ದ ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ

0
1522

ಸನ್ಮಾರ್ಗ ವಾರ್ತೆ-

ಮಂಗಳೂರು: ಸೆ. 6- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿರುವರೆಂದು ವರದಿಯಾಗಿದ್ದು, ಸುದ್ದಿಯು ಜಿಲ್ಲೆಯ ನಾಗರಿಕರಲ್ಲಿ ಆಘಾತವನ್ನು ಸೃಷಿಸಿದೆ. ಅಕ್ಟೊಬರ್ 19, 2017 ರಂದು ಅವರು ದ ಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಲೋಕಸಭಾ ಚುನಾವಣೆಯ ಸಮಯದಲ್ಲಿ ಹೆಚ್ಚಿನ ಜಿಲ್ಲಾಧಿಕಾರಿಗಳ ವರ್ಗಾವಣೆ ಆಗಿದ್ದರೂ ಸೆಂಥಿಲ್ ಅವರನ್ನು ಉಳಿಸಿಕೊಳ್ಳಲಾಗಿತ್ತು. ಅವರ ಉತ್ತಮ ಕಾರ್ಯನಿರ್ವಹಣೆಯೇ ಇದಕ್ಕೆ ಕಾರಣವಾಗಿತ್ತು.

ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ಸಸಿಕಾಂತ್ ಸೆಂಥಿಲ್ ಅವರಿಗೆ ವಿಶೇಷ ಕಾಳಜಿಯಿತ್ತು ಮತ್ತು ಅವರು ನಾಗರಿಕರ ಪ್ರೀತಿಗೂ ಪಾತ್ರರಾಗಿದ್ದರು. ಯಾವುದೇ ರಾಜಕೀಯ ವಿವಾದಕ್ಕೂ ಅವರು ತುತ್ತಾಗಿರಲಿಲ್ಲ. ಈಗಿನ ಅತಿವೃಷ್ಟಿ, ಪ್ರವಾಹ ರೀತಿಯ ಪರಿಸ್ಥಿತಿಯಲ್ಲಿ ಅವರು ಚುರುಕಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿತ್ತು.

ಸದ್ದುಗದ್ದಲವಿಲ್ಲದೆ, ನಾಗರಿಕರ ಸೇವೆಯಲ್ಲಿ ನಿರತರಾಗಿರುವ ಜಿಲ್ಲಾಧಿಕಾರಿ ಎಂದು ಅವರು ಕರೆಸಿಕೊಂಡಿದ್ದರು. ಇದೀಗ ಹೊಸ ಸರಕಾರ ಅಧಿಕಾರ ವಹಿಸಿಕೊಂಡ ತಿಂಗಳ ನಂತರ ಅವರು ದಿಢೀರ್ ರಾಜೀನಾಮೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜಿನಾಮೆಗೆ ಅವರು ವೈಯಕ್ತಿಕ ಕಾರಣವನ್ನು ನೀಡಿದ್ದರೂ ಆ ಬಗ್ಗೆ ನಾಗರಿಕರಲ್ಲಿ ಅನುಮಾನಗಳಂತೂ ವ್ಯಕ್ತವಾಗುತ್ತಿದೆ.