ಮಂಗಳೂರು; ಸೆ.3- ಮಾನವ ಹಕ್ಕು ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಝಾಕಿರ್ ಉಳ್ಳಾಲ್ ಬಂಧನದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಗೆ ಗಣೇಶ ಚತುರ್ಥಿ ಪ್ರಯುಕ್ತ ಅವಕಾಶ ನಿರಾಕರಿಸಲಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಡೆಸಿ ಪ್ರತಿಭಟನೆ ನಡೆಸದಂತೆ ತಡೆಯಲಾಯಿತು. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಈ ನಡುವೆ ಎಸ್ ಡಿಪಿಐ ದ ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದು, ಅದು ಹೀಗಿದೆ:
ದ.ಕ ಜಿಲ್ಲೆಯ ಉಳ್ಳಾಲ ಪ್ರದೇಶದ ಸಮಾಜ ಸೇವಕ ಹಾಗೂ ಪ್ರಗತಿಪರ ಹೋರಾಟಗಾರ, ಉಳ್ಳಾಲ ನಗರಸಭಾ ಮಾಜಿ ಸದಸ್ಯ ಝಾಕಿರ್ ಉಳ್ಳಾಲ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದವನ್ನು ಹಬ್ಬುತ್ತಿದ್ದಾರೆ ಎಂಬ ನೆಪವೊಡ್ಡಿ ಅವರ ಮೇಲೆ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಮತ್ತು ಓರ್ವ ಕ್ರಿಮಿನಲ್ ಆರೋಪಿ ಯಂತೆ ಕೈಗೆ ಬೇಡಿಯನ್ನು ತೊಡಿಸಿ ಕೊಂಡು ಪೊಲೀಸ್ ಠಾಣೆಯಿಂದ ಜಡ್ಜಿ ರವರ ಮನೆ ಮತ್ತು ಜೈಲಿನವರೆಗೆ ಪೋಲೀಸರು ಕರೆದುಕೊಂಡು ಹೋಗಿರುವ ಕ್ರಮವು ಖಂಡನೀಯ ಮತ್ತು ಇದೊಂದು ರಾಜಕೀಯ ಪ್ರೇರಿತವಾಗಿದೆ.
ನಿರಂತರವಾಗಿ ಕೋಮುವಾದ ಮತ್ತು ಭಯೋತ್ಪಾದನೆಯನ್ನು ಹಬ್ಬುತ್ತಿರುವ ಮಾಧ್ಯಮ ಭಯೋತ್ಪಾದನೆಯ ಬಗ್ಗೆ ಒಂದು ಸಣ್ಣ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸದ ಮಂಗಳೂರು ಪೋಲೀಸರಿಗೆ ಝಾಕಿರ್ ರವರು ಸಾಮಾಜಿಕ ಕಳಕಳಿಯೊಂದಿಗೆ ಆಡಳಿತ ವರ್ಗ, ವಿರೋಧ ಪಕ್ಷ ಮತ್ತು ಸಂಘಪರಿವಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಸಮರ ನಡೆಸಿರುವುದು ಕೋಮುವಾದದ ಹರಡುವಿಕೆಯಾಗಿ ಕಂಡಿರುವುದು ಪೋಲೀಸ್ ಇಲಾಖೆಯ ಕುರುಡುತನವನ್ನು ಪ್ರದರ್ಶಿಸುತ್ತದೆ.
ದಿಟ್ಟತನದಿಂದ ತನ್ನ ಸ್ವಂತ ಖಾತೆಯ ಮೂಲಕವೇ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೇಲೆ ಈ ರೀತಿ ಕ್ರಮ ಜರಗಿಸಿರುವುದು ಖಂಡನೀಯವಾಗಿರುತ್ತದೆ. ಇದೇ ಉಳ್ಳಾಲ ಪರಿಸರದಲ್ಲಿ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಬಾಬರಿ ಎಕ್ಸ್-ಪ್ರೊ ಕಾರ್ಯಕ್ರಮದ ಸಂದರ್ಭದಲ್ಲೂ ರಾಜಕೀಯ ಪ್ರೇರಿತ ಕೇಸನ್ನು ಉಳ್ಳಾಲ ಪೊಲೀಸರು ಅಂದು ದಾಖಲಿಸಿದ್ದರು.
ರಾಜಕೀಯ ಹಿತಾಶಕ್ತಿಗಳು ಮತ್ತು ರಾಜಕೀಯವೇ ತನ್ನ ಬದುಕೆಂದು ಪರಿಗಣಿಸಿ ಕೊಂಡಿರುವ ಕೆಲವು ರಾಜಕೀಯ ನಾಯಕರುಗಳಿಗೆ ತನ್ನ ಭ್ರಷ್ಟಾಚಾರ ಬಯಲು ಗೊಲ್ಲಬಹುದು ಎಂಬ ಹೆದರಿಕೆಯಿಂದ ಹೋರಾಟಗಾರರನ್ನು ಹದ್ದುಬಸ್ತಿನಲ್ಲಿಡುವ ಒಂದು ಪ್ರಯತ್ನ ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಹೋರಾಟಗಾರರಿಗೆ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿದ್ದು ಇದರಿಂದಾಗಿ ನಾವು ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಇದರ ವಿರುದ್ಧ ಕಾನೂನು ಹೋರಾಟವನ್ನು ಮಾಡಿ ಇಂತಹ ರಾಜಕೀಯ ಷಡ್ಯಂತ್ರಗಳನ್ನು ಅತಿಜಯಿಸಬೇಕಾಗಿದೆ. ಆದ್ದರಿಂದ ಝಾಕಿರ್ ರವರ ಪರವಾಗಿರುವ ಎಲ್ಲಾ ಹೋರಾಟಗಳಿಗೆ ಎಸ್ಡಿಪಿಐ ಪಕ್ಷವು ಸದಾ ಬೆಂಬಲವನ್ನು ನೀಡುತ್ತದೆ.












