಹೊರಗೆ ಹೋಗಿ ಆಟವಾಡಲು, ಮಣ್ಣು, ನೀರು, ಪ್ರಕೃತಿ, ಸಂಬಂಧಿಕರೊಂದಿಗೆ ಆನಂದಿಸಲು ಬಿಡಿರಿ. ನಾಲ್ಕು ಪಠ್ಯ ಪುಸ್ತಕ, ಕಂಪ್ಯೂಟರ್, ಮೊಬೈಲ್ ಗಳಲ್ಲಿ ಅವರನ್ನು ಬಂಧಿಸಿಡಬೇಡಿರಿ. ಅವರ ಕಷ್ಟ ಸುಖ, ನೋವು, ಸಂತೋಷ, ದುಃಖ ಇತ್ಯಾದಿಗಳಲ್ಲಿ ಭಾಗಿಯಾಗಿರಿ.

ನಿಮ್ಮ ಮಕ್ಕಳ ಮಧ್ಯೆ ಪರೀಕ್ಷೆಯ ಅಂಕದ ವಿಷಯದಲ್ಲಿ ಪರಸ್ಪರ ಹೋಲಿಕೆ ಮಾಡುತ್ತಾ ಪೈಪೋಟಿ ಯನ್ನುಂಟು ಮಾಡಬೇಡಿರಿ. ಅವರಲ್ಲಿ ಪೈಪೋಟಿಯ ಮನೋಭಾವವನ್ನುಂಟು ಮಾಡಿದರೆ ಜೀವನ ಪೂರ್ತಿ ಅವರು ಎಲ್ಲಾ ವಿಷಯಗಳಲ್ಲಿ ಪೈಪೋಟಿ ನಡೆಸುವರು. ಅವರು ಪರಸ್ಪರ ಸಹಕಾರ ಮಾಡುತ್ತಾ ಜೀವಿಸಬೇಕಾದವರು ಹೊರತು ಪೈಪೋಟಿ ನಡೆಸಬೇಕಾದವರಲ್ಲ. ಅವರನ್ನು ಗುಂಪು ಆಟೋಟ ಸ್ಪರ್ಧೆ ಹಾಗೂ ಚಟುವಟಿಕೆಗಳನ್ನು ಪ್ರೋತ್ಸಾಹಿಸಿರಿ. ಚಾರಿತ್ರ್ಯ ಮತ್ತು ನಡವಳಿಕೆಯಲ್ಲಿ ಉತ್ತಮರಾಗಲು ಬಯಸಿರಿ. ಕೆಲವೊಮ್ಮೆ ನಾವೇನನ್ನು ಬಯಸುತ್ತೇವೆ ಅದನ್ನು ಅವರು ಬಯಸುವುದಿಲ್ಲ. ಕೆಲವರಿಗೆ ಎಲ್ಲಾ ವಿಷಯಗಳು ಬೇಗ ಅರ್ಥವಾಗುತ್ತದೆ. ಕೆಲವು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೆಲವು ಮಕ್ಕಳಿಗೆ ಎಲ್ಲಾ ವಿಷಯಗಳಲ್ಲಿ ಆಸಕ್ತಿಯಿರುವುದಿಲ್ಲ. ಎಲ್ಲರಿಗೂ ಬೇರೆ ಬೇರೆ ರೀತಿಯ ಪ್ರತಿಭೆ, ಸಾಮರ್ಥ್ಯವಿರುತ್ತದೆ. ಅವರವರ ಸಾಮರ್ಥ್ಯಕ್ಕಿಂತ ಮೀರಿದ ಭಾರವನ್ನು ಹೊರಿಸಬೇಡಿರಿ. ಅವರಿಗಿಲ್ಲದ ಪ್ರತಿಭೆಗಾಗಿ ಖೇದಿಸಬೇಡಿರಿ. ಅವರ ಪ್ರತಿಭೆಗಳನ್ನು ಕಂಡುಹಿಡಿದು ಅದನ್ನು ಪ್ರೊತ್ಸಾಹ ಮಾಡಿರಿ. ಹಾಗೆ ಮಾಡಿದರೆ ಮಾತ್ರ ಅವರು ಜೀವನವನ್ನು ಆನಂದಿಸಿ ಯಶಸ್ವಿ ಜೀವನ ನಡೆಸುವರು.

ಜಗತ್ತಿನಲ್ಲಿರುವ ಹೆಚ್ಚಿನೆಲ್ಲಾ ದೊಡ್ಡ ದೊಡ್ಡ ಶ್ರೀಮಂತರು ಉತ್ತಮ ಅಂಕ ಗಳಿಸಿದವರಲ್ಲ. ಕೆಲವರು ಶಾಲಾ ಮೆಟ್ಟಿಲು ಹತ್ತಿದವರೂ ಅಲ್ಲ. ಯಾವುದೇ ಕಂಪೆನಿಯಲ್ಲಿ ಉದ್ಯೋಗ ಸಂದರ್ಶನಕ್ಕೆ ಹೋದಾಗ ಹೆಚ್ಚಿನೆಲ್ಲಾ ಕಂಪೆನಿಗಳಲ್ಲಿ ಯಾರೂ ನಿಮ್ಮ ಮಾರ್ಕ್ ನ್ನು ನೋಡುವುದಿಲ್ಲ. ನೀನು ಕ್ಲಾಸಿನಲ್ಲಿ ಫಸ್ಟಾ? ನಿನ್ನ ಶಾಲಾ ಕಾಲೇಜಿನ ಮಾರ್ಕ್ ಹೇಗಿತ್ತು? ಎಂದು ಯಾರೂ ನಿಮ್ಮಲ್ಲಿ ಕೇಳುವುದಿಲ್ಲ. ಅವರು ನೋಡುವುದು ನಿಮ್ಮಲ್ಲಿರುವ ತಾಂತ್ರಿಕ ಜ್ಞಾನ, ಕೌಶಲ್ಯ, ಭಾಷಾ ಪಾಂಡಿತ್ಯ, ಚುರುಕುತನ, ಅನುಭವವನ್ನಾಗಿರುತ್ತದೆ. ಆದ್ದರಿಂದ ಜನರೊಂದಿಗೆ ಬೆರೆಯಲು, ಸಂಭಾಷಣೆ, ವ್ಯವಹಾರ ಮಾಡಲು, ಕೆಲಸದ ಯೋಜನೆ ಮತ್ತು ನಾಯಕತ್ವ ನಿರ್ವಹಣೆ ಮಾಡಲು, ಸಾರ್ವಜನಿಕವಾಗಿ ಮಾತನಾಡಲು ಬೆಂಬಲ ನೀಡಿರಿ. ಯಾವುದಾದರೂ ಸಂಘಸಂಸ್ಥೆಗಳಲ್ಲಿ ಸಮಾಜಸೇವೆ ಮಾಡಲು ಬಿಟ್ಟು ಬಿಡಿರಿ. ಅಲ್ಲಿ ಅವರು ಬೇರೆ ಬೇರೆ ಜನರೊಂದಿಗೆ ಬೆರೆತು ಇನ್ಟರ್ ವ್ಯೂ ಎದುರಿಸುವುದು ಕಷ್ಟವಾಗುವುದಿಲ್ಲ. ಕೇವಲ ನಾಲ್ಕು ಗೋಡೆಗಳ ಮಧ್ಯೆ ಪುಸ್ತಕದ ಮುಂದೆ ಬೆಳೆದ ಮಕ್ಕಳು ಇನ್ಟರ್ ವ್ಯೂನಲ್ಲಿ ಕೈಕಾಲು ನಡುಗಿ ವಿಫಲರಾಗುತ್ತಾರೆ.

ಮಕ್ಕಳು ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗಬೇಕೆಂದಿಲ್ಲ. ಅವರ ಜೀವನದಲ್ಲಿ ಕೆಲವೊಮ್ಮೆ ಸೋಲನ್ನು ಅನುಭವಿಸಲಿ. ಸೋಲು ಅವರಿಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಅವರಿಗೆ ಅಗತ್ಯವಿರುವ ವಸ್ತುಗಳನ್ನೆಲ್ಲಾ ಕೇಳಿದಾಗಲೇ ಕೊಡಬೇಡಿರಿ. ಕೆಲವೊಮ್ಮೆ ತಡವಾಗಿ ಕೊಡಿರಿ. ಸೋಲು, ವಿಳಂಭ, ಕಾಯುವಿಕೆ ಅವರ ಜೀವನಲ್ಲಿ ಬಿಕ್ಕಟ್ಟು, ಸಂಕೀರ್ಣತೆ, ಸಂಧಿಗ್ದತೆಯನ್ನು ಎದುರಿಸಲು ಪ್ರೇರೇಪಿಸುತ್ತದೆ. ಇಂದು ಡಾಕ್ಟರ್, ಇಂಜಿನೀರ್,ಮಾಸ್ಟರ್ ಡಿಗ್ರಿ, ಪಿ ಹೆಚ್ ಡಿ ಮಾಡಿದವರು ಉದ್ಯೋಗವಿಲ್ಲದೆ ಕಷ್ಟ ಪಡುತ್ತಿದ್ದಾರೆ. ಅವರ ಪಾಲಿನ ಉದ್ಯೋಗ ಸಿಗುವವರೆಗೆ ಮಕ್ಕಳಿಗೂ, ಹೆತ್ತವರಿಗೂ ಸಹನೆಯಿರಬೇಕು. ಕಷ್ಟ, ನಷ್ಟ, ನೋವುಗಳಿಲ್ಲದ ಜೀವನವನ್ನು ನಿರೀಕ್ಷಿಸಬೇಡಿರಿ. ಅವರಿಗೆ ಯಾವುದೇ ಪ್ರೊಫೆಶನ್ ಆಯ್ಕೆ ಮಾಡುವಾಗ ಮಾರುಕಟ್ಟೆಯಲ್ಲಿ ಯಾವುದಕ್ಕೆ ಅತಿ ಹೆಚ್ಚು ಬೇಡಿಕೆ ಇದೆ, ಉತ್ತಮ ಸಂಭಳ ಸಿಗಬಹುದೆಂದು ಆಲೋಚಿಸಬೇಡಿರಿ. ಇಂದು ಮಾರುಕಟ್ಟೆಯಲ್ಲಿರುವ ಬೇಡಿಕೆ ನಾಳೆ ಇರುವುದಿಲ್ಲ. ಅವರಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿಯಿರುತ್ತದೋ, ಯಾವ ವಿಷಯದಲ್ಲಿ ಅವರು ನಿಪುಣರಾಗಿರುತ್ತಾರೋ ಅದನ್ನೇ ಆಯ್ಕೆ ಮಾಡಲಿ. ನಿಮ್ಮ ಗಂಡು ಮಕ್ಕಳಿಗೂ ಮನೆ ಕೆಲಸ, ಅಡುಗೆ ಮಾಡಲು ಪ್ರೋತ್ಸಾಹಿಸಿರಿ. ಗಂಡು ಮಕ್ಕಳನ್ನು ವಿದೇಶಕ್ಕೆ ಕಳುಹಿಸುವಾಗ ಊಟ, ಪದಾರ್ಥ, ಚಹಾ ಮಾಡಲು, ಬಟ್ಟೆಯನ್ನು ಶುಚಿಯಾಗಿ ಇಡಲು ಕಲಿಸಿರಿ.

ಇಂದಿನ ಹೆಚ್ಚಿನ ಹೆತ್ತವರಿಗೆ ತಾವೆಷ್ಟು ಸಮಯಕ್ಕೆ ಸರಿಯಾಗಿ ನಮಾಝ್ ಮಾಡುತ್ತೇವೋ, ಸತ್ಕರ್ಮ ಮಾಡುತ್ತೇವೋ, ಜ್ಞಾನ ಸಂಪಾದಿಸುತ್ತೇವೋ ಎಂಬುದು ಮಹತ್ವವಲ್ಲ. ಆದರೆ ತಮ್ಮ ಮಕ್ಕಳು ಮಾತ್ರ ಅತ್ಯಲ್ಪ ಸಮಯದಲ್ಲಿ ಶೀಘ್ರವಾಗಿ ಕುರ್ ಆನ್ ಕಂಠ ಪಾಠ ಮಾಡಬೇಕೆಂಬ ಆತುರ. ನೀವು ಯಾವ ವಯಸ್ಸಿನಲ್ಲಿ ಅಥವಾ ನೀವು ಎಷ್ಟು ಸಮಯದಲ್ಲಿ ಕುರ್ ಆನ್ ಕಂಠಪಾಠವನ್ನು ಮುಗಿಸಿದಿರಿ ಎಂದು ಯಾರೂ ಕೇಳುವುದಿಲ್ಲ. ಬೆತ್ತವನ್ನು ತೋರಿಸಿ, ಗದರಿಸಿ ಮಕ್ಕಳೊಂದಿಗೆ ಕುರ್ ಆನ್ ಕಂಠಪಾಠ ಮಾಡಲು ಒತ್ತಾಯಪಡಿಸಬೇಡಿರಿ. ಕುರ್ ಆನ್ ಎಂಬುದು ವೇಗದಲ್ಲಿ ಕಲಿತು ಅವಾರ್ಡ್, ಸರ್ಟಿಫಿಕೇಟ್ ಗಳಿಸುವಂತದ್ದಲ್ಲ. ಹೆತ್ತವರ ಒತ್ತಡದಿಂದ ಕುರ್ ಆನ್ ಕಂಠಪಾಠ ಕಲಿತು ಕೆಲವು ವರ್ಷಗಳ ನಂತರ ಮರೆತು ಬಿಡುವವರೂ ಇದ್ದಾರೆ.

ಕುರ್ ಆನ್ ಎಂಬುದು ಸ್ವಇಚ್ಛೆಯಿಂದ ಕಲಿತು, ಜೀವನ ಪೂರ್ತಿ ಅನುಸರಿಸುತ್ತಲೂ, ಪುನರಾವರ್ತನೆ ಮಾಡುತ್ತಲೂ ಇರಬೇಕು. ಕುರ್ ಆನ್ ಕಂಠ ಪಾಠ ಮಾಡುವ ಮಕ್ಕಳಿಗೆ ಅರ್ಥವನ್ನು ಕಲಿಯಲು ಪ್ರೋತ್ಸಾಹಿಸಿರಿ.
ಮಕ್ಕಳ ವಿದ್ಯಾಭ್ಯಾಸದಂತೆಯೇ ಅವರ ಸಾಮಾಜಿಕ, ಮಾನಸಿಕ, ಆರ್ಥಿಕ ವಿಷಯಗಳಲ್ಲಿ ತರಭೇತಿ ನೀಡಿರಿ. ಸ್ವತಂತ್ರವಾಗಿ ಜೀವಿಸಲು ಕಲಿಸಿ. ಅವರ ವ್ಯಕ್ತಿತ್ವವನ್ನು ಅಂಗೀಕರಿಸಿ ಕೊಡಿರಿ. ಆತ್ಮಾವಿಶ್ವಾಸ ಹೆಚ್ಚಿಸಿರಿ. ಮುಂದೆ ಹಾಸ್ಟೆಲ್ ಅಥವಾ ಆಫೀಸಿನಲ್ಲಿ ಬೇರೆ ಬೇರೆ ಅಭಿಪ್ರಾಯ ವ್ಯತ್ಯಾಸ, ಚಿಂತನೆ, ಸ್ವಭಾವದವರೊಂದಿಗೆ, ಇತರ ಜಾತಿಮತದವರೊಂದಿಗೆ, ರಾಜಕೀಯ ಆಶಯವಿರುವವರೊಂದಿಗೆ ಸಹಿಷ್ಣುತೆಯಿಂದ ಜೀವಿಸಲು ಕಲಿಸಿ. ಹೆಣ್ಣು ಮಕ್ಕಳು ವಿವಾಹದ ನಂತರ ಸಂಬಂಧಿಕರೊಂದಿಗೆ ಪರಸ್ಪರ ಹೊಂದಾಣಿಕೆಯಿಂದ ಜೀವಿಸಲು ಕಲಿಸಿರಿ. ಪ್ರಳಯದ ವೀಡಿಯೋ, ರೋಗಿ, ಬಡವರ ಮನೆ ಹಾಗೂ ರಸ್ತೆ ಬದಿಯಲ್ಲಿ ವಾಸಿಸುವವರನ್ನು ತೋರಿಸಿ ಇಹಲೋಕ ಜೀವನದ ವಾಸ್ತವಿಕತೆಯನ್ನು ಅರ್ಥಮಾಡಿಸಲು ಪ್ರಯತ್ನಿಸಿ. ಅವರ ಮನದಲ್ಲಿ ಕರುಣೆ, ಅನುಕಂಪ, ಸಹಾನುಭೂತಿಯನ್ನುಂಟು ಮಾಡಿರಿ.

ಒಬ್ಬ ಕೋಟ್ಯಾಧಿಪತಿಯಾಗಬೇಕು, ಪ್ರಸಿದ್ಧ ವೈದ್ಯರಾಗಬೇಕು, ದೊಡ್ಡ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಬೇಕು ಎಂಬುದಕ್ಕಿಂತಲೂ ಒಬ್ಬ ಉತ್ತಮ ಮನುಷ್ಯನಾಗಬೇಕು ಎಂದು ಬಯಸಿರಿ. ನೀವು ಜೀವಿಸಿರುವಾಗ ಮಕ್ಕಳಿಗೆ ಬೇಕಾದುದೆಲ್ಲವನ್ನೂ ಮಾಡಿಟ್ಟು ಹೋಗಬಹುದೆಂದು ಭಾವಿಸಬೇಡಿರಿ. ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿರಿ, ತೀರ್ಮಾನ ಮಾಡಲು ಕಲಿಸಿ, ನೀರು, ವಿದ್ಯುತ್ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಲು, ಮಿತವಾಗಿ ಹಣ ಖರ್ಚು ಮಾಡಲು, ತಿನ್ನಲು, ದಾನಧರ್ಮ ಮಾಡಲು, ಉಳಿತಾಯ ಮಾಡಲು, ಅಗತ್ಯದಲ್ಲಿರುವವರಿಗೆ ಸಾಲನೀಡಲು ಕಲಿಸಿ, ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಿರಿ. ಧಾರ್ಮಿಕ ಹಾಗೂ ಸಾಮಾಜಿಕ ಬೋಧನೆಯನ್ನು ನೀಡಿ ಶಾಂತಿಯುತ ಸಮಾಜ ನಿರ್ಮಿಸುವ ಸ್ವತಂತ್ರ ವ್ಯಕ್ತಿಯನ್ನು ಜಗತ್ತಿಗೆ ಅರ್ಪಿಸಿರಿ.