ಕ್ಯಾನ್ಸಲ್ ಆದ ಚಿಕನ್ ಬಿರಿಯಾನಿ ಆರ್ಡರ್: ಮಂಗಳೂರಿನ ಝೊಮ್ಯಾಟೋ ಡೆಲಿವರಿ ಬಾಯ್ ಮಾಡಿದ್ದನ್ನು ತಿಳಿದರೆ ನೀವೂ ಮೆಚ್ಚಿಕೊಳ್ಳುವಿರಿ..

0
8738

ಸನ್ಮಾರ್ಗ ವಾರ್ತೆ-

ಮಂಗಳೂರು: ಸೆ. 3- ಈಗ ಎಲ್ಲವೂ ಆನ್ ಲೈನ್ ಯುಗ.‌ ನಾವಿದ್ದಲ್ಲಿಯೇ ಕುಳಿತು ನಮಗೆ ಬೇಕಾದುದನ್ನು ನಾವಿದ್ದಲ್ಲಿಗೇ ತರಿಸಿಕೊಳ್ಳುವ ಕಾಲ. ಹೀಗೆ ಬೇಕಾದುದನ್ನು ಒದಗಿಸಿಕೊಡುವ ಕಂಪನಿಗಳು ಹಲವಾರು ಇವೆ. ಆನ್ ಲೈನ್ ನಲ್ಲಿ ಆರ್ಡರ್ ಪಡೆದು ಜನರಿಗೆ ಆಹಾರ ಪೂರೈಸುತ್ತಿರುವ ಕಂಪೆನಿಗಳ ಪೈಕಿ ಝೊಮ್ಯಾಟೋ ಕೂಡಾ ಒಂದು. ದೇಶಾದ್ಯಂತ ವಿಸ್ತರಿಸುತ್ತಿರುವ ಝೊಮ್ಯಾಟೋ‌ ಕಳೆದೊಂದು ವರ್ಷದಿಂದ ಮಂಗಳೂರು ನಗರದಲ್ಲಿಯೂ ಕಾರ್ಯಾಚರಿಸುತ್ತಿದೆ. ಝೊಮ್ಯಾಟೋದಲ್ಲಿ ಡೆಲಿವರಿ ಪಾರ್ಟ್ನರ್ (ಡೆಲಿವರಿ ಬಾಯ್ಸ್) ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಉತ್ತಮ ಸಾಮಾಜಿಕ ಕಳಕಳಿಯುಳ್ಳವರೂ ಇದ್ದಾರೆ ಎಂಬುದಕ್ಕೆ ಘಟನೆಯೊಂದು ಸಾಕ್ಷಿಯಾಗಿದೆ.

ಮಂಗಳೂರಿನ ಝೊಮ್ಯಾಟೋದಲ್ಲಿ ಡೆಲಿವರಿ ಕೆಲಸ ಮಾಡುತ್ತಿರುವ ಬಂಟ್ವಾಳದ ನಿವಾಸಿ ಸತ್ತಾರ್ ಎಂಬವರು ನಗರದ ಹೊಟೇಲೊಂದರಿಂದ 350 ರೂಪಾಯಿ ಬೆಲೆಯ ಚಿಕನ್ ಬಿರಿಯಾನಿ ಮತ್ತು ಚಿಕನ್ ಕಬಾಬ್ ನ ಕ್ಯಾಶ್ ಆನ್ ಡೆಲಿವರಿ ಆರ್ಡರ್ ಪಡೆದಿದ್ದರು.

ಆರ್ಡರ್ ಡೆಲಿವರಿಗೆಂದು ಗ್ರಾಹಕ ತಿಳಿಸಿದ್ದ ಸ್ಥಳಕ್ಕೆ ಹೋಗಿ ಕರೆ ಮಾಡಿದಾಗ, ಗ್ರಾಹಕನು ತಾನು ಡೆಲಿವರಿ ಬಯಸಿ ಹಾಕಿದ್ದ ವಿಳಾಸದಲ್ಲಿರಲಿಲ್ಲ. ಗ್ರಾಹಕನಿದ್ದ ಪ್ರದೇಶದ ವಿಳಾಸಕ್ಕೂ, ಡೆಲಿವರಿ ಬಯಸಿದ್ದ ವಿಳಾಸಕ್ಕೂ ನಡುವೆ ಸುಮಾರು 13 ಕಿ.ಮೀ. ದೂರ ಇರುವುದನ್ನು ಮನಗಂಡು ಸತ್ತಾರ್ ರವರು ಝೊಮ್ಯಾಟೋ ಕೇರ್ ಗೆ ಮಾಹಿತಿ ನೀಡಿದಾಗ, ಝೊಮ್ಯಾಟೋ ಆಹಾರ ಆರ್ಡರನ್ನು ರದ್ದು ಮಾಡಿತು. ಬಳಿಕ ತನ್ನಲ್ಲಿಯೇ ಉಳಿದ ಆ ಆಹಾರವನ್ನು ಏನು ಮಾಡಬೇಕೆಂದು ತೋಚದಾದಾಗ ತಾನು ಹೋಗಿದ್ದ ಪ್ರದೇಶದ ಬಳಿ ರಸ್ತೆಯ ಬದಿಯಲ್ಲಿ ಆಹಾರಕ್ಕಾಗಿ ಕೈಚಾಚುತ್ತಿದ್ದ ವ್ಯಕ್ತಿಯೋರ್ವರರನ್ನು ಕಂಡು, ರದ್ದಾದ ಚಿಕನ್ ಬಿರಿಯಾನಿ ಮತ್ತು ಕಬಾಬನ್ನು ಆ ವ್ಯಕ್ತಿಗೆ ನೀಡಿದರು. ಅಲ್ಲದೇ, ಆ ಫೋಟೋವನ್ನು ಝೊಮ್ಯಾಟೋನ ಸ್ಥಳೀಯ ಕಚೇರಿಗೂ ಕಳಿಸಿದರು. ತನ್ನ ಉದ್ಯೋಗಿಯ ಈ ಮಾನವೀಯ ಸ್ಪಂದನೆಯನ್ನು ಝೊಮ್ಯಾಟೋ ಮೆಚ್ಚುಗೆ ವ್ಯಕ್ತಪಡಿಸಿತು.

ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ ಎಂಬುದು ನನ್ನ ನಂಬಿಕೆ. ನಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಆಹಾರಕ್ಕಾಗಿ ಬೇಡುತ್ತಿದ್ದ ಆ ವ್ಯಕ್ತಿಯನ್ನು ಕಂಡೆ. ಒಂದು ಒಳ್ಳೆಯ ಕೆಲಸ ಮಾಡಿದ ತೃಪ್ತಿ ಸಿಕ್ಕಿತು. ಅವರೂ ಸಂತಸದಿಂದ ನಕ್ಕರು. ಅವರ ನಿರ್ಮಲ ನಗುವನ್ನು ಕಂಡು ಫೋಟೋ ತೆಗೆದುಕೊಂಡೆ ಎಂದವರು ಹೇಳಿದ್ದಾರೆ.