ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯ ಬಿಡುಗಡೆಯ ಒಂದು ದಿನ ಮೊದಲು ಮದನಿ- ಆರೆಸ್ಸೆಸ್ ಭೇಟಿ: ಚರ್ಚೆಯ ಬಗ್ಗೆ ಊಹಾಪೋಹ

0
886

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ; ಸೆ.2- ರಾಷ್ಟ್ರೀಯ ಪೌರತ್ವ ನೋಂದಣಿ (NRC) ಪಟ್ಟಿಯ ಬಿಡುಗಡೆಯ ಒಂದು ದಿನ ಮೊದಲು ಅಂದರೆ ಆಗಸ್ಟ್ 30 ರಂದು ಜಮಿಯತ್ ಉಲೇಮಾ ಇ-ಹಿಂದ್ (ಜೆಯುಎಚ್)ನ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ರನ್ನು ದೆಹಲಿಯ ಆರೆಸ್ಸೆಸ್ ಕಚೇರಿ ಕೇಶವ್ ಕುಂಜ್ ನಲ್ಲಿ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ರಾಜಕೀಯ ಚರ್ಚೆಯಲ್ಲ ಎಂದಿರುವ ಮದನಿಯವರು, ನಾನು ಭಾಗ್ವತ್ ರೊಂದಿಗೆ ಏನನ್ನು ಹೇಳಬೇಕೆಂದು ಬಯಸಿರುವೆನೋ ಅವನ್ನೆಲ್ಲ ಹೇಳಿದೆ ಮತ್ತು ಅವರು ಎಲ್ಲವನ್ನೂ ಒಪ್ಪಿಕೊಂಡರು ಎಂದು ಮದನಿ ಹೇಳಿದ್ದಾರೆ. ಆದರೆ, ಈ ಇಬ್ಬರು ನಾಯಕರ ಮಧ್ಯೆ ಏನೇನು ಚರ್ಚೆ ನಡೆದುವು ಎಂಬ ಬಗ್ಗೆ ಸಂಪೂರ್ಣ ವಿವರಣೆ ಇನ್ನೂ ಲಭ್ಯವಾಗಿಲ್ಲದೆ ಇರುವುದರಿಂದ ವಿವಿಧ ರೀತಿಯಲ್ಲಿ ಅಭಿಪ್ರಾಯಗಳು ಕೇಳಿಬರುತ್ತಿವೆ.

ದೇಶದ ಸದ್ಯದ ಸಾಮರಸ್ಯದ ಬದುಕಿಗೆ ಭಾರೀ ಗಂಡಾಂತರ ತಟ್ಟಿರುವುದರಿಂದ ಅದನ್ನು ಸರಿಪಡಿಸುವ ಮತ್ತು ಹಿಂದೂ ಮುಸ್ಲಿಮರೊಳಗೆ ಭ್ರಾತೃತ್ವದ ಸಂದೇಶ ಸಾರುವುದಕ್ಕಾಗಿ ಆರೆಸ್ಸೆಸ್ ಮತ್ತು ಜಮಿಯತುಲ್ ಉಲೇಮಾ ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂಥದ್ದೊಂದು ಸುಳಿವನ್ನು ಸ್ವತಃ ಮದನಿಯವರೇ ನೀಡಿದ್ದಾರೆ.

ಇದೇವೇಳೆ, ಸಾವರ್ಕರ್ ಮತ್ತು ಗೋಲ್ವಾಳ್ಕರ್ ಅವರ ಸಿದ್ಧಾಂತವನ್ನು ಅಡಿಪಾಯವಾಗಿಸಿಕೊಂಡಿರುವ ಆರೆಸ್ಸೆಸ್‌ನ ಸಿದ್ಧಾಂತವನ್ನು ಜಮೀಯ್ಯತುಲ್ ಉಲೇಮಾ ವಿರೋಧಿಸುತ್ತದೆ ಎಂದು ಮದನಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಾಗ್ವತ್ ಅವರು, ಹಿಂದುತ್ವವು ಭ್ರಾತೃತ್ವದ ಸಂಕೇತ. ಹಿಂದೂ ಮುಸ್ಲಿಮರು ಜೊತೆಯಾಗಿ ಬಾಳುವುದರಲ್ಲಿ ಸಾಮರಸ್ಯ ಅಡಗಿದೆ ಎಂದರು. ಎರಡೂ ಸಮುದಾಯದವರು ಜತೆಗೂಡಿ ಬಾಳಬೇಕಾದುದು ಈಗಿನ ಅಗತ್ಯ ಎಂದು ಎಂದು ಮದನಿ ಹೇಳಿದ್ದಾಗಿ ವರದಿಗಳು ತಿಳಿಸಿವೆ.

ಅಂದಹಾಗೆ, ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯ ಬಗ್ಗೆ ಮಾತಾಡಿದ ಅವರು, ಇದರಿಂದ ಹಿಂದೂ ಮುಸ್ಲಿಂ ಎರಡೂ ಸಮುದಾಯಗಳೂ ಸಮಸ್ಯೆಗೆ ಗುರಿಯಾಗಿವೆ. ಒಂದುವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದೆ ಇರುತ್ತಿದ್ದರೆ, ಈಗಿನ 20 ಲಕ್ಷವು 80 ಲಕ್ಷವಾಗುತ್ತಿತ್ತು ಎಂದಿದ್ದಾರೆ.