ಅಲ್ಮೈಡಾ ಗ್ಲಾಡ್ಸನ್
ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಲೇ ಬೇಕೆಂದಿದ್ದರೆ ಅದನ್ನು ನಾಲ್ಕು ದಿನಗಳ ಮೊದಲೇ ಮಾಡಬಹುದಿತ್ತಲ್ಲಾ? ನಾಲ್ಕು ದಿನ ಹತ್ತಾರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಆನಂತರ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲವೆಂದರೆ ಏನರ್ಥ? ಅವರು ವಿಚಾರಣೆಗೆ ಸಹಕರಿಸುತ್ತಿದ್ದಿಲ್ಲವಾದರೆ ನಾಲ್ಕು ದಿನಗಳ ಕಾಲ ಹತ್ತಾರು ಗಂಟೆಗಳ ಕಾಲ ಅವರೊಡನೆ ಇಡಿ ಅಧಿಕಾರಿಗಳು ಕುಳಿತು ಲೂಡೋ, ಹಾವು-ಏಣಿ ಆಟವಾಡುತ್ತಿದ್ದರೆ ಇಲ್ಲ ಎಲ್ಲರೂ ಒಟ್ಟಿಗೆ ಕುಳಿತು ಉಪ್ಪಿನಕಾಯಿ ಹಾಕುತ್ತಿದ್ದರೆ ಇಲ್ಲ ರಾಜ್ಯದ ಮಳೆ-ಬೆಳೆ ಹಾನಿ ಬಗ್ಗೆ ಮಾತುಕತೆ ನಡೆಸುತ್ತಿದ್ದರೇ? ಬಂಧಿಸುವುದಿದ್ದರೆ ಡಿಕೆಶಿಯ ವಿಚಾರಣೆಯಲ್ಲಿ ಅವರು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಮಾಡಿರುವುದು ಸಾಬೀತಾಗಿದೆ, ಅವರ ಭೃಷ್ಟಾಚಾರ ಸಾಬೀತಾಗಿದೆ ಎಂದು ಕಾರಣ ಕೊಟ್ಟು ಬಂಧಿಸಿ. ಅದನ್ನು ಬಿಟ್ಟು ‘ವಿಚಾರಣೆಗೆ ಸಹಕರಿಸುತ್ತಿಲ್ಲ’ವೆಂಬ ಪಿಳ್ಳೆ ನೆವ ಕೊಟ್ಟು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮರ್ಯಾದೆಯನ್ನು ತೆಗೆಯಬೇಡಿ.
ಡಿಕೆಶಿ ಮೇಲಿರುವುದು ಎಂಟೂವರೆ ಕೋಟಿಯ ಆರ್ಥಿಕ ಅಪರಾಧದ ಆರೋಪ. ಇಂಥ ಆರೋಪಗಳಲ್ಲಿ ಬಂಧಿಸಬೇಕಾದರೆ ಅದಕ್ಕೆ ಸೂಕ್ತ ದಾಖಲೆಗಳಿರಬೇಕು, ಆ ದಾಖಲೆಗಳು ನ್ಯಾಯಾಲಯದಲ್ಲಿ ಕಾನೂನಿನ ಪರೀಕ್ಷೆಯಲ್ಲಿ ರುಜುವಾಗುವಂಥದ್ದು ಆಗಿರಬೇಕೆನ್ನುವುದು ಕನಿಷ್ಠ ಜ್ಞಾನ. ಅಂಥ ದಾಖಲೆಗಳಿದ್ದರೆ, ಡಿಕೆಶಿಯ ವಿರುದ್ದ ಸಾಕಷ್ಟು ಗಟ್ಟಿ ದಾಖಲೆಗಳಿದ್ದಾವೆ. ಅದರ ಆಧಾರದಲ್ಲಿಯೇ ಅವರನ್ನು ಬಂಧಿಸುತ್ತಿದ್ದೇವೆಂದು ಇಡಿಯವರು ಹೇಳಬಹುದಲ್ವೇ? ಅದನ್ನು ಬಿಟ್ಟು ನಾಲ್ಕು ದಿನಗಳ ಸುದೀರ್ಘ ವಿಚಾರಣೆ ನಂತರ ‘ವಿಚಾರಣೆಗೆ ಸಹಕರಿಸುತ್ತಿಲ್ಲ’ವೆನ್ನುವ ಕುಂಟು ನೆಪ ಯಾಕೆ ಸ್ವಾಮಿ? ಇಡಿ ಡಿಕೆಶಿಯವರನ್ನು ವಿಚಾರಣೆಗೆ ಕರೆಯುವಾಗಲೇ ತನ್ನ ಹೋಮ್ವರ್ಕ್ ಸರಿಯಾಗಿ ಮಾಡಿದೆಯೆಂದು ನಾನು ನಂಬುತ್ತೇನೆ. ಅವರ ವಿರುದ್ದ ದಾಖಲೆಗಳನ್ನು ರೆಡಿ ಮಾಡಿಯಿಟ್ಟುಕೊಂಡಿರಬಹುದೆಂದು ನನ್ನ ಭಾವನೆ. ಹಾಗಿದ್ದ ಮೇಲೆ ಅವರು ಹೊರಗಿದ್ದರೆ ಸಾಕ್ಷ್ಯ ನಾಶ ಮಾಡುತ್ತಾರೆನ್ನುವ ಭಯವಿಲ್ಲ, ಸಾಕ್ಷಿಗಳನ್ನು ಬೆದರಿಸುತ್ತಾರೆನ್ನುವ ಭಯವಿಲ್ಲ. ಅವರು ಸದ್ಯಕ್ಕೆ ಆಡಳಿತ ಪಕ್ಷದಲ್ಲೂ ಇಲ್ಲ. ಅದುದರಿಂದ ಅವರನ್ನು ಬಂಧಿಸಿ ಸಾಧಿಸುವುದೇನು? ನಾಲ್ಕು ದಿನಗಳ ವಿಚಾರಣೆಯಲ್ಲಿ ಹೇಳದಿರುವುದನ್ನು ಡಿಕೆಶಿ ಬಂಧಿಸಿದ ಕೂಡಲೇ ಹೇಳುವರೇ?
ಆರ್ಥಿಕ ಅಪರಾಧಗಳಲ್ಲಿ ‘ವಿಚಾರಣೆಗೆ ಸಹಕರಿಸುತ್ತಿಲ್ಲ’ವೆಂದು ಬಂಧಿಸುವುದೇ ಆಗಿದ್ದರೆ ಮಲ್ಯಗಳು, ಚೋಕ್ಸಿಗಳು, ಮೋದಿಗಳು ಇನ್ನೂ ಹತ್ತಾರು ಜನರು ಕೈಯಿಂದ ಬಿಟ್ಟು ಹೋಗುತ್ತಿದ್ದಿಲ್ಲ. ಅದೂ ಅವರ ಮೇಲೆ ಇತರರಿಂದ ದೂರುಗಳು ದಾಖಲಾದ ಮೇಲೂ. ಡಿಕೆಶಿಯ ಮೇಲೆ ಪ್ರಸಕ್ತ ಪ್ರಕರಣದಲ್ಲಿ ಯಾರಾದರೂ ದೂರು ದಾಖಲಿಸಿದ್ದಾರೆಯೇ? ಸಿಕ್ಕಿರುವ ಹಣ ಕಪ್ಪು ಹಣ ಅಥವಾ ಭೃಷ್ಟಾಚಾರದಿಂದ ಗಳಿಸಿದ್ದು ಎಂದು ದಾಖಲೆಗಳಿದ್ದಾವೆಯೇ? ಸಿಕ್ಕಿರುವ ಹಣ ಯಾವ ಮೂಲದ್ದು, ಎಲ್ಲಿಂದ, ಹೇಗೆ ಬಂತು, ಅದು ಅವರಿಗೆ ಸೇರಿದ್ದಾ ಇಲ್ಲವೇ ಎಂದು ಡಿಕೆಶಿ ದಾಖಲೆ ಕೊಡಬೇಕು. ಒಂದುವೇಳೆ ದಾಖಲೆಗಳನ್ನು ಕೊಟ್ಟರೆ, ಆ ಹಣಕ್ಕೆ ತಗಲುವಂತ ಆದಾಯ ತೆರಿಗೆಯನ್ನು ಕಟ್ಟಿದ್ದಾರೆಯೆ ಎಂದು ರುಜು ಮಾಡಬೇಕು. ತೆರಿಗೆ ಕಟ್ಟಿಲ್ಲವೆಂದರೆ ಐಟಿಯವರು ದಂಡ ಹಾಕಿ ಅಷ್ಟೂ ಹಣಕ್ಕೆ ಕಟ್ಟಬೇಕಾದ ತೆರಿಗೆಯನ್ನು ವಸೂಲು ಮಾಡಬೇಕು. ಒಂದು ವೇಳೆ ಅದು ಆಗಿಲ್ಲವೆಂದರೆ ಆ ನಂತರ ಎಫ್ಐಅರ್, ಕೇಸ್, ಕೋರ್ಟ್, ಬಂಧನ ಎಲ್ಲವೂ ಅಲ್ಲವೇ? ಇದು ತಾನೇ ಕಾನೂನಿನ ರೀತಿ?
ಕಾನೂನಿನ ಪರಿಧಿಯ ಹೊರಗೋಗಿ ಡಿಕೆಶಿಯನ್ನು ಬಂಧಿಸಿದ್ದರೆ, ಅದರಿಂದ ನಷ್ಟ ಇಡಿಯ ಹಿಂದಿರುವ ರಾಜಕೀಯ ಶಕ್ತಿಗಳದ್ದೇ ಹೊರತು ಡಿಕೆಶಿಯದ್ದಲ್ಲ. ಡಿಕೆಶಿಯ ವಿಷಯದಲ್ಲಿ ಕಾಂಗ್ರೇಸಿಗರಲ್ಲೇ, ಕಾಂಗ್ರೇಸಿನ ಅನೇಕ ಬೆಂಬಲಿಗರಲ್ಲೇ ಒಂದು ರೀತಿಯ ವಿಚಿತ್ರ ಭಾವನೆ ಇತ್ತು. ಅವರ ವಿಷಯದಲ್ಲಿ ಹೆಚ್ಚಿನವರು ಬೇಲಿ ಮೇಲೆ ಕುಳಿತಿರುವವರೇ. ಅವರನ್ನು ಸಂಪೂರ್ಣವಾಗಿ ಬೆಂಬಲಿಸಲೂ ಮುಂದೆ ಬರುತ್ತಿದ್ದಿಲ್ಲ, ಅವರನ್ನು ವಿರೋಧ ಕೂಡಾ ಮಾಡುತ್ತಿದ್ದಿಲ್ಲ. ಅವರನ್ನು ನೇರವಾಗಿ ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವ ಪರಿಸ್ಥಿತಿ. ಹಾಗಾಗಿಯೇ ಜನಪ್ರಿಯತೆ, ಹಣ ಬಲ, ತೋಳ್ಬಲ ಇದ್ದಾಗಲೂ ಡಿಕೆಶಿ ರಾಜ್ಯ ರಾಜಕಾರಣದಲ್ಲಿ ಒಂದು ಹಂತಕ್ಕಿಂತೆ ಮೇಲಕ್ಕೆ ಬೆಳೆಯಲಿಲ್ಲ. ಆದರೆ ಈವಾಗ ಅವರ ಬಂಧನದಿಂದ ಬೇಲಿ ಮೇಲೆ ಕುಂತ ಹೆಚ್ಚಿನವರು ನೇರವಾಗಿ ಅವರ ಪರವಾಗಿ ನಿಂತಿದ್ದಾರೆ. ಇದನ್ನು ಅನುಕಂಪ ಅನ್ನಿ ಇಲ್ಲ ಸಮಯಸಾಧಕತನ ಅಂದುಕೊಳ್ಳಿ. ಬಟ್ ಡಿಕೆಶಿಗೆ ಇದು ವರದಾನವಾಗಿ ಪರಿಣಮಿಸಿದೆ. ಅವರು ಇನ್ನೂ ಹೆಚ್ಚು ಜನಪ್ರಿಯರಾಗಿ ಹೊರಬರುತ್ತಾರೆ, ಪಕ್ಷದಲ್ಲಿ ಹಾಗೂ ರಾಜಕೀಯದಲ್ಲಿ ಅವರು ಇನ್ನೂ ಗಟ್ಟಿಯಾಗಿ ಬೆಳೆಯುತ್ತಾರೆ. ಇದುವರೆಗೂ ಅವರನ್ನು ನೇರವಾಗಿ ಸಮರ್ಥಿಸದವರೂ, ಈವಾಗ ಅವರ ಜೊತೆಗೂಡುತ್ತಾರೆ. ಇದಕ್ಕೆ ಅನುಕಂಪ ಹಾಗೂ ಜಾತಿಯ ಒಗ್ಗರಣೆ ಬಿದ್ದರಂತೂ ಹೇಳೋದೇ ಬೇಡ. ಡಿಕೆಶಿಯನ್ನು ಹಣಿಯಲು ಹೆಣೆದ ಬಲೆಯಲ್ಲೇ ಬೇಟೆಗಾರರೇ ಸಿಲುಕಿದಂತಿದೆ. ಯಾಕೋ ಡೆಲ್ಲಿ ದರ್ಬಾರಿನ ಗುಜರಾತಿ ಮಾಫೀಯಾಗಳ ಕ್ಯಾಲ್ಕುಲೇಷನ್ ಡಿಕೆಶಿ ವಿಷಯದಲ್ಲಿ ಕೈಕೊಟ್ಟ ಹಾಗಿದೆ. ಯಡಿಯೂರಪ್ಪ ಇದನ್ನು ಗ್ರಹಿಸಿಯಾಗಿದೆ. ಹಾಗಾಗಿಯೇ ಡಿಕೆಶಿಯ ಪರ ನಿಂತಿದ್ದಾರೆ. ಇಷ್ಟೂ ವರುಷಗಳ ಕಾಲ ಬಿಜೆಪಿ ಡಿಕೆಶಿಯನ್ನು ವಿಲನ್ನಾಗಿ ಬಿಂಬಿಸಲು ಮಾಡಿದ ಶ್ರಮವೆಲ್ಲಾ ವ್ಯರ್ಥವಾದಂತಿದೆ. ತಿರುಗುಬಾಣ…












