ಸನ್ಮಾರ್ಗ ವಾರ್ತೆ
ಶಾಜಹಾನ್ಪುರ,ಸೆ.4: ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಕೇಂದ್ರ ಸರಕಾರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ್ ತಮ್ಮ ಹರಿದ್ವಾರದ ಆಶ್ರಮದಿಂದ ತಪ್ಪಿಸಿಕೊಂಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಅವರ ವಿಚಾರಣೆಗೆ ಹೋಗಿದ್ದ ಪೊಲೀಸರು ಬರಿಗೈಯಲ್ಲಿ ಮರಳಿದ್ದಾರೆ. ಇದೇ ವೇಳೆ ಅತ್ಯಾಚಾರ ಪ್ರಕರಣ ತನಿಖೆಗೆ ಉತ್ತರಪ್ರದೇಶ ಸರಕಾರ ಪೊಲೀಸರ ವಿಶೇಷ ತಂಡವನ್ನು ರಚಿಸಿದೆ. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಐಜಿಯ ನೇತೃತ್ವದ ವಿಶೇಷ ತಂಡ ರಚನೆಯಾಗಿದೆ.
ಅಲಹಾಬಾದ್ ಹೈಕೋರ್ಟಿನ ಮೇಲ್ನೋಟದಲ್ಲಿ ತನಿಖೆ ನಡೆಯಬೇಕು ಎಂದು ಕೋರ್ಟು ಸೂಚಿಸಿದೆ. ವಿದ್ಯಾರ್ಥಿನಿಯ ಕುಟುಂಬ ಈಗ ದಿಲ್ಲಿಯಲ್ಲಿದೆ. ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಸುಪರಿಡೆಂಟ್ ದಿನೇಶ್ ತ್ರಿಪಾಠಿ ತಿಳಿಸಿದರು. ತನ್ನ ಮಗಳು ಹೆದರಿಕೆಯಲ್ಲಿ ದಿನ ದೂಡುತ್ತಿದ್ದಾಳೆ ಎಂದು ವಿದ್ಯಾರ್ಥಿನಿಯ ಅಮ್ಮ ಹೇಳಿದ್ದಾರೆ. ಓರ್ವ ಹಿರಿಯ ಸನ್ಯಾಸಿ ತನ್ನ ಅತ್ಯಾಚಾರ ಮಾಡಲು, ಕೊಲೆ ಎಸಗಲು ಯತ್ನಿಸುತ್ತಿದ್ದಾನೆ ಎಂದು ಕಳೆದ ತಿಂಗಳು 24ರಂದು ಸಮಾಜಿಕ ಮಾಧ್ಯಮದಲ್ಲಿ ವಿದ್ಯಾರ್ಥಿನಿ ಪೋಸ್ಟ್ ಮಾಡಿದ್ದಳು. ಮರುದಿವಸವೇ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ಆದರೆ, ಚಿನ್ಮಯಾನಂದ್ ತನ್ನ ಪುತ್ರಿಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದರು. ನಂತರ ಪೊಲೀಸರು ಅಪಹರಣ, ಕೊಲೆ ಯತ್ನ, ಅತ್ಯಾಚಾರ ಆರೋಪದಲ್ಲಿ ಚಿನ್ಮಾಯನಂದ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.












