ದುಬೈ: ಸೆ.4- ಉದ್ಯೋಗ ಕ್ಷೇತ್ರದಲ್ಲಿ ಗಲ್ಫ್ ದೇಶಗಳು ಪ್ರಾರಂಭಿಸಿರುವ ಸ್ವದೇಶಿಕರಣವು ಭಾರತೀಯ ಉದ್ಯೋಗಿಗಳಲ್ಲಿ ತೀವ್ರ ಚಿಂತೆಯನ್ನು ತಂದೊಡ್ಡಿದೆ. ಈಗಾಗಲೇ ಸೌದಿ ಮತ್ತು ಒಮಾನ್ ಗಳು ಉದ್ಯೋಗ ಕ್ಷೇತ್ರದಲ್ಲಿ ಸ್ವದೇಶಿಕರಣವನ್ನು ಜಾರಿಗೆ ತಂದಿದ್ದು ಇದೀಗ ದುಬೈಯಲ್ಲಿ ಈ ಪ್ರಯೋಗ ಮಾಡುವ ಸೂಚನೆ ಲಭ್ಯವಾಗಿದೆ. ದುಬೈ ಯುವರಾಜ ಹಾಗೂ ಯುಎಇ ಉಪಾಧ್ಯಕ್ಷ ಶೇಕ್ ಹಮದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಮಾಹಿತಿ ಲಭ್ಯವಾಗಿದೆ.
ಉದ್ಯೋಗದ ಸ್ವದೇಶೀಕರಣವು 2018 ರಲ್ಲಿ 200% ಏರಿಸಲಾಗಿದ್ದು ಇದನ್ನು 2019 ರಲ್ಲಿ ದ್ವಿಗುಣಗೊಳಿಸಲಾಗುವುದು ಎಂದು ಮಕ್ತುಮ್ ಹೇಳಿದ್ದಾರೆ. ನಾವು ಏಳು ಸಾವಿರ ಮನೆಗಳನ್ನು ಸ್ವದೇಶಿಗಳಿಗೆ 2018 ರಲ್ಲಿ ವಿತರಿಸಿದ್ದು, ಪ್ರತಿ ಸ್ವದೇಶಿಗೂ ಸಾಮಾನ್ಯ ಮನೆ ಹೊಂದುವ ಸ್ಥಿತಿಯನ್ನು ನಾವು ತರಲಿದ್ದೇವೆ ಎಂದವರು ಹೇಳಿದ್ದಾರೆ.
ಸ್ವದೇಶಿಕರಣವು ಯುಎಇ ಸರಕಾರದ ಯೋಜನೆಯಾಗಿದ್ದು, ಉದ್ಯೋಗ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಖಾಸಗಿ ಕ್ಷೇತ್ರದಲ್ಲಿ ಎಮಿರಾಟಿ(ಪ್ರಜೆಗಳು)ಗಳಿಗೆ ಆದ್ಯತೆ ನೀಡುವುದು ಇದರ ಉದ್ದೇಶವಾಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಯುಎಇ ಪ್ರಜೆಗಳ ಸಂಖ್ಯೆಯನ್ನು ಹಾಗೂ ಆ ಮೂಲಕ ಆರ್ಥಿಕತೆಗೆ ಅವರ ದೇಣಿಗೆಯನ್ನು ಹೆಚ್ಚಿಸುವುದಕ್ಕೆ ಸ್ವದೇಶಿಕರಣ ಒತ್ತು ನೀಡಲಿದೆ.
ಸದ್ಯ UAE ಯಲ್ಲಿ 2 ಮಿಲಿಯನ್ ಭಾರತೀಯರು ಉದ್ಯೋಗದಲ್ಲಿದ್ದು, ದುಬೈ ಸ್ವದೇಶಿಕರಣವು ಭಾರತೀಯರ ಉದ್ಯೋಗದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ.












