ಸೂಪರ್ ಮಾರ್ಕೆಟ್ ತೆರೆದು, ಮನೆಸ್ವಚ್ಛ ಮತ್ತು ದುರಸ್ತಿಗೊಳಿಸಿ ಕೊಡಗಿನ ಸಂತ್ರಸ್ತರಿಗೆ ಹೆಗಲಾದ HRS: ಪ್ರವಾಹ ಇಳಿದು ಹೋದ ಮೇಲೆ ಹೀಗಾಯಿತು…

0
1224

ವರದಿ: ಸಲೀಮ್ ಬೋಳಂಗಡಿ

ಕೊಡಗಿನ ಸಿದ್ದಾಪುರದ ಕಾವೇರಿ ನದಿ ತಟದ ಸುಮಾರು 800 ಮನೆಗಳು ಈ ಬಾರಿಯ ಪ್ರವಾಹಕ್ಕೆ ತುತ್ತಾಗಿ ಸಂಪೂರ್ಣ ಜಲಾವೃತವಾಗಿತ್ತು. ಅದರಲ್ಲಿ 200 ಮನೆ ಕುಸಿದಿದ್ದು 300 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಎಂಟುನೂರು ಮನೆಯ ಸಾಮಾನು ಸರಂಜಾಮುಗಳು ನೀರು ಪಾಲಾಗಿವೆ. ಈ ಪ್ರದೇಶವು ಅತೀ ಕಡು ಬಡವರಿಂದ ಕೂಡಿದ ಪ್ರದೇಶವಾಗಿದ್ದು ಈ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಅಗತ್ಯವಿದೆ. ಜಮಾಅತೆ ಇಸ್ಲಾಮೀ ಹಿಂದ್ ನ ರಾಜ್ಯ ಘಟಕದ ಸ್ವಯಂ ಸೇವಾ ವಿಭಾಗವಾದ ಹೆಚ್.ಆರ್.ಎಸ್. (ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ) ಸಕ್ರಿಯವಾಗಿ ತೊಡಗಿಸಿಕೊಂಡು ರಿಲೀಫ್ ಸೆಲ್ ಒಂದನ್ನು ಸ್ಥಾಪಿಸುವ ಮೂಲಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅಶ್ರಪ್ ಕೆ.ಎಮ್. ಇದರ ಸಂಚಾಲಕರಾಗಿ ಮತ್ತು ಕಾರ್ಯದರ್ಶಿಯಾಗಿ ಬಶೀರ್ ಅವರ ಮೇಲ್ನೋಟದಲ್ಲಿ ಈ ಪರಿಹಾರ ಕಾರ್ಯ ನಡೆಯುತ್ತಿದೆ. ಅಲ್ಲದೆ ಸಿದ್ದಾಪುರದ ನಾಲ್ಕು ತಂಡಗಳು ಸುಮಾರು ಏಳುನೂರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸರ್ವೆ ನಡೆಸಿದರು. ಸಂತ್ರಸ್ತರು ತಮ್ಮ ಜೀವನ ಸಾಗಿಸಲು ಅಗತ್ಯ ಸಾಮಗ್ರಿ ಪಡೆಯಲು ಸೂಪರ್ ಮಾರ್ಕೆಟ್ ಒಂದನ್ನು ತೆರೆಯಲಾಯಿತು.

ಹೆಚ್.ಆರ್.ಎಸ್. ಇದರ ಮಂಗಳೂರಿನ ಹದಿನೇಳು ಮಂದಿಯ ತಂಡವೊಂದು ಕಾವೇರಿ ನದಿ ತಟದಲ್ಲಿರುವ ಗರಡಿಗೋಡು ಪರಿಸರದ ನಿರಾಶ್ರಿತರಿಗೆ ವಾಸ ಮಾಡಲು ಅನುವಾಗುವಂತೆ ಐದಾರು ತಾತ್ಕಾಲಿಕ ಶೆಡ್ ನಿರ್ಮಿಸಿತು. ಮರುದಿನ ಸ್ಥಳೀಯರ ಸಹಕಾರದೊಂದಿಗೆ ಸಿದ್ದಾಪುರದ ಹೆಚ್.ಆರ್.ಎಸ್. ಕಾರ್ಯಕರ್ತರು ಐದು ಮನೆಗಳನ್ನು ನಿರ್ಮಿಸಿದರು. ಪ್ರೇಮಾ ಎಂಬ ಬಡ ಕೂಲಿ ಕಾರ್ಮಿಕೆ, ಪ್ಲಾಸ್ಟಿಕ್‍ನಿಂದ ಕಟ್ಟಿದ ಸಣ್ಣ ಗುಡಿಸಲೊಂದರಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪತಿ ಕಳೆದ ಏಳು ವರ್ಷದ ಹಿಂದೆಯೇ ತೊರೆದು ಹೋಗಿದ್ದಾರೆ. ಕೂಲಿನಾಲಿ ಮಾಡಿ ಬದುಕುವ ಸ್ಥಿತಿ. ಆಶ್ರಯವಾಗಿದ್ದ ಒಂದು ಸಣ್ಣ ಗುಡಿಸಲು ಕೂಡಾ ಪ್ರವಾಹಕ್ಕೆ ಸಿಲುಕಿ ಕಂಗಾಲಾಗಿದ್ದರು. ಹೆಚ್.ಆರ್.ಎಸ್. ರಿಲೀಫ್ ಕೇಂದ್ರದ ಸಹಕಾರದಲ್ಲಿ ಮನೆಯನ್ನು ದುರಸ್ತಿ ಮಾಡಿಕೊಟ್ಟಾಗ ಹೆಚ್.ಆರ್.ಎಸ್. ಕಾರ್ಯಕರ್ತರ ಮುಂದೆ ಕೃತಜ್ಞತೆ ಸಲ್ಲಿಸಲು ಬಂದ ಅವರಿಗೆ ಮಾತೇ ಹೊರಡಲಿಲ್ಲ. ಕಣ್ಣೀರ ಹನಿಯೇ ಅವರ ಉತ್ತರವಾಗಿತ್ತು, ಮಕ್ಕಳ ಕಣ್ಣುಗಳು ತುಂಬಿದ್ದವು.

ಹೋಟೇಲು ಕಾರ್ಮಿಕ ಅಬ್ದುಲ್ ಅಝೀಝ್‍ರವರ ಸಣ್ಣ ಕುಟುಂಬವು ವಾಸವಾಗಿದ್ದ ಮನೆಯು ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಇದು ಅತ್ಯಂತ ಕಡು ಬಡತನದ ಕುಟುಂಬವಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಹೆಚ್.ಆರ್.ಎಸ್. ಸಿದ್ದಾಪುರದ ಕಾರ್ಯಕರ್ತರು ಸೇರಿ ತಾತ್ಕಾಲಿಕ ಶೆಡ್ ನಿರ್ಮಿಸಿದರು. ಹೆಚ್.ಆರ್.ಎಸ್.ನಿಂದ ರಾಜ್ಯದ ವಿವಿಧ ಜೆಲ್ಲೆಯ ತಂಡಗಳು ಮುಂದಿನ ದಿನಗಳಲ್ಲಿ ಕ್ರಮವಾಗಿ ಬಂದು ಸೇವಾ ಕಾರ್ಯದಲ್ಲಿ ಸಕ್ರಿಯವಾಗಲಿದೆ. ಮುಂದಿನ ವಾರ ಉಡುಪಿಯ ತಂಡವೊಂದು ಆಗಮಿಸಲಿದೆಯೆಂದು ಹೆಚ್.ಆರ್.ಎಸ್. ಇದರ ಕರ್ನಾಟಕ ರಾಜ್ಯ ಕ್ಯಾಪ್ಟನ್ ಅಮೀರ್ ಸಿದ್ದೀಕ್ ವಿವರಿಸಿದರು.

ಇಂದಿರಾ ಎಂಬ ಮೂರು ಮಕ್ಕಳ ಕುಟುಂಬದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಪತಿಯಿದ್ದರೂ ದುಡಿಯುವಷ್ಟು ಶಕ್ತರಲ್ಲ. ಇನ್ನು ರಾಜ್ ಕುಮಾರ್ ಎಂಬವರ ಕುಟುಂಬದ ಸ್ಥಿತಿಯೂ ಚಿಂತಾಜನಕವಾಗಿದೆ. ಎರಡು ಮಕ್ಕಳಿದ್ದು ಜೊತೆಗೆ ತಂದೆ ತಾಯಿ ತಂಗಿಯ ಜೊತೆಗೆ ವಾಸಿಸುತ್ತಿದ್ದಾರೆ. ಇವರ ಮನೆ ಕೂಡಾ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಕೊಚ್ಚಿ ಹೋಗಿತ್ತು.

ಹೆಚ್ಚಿನ ಎಲ್ಲಾ ಮನೆಯ ಪರಿಸ್ಥಿತಿ ಇದೇ ರೀತಿಯಾಗಿದೆ. ಸರಕಾರದಿಂದ ಸರಿಯಾದ ಸ್ಪಂದನೆ ಸಿಗದೆ ಜನರು ಕಂಗಾಲಾಗಿದ್ದಾರೆ.

ಪ್ರಸಕ್ತ ಕೊಡಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ವೇ ನಡೆಸಿದ ಹೆಚ್.ಆರ್.ಎಸ್. ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. 50 ತಾತ್ಕಾಲಿಕ ಶೆಡ್ ನಿರ್ಮಾಣ, ಇತರ ಸಂಘ ಸಂಸ್ಥೆಗಳ ಸಹಕಾರದಿಂದ 25 ಮನೆಗಳ ನಿರ್ಮಾಣ, ಸಾರ್ವಜನಿಕರಿಗಾಗಿ ಮತ್ತು ಸಂತ್ರಸ್ತರಿಗಾಗಿ ಬ್ರಹತ್ ಮೆಡಿಕಲ್ ಕ್ಯಾಂಪ್ ಆಯೋಜನೆ, ಸಂತ್ರಸ್ತ ನೂರು ಮನೆಗಳಿಗೆ ಗ್ರಹ ಬಳಕೆಯ ಸಾಮಗ್ರಿಗಳ ಪೂರೈಕೆ ಮತ್ತು ಹಲವೆಡೆ ಸಂತ್ರಸ್ತರಿಗಾಗಿ ಸಾಂತ್ವನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.