ಸನ್ಮಾರ್ಗ ವಾರ್ತೆ
ಶ್ರೀನಗರ,ಸೆ.2: ಸಂವಿಧಾನದ 370 ನೇ ವಿಧಿ ರದ್ದುಪಡಿಸಿ 28 ದಿನಗಳು ಕಳೆದಿದ್ದರೂ ಕಾಶ್ಮೀರದಲ್ಲಿ ಜನಜೀವನ ಸಾಮಾನ್ಯಗೊಂಡಿಲ್ಲ. ರವಿವಾರ ಬೆಳಗ್ಗೆ ಹನ್ನೊಂದು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಯಂತ್ರಣವನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಅಲ್ಲದೇ ಇದುವರೆಗೆ ಕಾಶ್ಮೀರದ 105 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 82ರಷ್ಟರಲ್ಲಿ ನಿಯಂತ್ರಣ ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದೇವೇಳೆ, ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿಕೊಂಡಿವೆ. ಸಾರ್ವಜನಿಕ ವಾಹನಗಳು ಹೊರ ಬರುತ್ತಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿವೆ. ಅಪರೂಪವೆಂಬಂತೆ ಕೆಲವೇ ಕೆಲವು ಕಡೆಗಳಲ್ಲಿ ಅಂಗಡಿಗಳು ತೆರೆದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆಗಸ್ಟ್ ಐದಕ್ಕೆ ತೆಗೆದು ಹಾಕಲಾಗಿದ್ದ ಮೊಬೈಲ್ ಫೋನ್ ಇಂಟರ್ನೆಟ್ ಸಂಪರ್ಕವನ್ನು ಈವರೆಗೆ ಸ್ಥಾಪಿಸಲಾಗಿಲ್ಲ. 29 ಟೆಲಿಫೋನ್ ಎಕ್ಸ್ಚೇಂಜ್ಗಳು ಲ್ಯಾಂಡ್ಲೈನ್ ಸಂಪರ್ಕ ಮರುಸ್ಥಾಪಿಸಿವೆ. ಈ ಹಿಂದೆ 47 ಎಕ್ಸ್ಚೇಂಜ್ಗಳಲ್ಲಿ ಲ್ಯಾಂಡ್ ಲೈನ್ ಸಂಪರ್ಕ ಸ್ಥಾಪಿಸಲಾಗಿತ್ತು. ಆದರೆ ಕಾಶ್ಮೀರದ ವ್ಯಾಪಾರ ಕೇಂದ್ರವಾದ ಲಾಲ್ಚೌಕ್, ಪ್ರೆಸ್ಎನ್ಕ್ಲೇವ್ಗಳಿಗೆ ಈಗಲೂ ಫೋನ್ ಸಂಪರ್ಕ ಸರಿಯಾಗಿಲ್ಲ. ಕಾಶ್ಮೀರ ಶಾಂತವಾಗಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಕಾಶ್ಮೀರದಲ್ಲಿ ಕಠಿಣ ಸಂಚಾರ ನಿಯಂತ್ರಣ ಏರ್ಪಡಿಸಲಾಗಿತ್ತು.
ಕಳೆದ ಶುಕ್ರವಾರದ ಜುಮಾ ನಮಾಝ್ನ ಬಳಿಕ ಪ್ರತಿಭಟನೆ ನಡೆಯಬಹುದು ಎಂದು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಆಂಬುಲೆನ್ಸ್ ಮತ್ತು ತುರ್ತು ಅಗತ್ಯಗಳಿಗೆ ಮಾತ್ರ ಸಂಚಾರದಲ್ಲಿ ಸಡಿಲಿಕೆಗೊಳಿಸಲಾಗಿದೆ. ಶನಿವಾರ ಬೆಳಗ್ಗೆ ಹೆಚ್ಚಿನ ಕಡೆಗಳಲ್ಲಿ ನಿಯಂತ್ರಣ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಹೆಚ್ಚಿನ ಕಡೆ ರಸ್ತೆಯಲ್ಲಿ ಇರಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಲಾಗಿದ್ದರೂ ಭದ್ರತಾ ಪಡೆಯನ್ನು ವಿನ್ಯಾಸಗೊಳಿಸಲಾಗಿದೆ.












