ಡಿಕೆಶಿ ಬಂಧನ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನೆ; ಬಸ್ಸಿಗೆ ಬೆಂಕಿ

0
645

ಸನ್ಮಾರ್ಗ‌ ವಾರ್ತೆ

ಬೆಂಗಳೂರು,ಸೆ.4: ಕಾಂಗ್ರೆಸ್ ಹಿರಿಯ ನಾಯಕ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕೆಎಸ್ಸಾರ್ಟಿಸಿ ಬಸ್‍ಗಳಿಗೆ ವ್ಯಾಪಕ ಕಲ್ಲೆಸೆತ ನಡೆದಿದೆ. ಪ್ರತಿಭಟನಾಕಾರರು ರಸ್ತೆಯಲ್ಲಿ ಟಯರ್ ಉರಿಸಿ ವಾಹನ ಸಂಚಾರ ತಡೆದಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಹಲವು ಕಡೆ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರು.

ಬೆಂಗಳೂರು, ಮಂಗಳೂರು, ರಾಮನಗರ, ಹಾಸನಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಡಿಕೆ ಶಿವಕುಮಾರ್‌ರ ಸ್ವಕ್ಷೇತ್ರ ಕನಕಪುರವಿರುವ ರಾಮನಗರ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ಕಂಡು ಬಂದಿದೆ. ಇಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ಇದೆ. ನಾಳೆ ಬಂದ್ ಘೋಷಿಸಲಾಗಿದೆ. ಕನಕಪುರ ಡಿಪೊದ ಬಸ್ಸಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಮನಗರದ ಬಸ್ ಓಡಾಟ ಸ್ಥಗಿತಗೊಳಿಸಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳು ಬಂದ್ ಆಗಿವೆ.

ಇಡಿ ಕಚೇರಿಯ ಭದ್ರತೆ ಹೆಚ್ಚಿಸಲಾಗಿದೆ. ಸರಕಾರಿ ಆಸ್ತಿ ನಾಶಪಡಿಸಬೇಡಿ. ಶಾಂತಿಯುತ ಪ್ರತಿಭಟನೆ ನಡೆಸಿ ಎಂದು ಕಾಂಗ್ರೆಸ್ ನಾಯಕರು ಕರೆ ನೀಡಿದರೂ ಪ್ರಯೋಜನವಾಗಿಲ್ಲ. ಡಿಕೆಶಿ ಬಂಧನ ವಿರುದ್ಧ ಕಾಂಗ್ರೆಸ್ ನಾಯಕ ಮಾಜಿ ಸಂಸದ ವಿಎಸ್ ಉಗ್ರಪ್ಪ ರಂಗ ಪ್ರವೇಶಿಸಿದ್ದು ರಾಜ್ಯದಲ್ಲಿ ತುರ್ತುಪರಿಸ್ಥಿತಿಗೆ ಸಮಾನ ಅವಸ್ಥೆಯಿದೆ ಎಂದು ಹೇಳಿದರು. ಇದೇ ವೇಳೇ ನಿನ್ನೆ ರಾತ್ರೆ ಬಂಧಿಸಲಾದ ಡಿಕೆ ಶಿವಕುಮಾರ್ ಹೊಸದಿಲ್ಲಿ ರಾಮಮನೋಹರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಿಗೆ ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇಂದು ದಿಲ್ಲಿಯ ವಿಶೇಷ ಕೋರ್ಟಿಗೆ ಹಾಜರುಪಡಿಸಲಾಗುವುದು.